ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ನೆಲದಲ್ಲಿ ಬಂಗಾರದ ಕೃಷಿ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ನೂರಾಹತ್ತು ಲಿಂಬೆ, ಹದಿನೈದು ಮಾವು, ನಾನ್ನೂರು ಕರಿಬೇವು, ನಲವತ್ತು ಬೇವು, ತಲಾ ಐವತ್ತು ನುಗ್ಗೆ ಹಾಗೂ ಸೀತಾಫಲ, ಎಪ್ಪತ್ತು ಸಾಗವಾನಿ, ಅರುವತ್ತು ಬಿದಿರು, ಹದಿನೈದು ಹುಣಿಸೆ, ಏಳೆಂಟು ಪಪ್ಪಾಯಿ, ನಾಲ್ಕು ಗಜನಿಂಬೆ, ಸಾವಿರ ಸೂಬಾಬುಲ್ ಗಿಡಗಳು.

ಇವುಗಳೊಂದಿಗೆ ಒಂದು ಎಕರೆಯಲ್ಲಿ ಮೆಕ್ಕೆ ಜೋಳ ಹಾಗೂ ಗೋಧಿ, ಐದಾರು ಗುಂಟೆಯಲ್ಲಿ ತೊಗರಿ, ಈರುಳ್ಳಿ, ಮನೆಯ ಬಳಕೆಗೆ ಬೇಕಾಗುವ ಮೆಂತೆ ಸೊಪ್ಪು, ಕೊತ್ತಂಬರಿ, ಸೌತೆಕಾಯಿ, ಹೀರೆಕಾಯಿ, ಅವರೆ, ಬದನೆ. ಇದಲ್ಲದೆ ಒಂದು ವರ್ಷದಲ್ಲಿ ಸುಮಾರು ಒಂದು ಸಾವಿರ ಚೀಲಗಳಷ್ಟು ಎರೆಗೊಬ್ಬರ ಕೊಡುವ ನಲವತ್ತು ಎರೆತೊಟ್ಟಿಗಳು, ಪುಟ್ಟ ನರ್ಸರಿಯಲ್ಲಿ ಕರಿಬೇವು, ಸೀತಾಫಲ, ನುಗ್ಗೆ, ಪಪ್ಪಾಯಿ ಸಸಿಗಳು. ಬೆಳೆಗಳಿಗೆ ಅಗತ್ಯ ಬಿದ್ದಾಗ ನೀರುಣಿಸಲು ಒಂದು ಬಾವಿ. ಐದು ಎಮ್ಮೆ, ಎರಡು ಆಕಳು, ನಾಲ್ಕು ಕರು, ಎರಡು ಎತ್ತುಗಳಿರುವ ಕೊಟ್ಟಿಗೆ. ಸನಿಹದಲ್ಲೇ ಬೇಳೆ ಮಾಡುವ, ಶ್ಯಾವಿಗೆ ತಯಾರಿಸುವ, ಖಾರ ಕುಟ್ಟುವ ಯಂತ್ರಗಳು, ಸವಿಯಾದ ಜೇನು ನೀಡುವ ನೈಸರ್ಗಿಕ ಜೇನುಗೂಡುಗಳು, ಹಲವಾರು ಪಕ್ಷಿ ಸಂಕುಲಗಳು, ರೈತ ಸ್ನೇಹಿ ಕೀಟ ಹಾಗೂ ಸೂಕ್ಷ್ಮಜೀವಿಗಳು...

ಇದೇನು ಇಷ್ಟು ದೊಡ್ಡ ಪಟ್ಟಿ ಎನ್ನುತ್ತೀರಾ? ಗುಲ್ಬರ್ಗ ಜಿಲ್ಲೆ ಅಫಜಲಪೂರ ತಾಲ್ಲೂಕಿನ ಗರೂರ ಗ್ರಾಮದ ಶ್ಯಾಮರಾವ ಪಾಟೀಲ ಹಾಗೂ ಲಕ್ಷ್ಮಿಬಾಯಿ ದಂಪತಿಯ ತೋಟದಲ್ಲಿ ಇವೆಲ್ಲವನ್ನು ನೋಡಬಹುದು. ಇದೆಲ್ಲ ಯಾರ ತೋಟದಲ್ಲೂ ಇರಬಹುದು. ಆದರೆ ವಿಶೇಷ ಅದಲ್ಲ. ಇಷ್ಟೂ ಇರುವುದು ಕೇವಲ ನಾಲ್ಕು ಎಕರೆ ಪ್ರದೇಶದಲ್ಲಿ ಎಂಬುದು ಯಾರಿಗಾದರೂ ಅಚ್ಚರಿ ಮೂಡಿಸುವ ಸಂಗತಿ.

ಹೌದು. ಕಳೆದ 15 ವರ್ಷಗಳಿಂದ ಶ್ಯಾಮರಾವ್ ದಂಪತಿಗಳು ಇಂಥ ಮಿಶ್ರ ಬೇಸಾಯದ, ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಿಕೊಂಡು, ಶ್ರೀಮಂತ ಮತ್ತು ಆರೋಗ್ಯಯುತ ಕೃಷಿ ಬಾಳನ್ನು ಅನುಭವಿಸುತ್ತಿದ್ದಾರೆ.

ಒಣ ಭೂಮಿ ಇದ್ದ ಕಡೆ ನಾಲ್ಕು ಎಕರೆಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರ ಸಂಖ್ಯೆಯೇ ಜಾಸ್ತಿ. ಆದರೆ ಇಷ್ಟೇ ಜಮೀನಿನಲ್ಲಿ ಶಿಸ್ತುಬದ್ಧ, ಸಮಯಬದ್ಧ ಕೃಷಿ ಮಾಡಿದರೆ, ಒಬ್ಬ ಸರ್ಕಾರಿ ಅಧಿಕಾರಿಯ ವಾರ್ಷಿಕ ಆದಾಯದಷ್ಟೇ ದುಡ್ಡನ್ನು ಗಳಿಸಬಹುದು ಎಂಬುದನ್ನು ಈ ದಂಪತಿಗಳು ತೋರಿಸಿಕೊಟ್ಟಿದ್ದಾರೆ.

ಫಲವತ್ತಲ್ಲದ ಗರಸು (ಗೊರಚು), ಹಾಳು ಮಣ್ಣುಗಳೇ ತುಂಬಿಕೊಂಡಿದ್ದ ಬರಡು ಜಮೀನಿಗೆ ನಿರಂತರವಾಗಿ ತಿಪ್ಪೆಗೊಬ್ಬರ, ಎರೆಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಕೊಟ್ಟು ಅದರ ಫಲವತ್ತತೆ ಹೆಚ್ಚಿಸಿದ್ದಾರೆ.
 
ಹೀಗಾಗಿ ಅವರಿಗೆ ನಿರಂತರವಾಗಿ, ಯಾವುದೇ ಏರಿಳಿತಗಳಿಲ್ಲದೇ ಬರಬೇಕಾದ ಇಳುವರಿ ಬರುತ್ತದೆ. ಬರೀ ಎರೆಗೊಬ್ಬರ ಮಾರಾಟದಿಂದಲೇ ವರ್ಷಕ್ಕೆ ಎರಡು ಲಕ್ಷ ರೂಪಾಯಿ ಆದಾಯವಿದೆ. ಲಿಂಬೆ ಹಣ್ಣು ಒಂದು ಲಕ್ಷ ರೂಪಾಯಿ ಸಂಪಾದನೆ ತಂದು ಕೊಡುತ್ತದೆ. ಈರುಳ್ಳಿಯಿಂದ ಸುಮಾರು 50 ಸಾವಿರ ರೂ ಬರುತ್ತದೆ. ಕರಿಬೇವಿನ ಮಾರಾಟದಿಂದ ಇಪ್ಪತ್ತು ಸಾವಿರ ರೂಪಾಯಿಗೆ ಕಡಿಮೆ ಇಲ್ಲ.
 
ಹುಣಿಸೆ, ಸೀತಾಫಲ, ನುಗ್ಗೆ, ಮಾವುಗಳಿಂದ ಸುಮಾರು 15- 20 ಸಾವಿರ, ಸಸಿಗಳ ಮಾರಾಟದಿಂದ ಹತ್ತು ಸಾವಿರ ರೂ ಗಳಿಕೆಯಿದೆ. ಹನ್ನೆರಡು ಚೀಲ ಮೆಕ್ಕೇಜೋಳ, ಎರಡು ಚೀಲ ತೊಗರಿ, ಎಂಟು-ಹತ್ತು ಚೀಲ ಗೋಧಿ ಆರಾಮಾಗಿ ಬರುತ್ತವೆ.

ಹೊಲದ ಬದುಗಳಿಗೆ ಹಚ್ಚಿರುವ ಸಾಗವಾನಿ ಗಿಡಗಳ ಸದ್ಯದ ಅಂದಾಜು ಬೆಲೆ ಅವರು ಹೇಳುವಂತೆ ಏಳು ಲಕ್ಷ ರೂಪಾಯಿಗಳು. ಬೇವಿನ ಬೀಜದಿಂದ ಕಷಾಯ ತಯಾರಿಸಿ, ಸಸ್ಯ ಸಂರಕ್ಷಣೆ ಮಾಡಿಕೊಳ್ಳುತ್ತಾರೆ. ನಿತ್ಯ ಹಸಿರಾಗಿರುವ ಸೂಬಾಬುಲ್ ಗಿಡಗಳು ಮಣ್ಣು, ನೀರಿನ ಸಂರಕ್ಷಣೆ ಮಾಡುತ್ತವೆ. ಅದರ ಬೇರುಗಳು ಮಣ್ಣಿನಲ್ಲಿ ಸಾರಜನಕ ಹಿಡಿದಿಡುತ್ತವೆ. ಅದರ ಸೊಪ್ಪು ಒಳ್ಳೆಯ ಹಸಿರು ಗೊಬ್ಬರ, ಅಲ್ಲದೆ ದನಗಳಿಗೆ ಮೇವು.

ಲಕ್ಷ್ಮೀಬಾಯಿ ಪಾಟೀಲರಂತೂ ಸದಾ ಕ್ರಿಯಾಶೀಲೆ. ಹೊಲ-ಮನೆಗೆಲಸ ಮಾಡಿಯೂ ಉಳಿಯುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಬೇಳೆ, ಶ್ಯಾವಿಗೆ ಮಾಡುವ, ಖಾರ ಕುಟ್ಟುವ ಯಂತ್ರಗಳನ್ನು ತೋಟದ ಮನೆಯಲ್ಲಿ ಸ್ಥಾಪಿಸಿಕೊಂಡಿದ್ದಾರೆ.
 
ಕೃಷಿ ಇಲಾಖೆ ಈ ಬಾಬತ್ತಿನಲ್ಲಿ ಇವರಿಗೆ ತುಂಬಾ ಸಹಾಯ ಮಾಡಿದೆ ಎಂದು ಹೇಳಬೇಕು. ಸುತ್ತಮುತ್ತಲ ಮಿಣಜಗಿ, ಬಿದನೂರ, ಹಾವನೂರ ಮುಂತಾದ ಗ್ರಾಮಗಳಿಂದ ತೊಗರಿ ಬೇಳೆ ಮಾಡಿಸಿಕೊಂಡು ಹೋಗಲು ರೈತರು ಬರುತ್ತಾರೆ.

ಎಮ್ಮೆ, ಆಕಳುಗಳಿಂದ ದಿನಕ್ಕೆ  ಸುಮಾರು ಹತ್ತು ಲೀಟರ್ ಹಾಲು ಬರುತ್ತದೆ. ಮನೆ ಬಳಕೆಗೆ ಸ್ವಲ್ಪ ಇಟ್ಟುಕೊಂಡು ಉಳಿದದ್ದನ್ನು ನೆರೆ-ಹೊರೆಯಲ್ಲಿ ಮಾರಾಟ ಮಾಡುತ್ತಾರೆ. ಕರುಗಳ ಮಾರಾಟದಿಂದ ಒಂದು ವರ್ಷದಲ್ಲಿ ಸುಮಾರು 40 ಸಾವಿರ ರೂಪಾಯಿ ಬರುತ್ತದೆ. ಲಿಂಬೆ ಗಿಡಗಳಲ್ಲಿ ಕಟ್ಟುವ ಮರಿಜೇನುಗಳಿಂದ ಏನಿಲ್ಲೆಂದರೂ ಹತ್ತು ಕಿಲೋದಷ್ಟು ಜೇನುತುಪ್ಪ ಸಿಗುತ್ತದೆ.

ಒಟ್ಟಿನಲ್ಲಿ ಇಂಥ ಸುಸ್ಥಿರ ಬೇಸಾಯ ಅನುಸರಿಸುವುದರಿಂದ ಅವರಿಗೆ ವಾರ್ಷಿಕ ಸುಮಾರು ನಾಲ್ಕು ಲಕ್ಷ ರೂಪಾಯಿ ಆದಾಯಕ್ಕೇನೂ ಕೊರತೆಯಿಲ್ಲ. ಮೇಲಾಗಿ ಸ್ವತಂತ್ರವಾದ, ಆರೋಗ್ಯಪೂರ್ಣವಾದ, ಆನಂದದ ಬಾಳು. ಅವರ ಸಾಧನೆಗಾಗಿ ಕೃಷಿ ಇಲಾಖೆ  `ಕೃಷಿ ಪಂಡಿತ~ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡ ಕೃಷಿ ವಿವಿ ಈ ದಂಪತಿಗೆ `ಶ್ರೇಷ್ಠ ಕೃಷಿಕ  ಹಾಗೂ  ಶ್ರೇಷ್ಠ ಕೃಷಿಕ ಮಹಿಳೆ~ ಪ್ರಶಸ್ತಿ ಕೊಟ್ಟು ಪುರಸ್ಕರಿಸಿದೆ.

ವ್ಯವಸಾಯದ ಬದುಕಿನಲ್ಲಿ ತಮ್ಮ ಈ ಸಾಧನೆಗಾಗಿ ನೆರವಾದ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಮಾರ್ಗದರ್ಶನವನ್ನು ಸದಾ ನೆನಪಿಸಿಕೊಳ್ಳುವ ದೊಡ್ಡತನ ಇವರದ್ದು. ಪಾಟೀಲರ (ಮೊಬೈಲ್ 99028 37727) ತೋಟವನ್ನು ಹೊಕ್ಕರೆ  ಜೀವ ವೈವಿಧ್ಯದಿಂದ ತುಂಬಿ ತುಳುಕುವ ಅರಣ್ಯದಲ್ಲಿದ್ದ ಅನುಭವ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT