ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡೋಲದ ಮಲ್ಲಿಕಾರ್ಜುನಸ್ವಾಮಿ ಜಾತ್ರೆ 8ರಿಂದ

Last Updated 5 ಡಿಸೆಂಬರ್ 2013, 7:54 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಬರಡೋಲ ಗ್ರಾಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಯುಳ್ಳ ಗ್ರಾಮ. ಈ ಗ್ರಾಮದಲ್ಲಿ ಬರುವ 7,8 ಮತ್ತು 9 ರಂದು ಸತತ 3 ದಿವಸ ಗಳ ಕಾಲ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಅತಿ ವಿಜೃಂಭಣೆಯಿಂದ ಆಚರಿಸ ಲಾಗುತ್ತದೆ.

ದೇವಸ್ಥಾನದ ಹಿನ್ನೆಲೆ: ಸುಮಾರು ಶತಮಾನಗಳ ಹಿಂದೆ ಬರಡೋಲಕ್ಕೆ ರತ್ನಪುರ ಎಂಬ ಹೆಸರಿತ್ತು ಎನ್ನುವುದು ಪ್ರತೀತಿ. ಈ ರತ್ನಪುರದ ಸಂತೆಯಲ್ಲಿ ಆನೆ, ಕುದುರೆ, ಒಂಟಿಗಳ ವ್ಯಾಪಾರ ನಡೆಯುತ್ತಿತ್ತು.

ಆ ವೇಳೆಯಲ್ಲಿ ಈ ಪುಟ್ಟ ಗ್ರಾಮ ಸಂಪದ್ಭರಿತವಾಗಿತ್ತು. ರಾಮಲಿಂಗೇಶ್ವ ರನು ಈ ರತ್ನಪುರ ಗ್ರಾಮದ ಆರಾಧ್ಯ ದೈವನಾಗಿದ್ದನು. ಕಾಲಕ್ರಮೇಣ ಈ ರತ್ನಪುರದಲ್ಲಿ ಮಹಾಮಾರಿ ರೋಗ ವೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಜನರೆಲ್ಲ ಊರು ಬಿಟ್ಟು ಗುಳೆ ಹೋದರು.

ಆದರೆ ಬಿದಿರು ಮಾರಾಟ ಮಾಡುವ ಜನಸಮೂಹ ಮಾತ್ರ ಇಲ್ಲಿಯೇ ಉಳಿದುಕೊಂಡರು. ಅವರಿಗೆ ‘ಬುಡ್ರು‘ ಎಂದು ಕರೆಯುತ್ತಿದ್ದರು. ಈ ಬುಡ್ರು ವಾಸಿಸುವ ಗ್ರಾಮವೇ ಬಡ್ಡೂರಾಗಿ ಮುಂದೆ ಇದೇ ಬರಡೋಲ ಗ್ರಾಮವಾಗಿ ಬೆಳೆದಿದೆ.

ಬರಡೋಲ ಗ್ರಾಮದಲ್ಲಿ ಗಂಗಾಧರ ಕಂಠೀಕಾರ ಎಂಬ ಜಂಗಮರ ಮನೆ ಯೊಂದಿತ್ತು. ಅವರು ಮಲ್ಲಿಕಾರ್ಜುನ ದೇವರ ಭಕ್ತರು. ಪ್ರತೀ ವರ್ಷ ಕಾಲ್ನಡಿಗೆ ಯಿಂದ ಶ್ರೀಶೈಲಕ್ಕೆ ತೆರಳಿ ಶ್ರೀ ಮಲ್ಲಿಕಾ ರ್ಜುನ ದೇವರ ದರ್ಶನ ಪಡೆಯು ತ್ತಿದ್ದರು.


ಕಡು ಬಡವರಾದ ಇವರು ಎಷ್ಟೇ ಕಷ್ಟ ಬಂದರೂ ಮಲ್ಲಿಕಾರ್ಜುನನ ಪೂಜೆ ಮಾತ್ರ ತಪ್ಪಿಸುತ್ತಿರಲಿಲ್ಲ. ಒಂದು ಸಲ ಊದು ಬತ್ತಿಗೆ ಹಣವಿಲ್ಲದಿದ್ದಾಗ ತನ್ನ ಕೈಯಲ್ಲಿದ್ದ ಹೊನ್ನುಂಗುರದ ಅರ್ಧ ಬೇರನ್ನೇ ಊದುಬತ್ತಿಯಾಗಿ ಬಳಸಿ ದರು. ಇನ್ನರ್ಧ ತನ್ನ ಜೋಳಿಗೆಯಲ್ಲಿಟ್ಟು ಕೊಂಡು ಶ್ರೀಶೈಲದಿಂದ ಬರಡೋಲಕ್ಕೆ ಪ್ರಯಾಣ ಬೆಳೆಸಿದರು.

ಪ್ರಯಾಣ ಬೆಳೆಸಿದಂತೆ ಜೋಳಿಗೆ ಯಲ್ಲಿದ್ದ ಹೊನ್ನುಂಗುರದ ಬೇರು ಬೆಳೆ ಯತೊಡಗಿತು. ಒಂದು ದಿನ ಕನಸಿನಲ್ಲಿ ಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ಜೋಳಿಗೆ ಯಲ್ಲಿದ್ದ ಹೊನ್ನುಂಗುರದ ಬೇರು ಹೊರಗೆ ತೆಗೆಯಬೇಡ ಎಂದು ಹೇಳಿದಂತಾಯಿತು.

ಅದನ್ನು ಪಾಲಿಸುತ್ತ ಬರಡೋಲ ಸಮೀಪದಲ್ಲಿಯೇ ಬಂದು ಒಂದು ತೋಟದಲ್ಲಿ ಮಲಗಿದರು. ಬೆಳಿಗ್ಗೆ ಎದ್ದು ಸ್ನಾನ ಮಾಡಲು ಬಾವಿಯಲ್ಲಿ ಇಳಿಯು ವಷ್ಟರಲ್ಲಿ ಅಲ್ಲಿಗೆ ಬಂದ ಗ್ರಾಮದ ಮಾಲಿಗೌಡರು ಜೋಳಿಗೆಯಲ್ಲಿದ್ದ ಹೊನ್ನುಂಗುರ ಬೆಳೆದು ಬೆತ್ತವಾಗಿದ್ದನ್ನು ಕಂಡು ಅದನ್ನು ಬೇಡಿದರು. ಗಂಗಾಧರ ನಿರಾಕರಿಸಿದರು. ಆಗ ಮಾಲಿಗೌಡ ಸಿಟ್ಟಿಗೆದ್ದು ಕಸಿದುಕೊಳ್ಳಲು ಮುಂದಾ ದಾಗ ಗಂಗಾಧರ ಅದನ್ನು ಬಾವಿಯಲ್ಲಿ ಎಸೆದರಂತೆ. ಬಾವಿಯಲ್ಲಿ ಬಿದ್ದ ಆ ಬೆತ್ತ ಹಾವಾಗಿ ಹರಿದಾಡಿತು.

ಇದನ್ನು ಕಣ್ಣಾರೆ ಕಂಡ ಮಾಲಿಗೌಡ ಗಂಗಾಧರರ ಮೇಲೆ ಸಿಟ್ಟಾಗಿ ಗ್ರಾಮಕ್ಕೆ ಬಂದು ಗ್ರಾಮದಲ್ಲಿದ್ದ ರಾಜನಿಗೆ ನಮ್ಮೂರಲ್ಲೊಬ್ಬ ಹಾವಾಡಿಗ ಬಂದಿ ದ್ದಾನೆ. ಆ ಹಾವಿನಿಂದ ಅಮಾಯಕರನ್ನು ಪೀಡಿಸುತ್ತಿದ್ದಾನೆ. ಅವನನ್ನು ಜೈಲಿಗೆ ಅಟ್ಟಬೇಕು ಎಂದು ಮನವಿ ಮಾಡಿಕೊಂಡನಂತೆ. ಅವನ ಮಾತು ನಂಬಿದ ರಾಜ ಗಂಗಾಧರನನ್ನು ಬಂಧಿಸಿ ಬಿಟ್ಟರು. ಗಂಗಾಧರನ ಬಂಧನವಾದ 3 ದಿವಸಗಳಲ್ಲಿಯೇ ರಾಜ ಕೆಟ್ಟದಾದ ಒಂದು ಕನಸು ಕಂಡನಂತೆ. ಇದರಿಂದ ಗಾಬರಿಯಾದ ಅವನು ಗಂಗಾಧರ ಸ್ವಾಮಿಯನ್ನು ಬಂಧಿಸಿರುವುದರಿಂದಲೇ ಹೀಗೆ ಆಗಿರಬೇಕು ಎಂದು ನಂಬಿ ಅವನ ಬಳಿಗೆ ಬಂದು ನಮಸ್ಕರಿಸಿ ತಮ್ಮ ತಪ್ಪನ್ನು ಮನ್ನಿಸಬೇಕೆಂದು ಬೇಡಿಕೊಂಡು ಅವರನ್ನು ಬಂಧಮುಕ್ತರನ್ನಾಗಿ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಅಂದಿನಿಂದ ಇಂದಿನವರೆಗೆ ಅವರ ಜೋಳಿಗೆಯಲ್ಲಿದ್ದ ಹೊನ್ನುಂಗುರದ ಬೇರನ್ನೇ ನಂದಿಕೋಲನ್ನಾಗಿ ಮಾಡಿ 3 ಅಂಕಣದ ಕೊಠಡಿಯಲ್ಲಿ ಅದನ್ನು ಇಟ್ಟರು.

ಜಾತ್ರೆಯ ಸಂದರ್ಭದಲ್ಲಿ ಮಾತ್ರ ಆ ನಂದಿಕೋಲು ಹೊರಗೆ ತರಲಾಗುತ್ತಿದೆ. ನಂದಿಕೋಲ ಹೊರಗೆ ಬಂದಾಗ ಉದ್ದ ವಾಗಿ ಕಾಣಿಸುವುದು. ಕೊಠಡಿಯಲ್ಲಿ ಇಡುವಾಗ ಚಿಕ್ಕದಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ನಂದಿಕೋಲ ಮೆರವಣಿಗೆಯು ವಿಜೃಂಭಣೆಯಿಂದ ಜರುಗುತ್ತದೆ. ಇದನ್ನು ನೋಡಲು ಭಕ್ತರು ಮುಗಿಬೀಳುತ್ತಾರೆ.

7 ರಂದು ಬೆಳಿಗ್ಗೆ 6 ಗಂಟೆಗೆ ಮಲ್ಲಿಕಾರ್ಜುನ ದೇವರ ನಂದಿಕೋಲಿಗೆ ಪಂಚಾಮೃತ, ಗ್ರಾಮ ದೇವತೆಗಳಿಗೆ ಅಭಿಷೇಕ, 4 ಗಂಟೆಗೆ ದೇವರಿಗೆ ಅಲಂಕಾರ ಮಾಡುವದು. ಕೋಲಾಟ ಜರುಗಲಿದೆ. ರಾತ್ರಿ ಸರಿಯಾಗಿ 12 ಗಂಟೆಗೆ ನಂದಿಕೋಲ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಗ್ರಾಮದ ಹೊರಗಿರುವ ದೇವರ ಪಾದಗಟ್ಟೆ ತಲುಪಿ ಅಲ್ಲಿಯೇ ತಂಗುವದು. ಈ ಸಂದರ್ಭದಲ್ಲಿ ಚಿತ್ರ ವಿಚಿತ್ರ ಮದ್ದು ಸುಡಲಾಗುವದು.

8 ರಂದು ಬೆಳಿಗ್ಗೆ 6 ಗಂಟೆಗೆ ಪಾದ ಗಟ್ಟೆಯಿಂದ ನಂದಿಕೋಲು ಮೆರವಣಿಗೆ ಮೂಲಕ ಮಲ್ಲಿಕಾರ್ಜುನ ಗುಡಿಗೆ ತರಲಾಗುವದು. ಅಂದೇ ಗ್ರಾಮದಲ್ಲಿ ರುವ ‘ಮಸ್ಜೀದ್‌‘ ದೇವರ ಜಾತ್ರೆ ನಡೆಯುತ್ತದೆ.

ಆ ದಿವಸ ಖೇಡಗಿ ಗ್ರಾಮದ ಬಾಗಣ್ಣ ಜಮಾದಾರ ಗಣಿಹಾರದ ರೇಣುಕಾ ಬಾಯಿ ಮಾದರ ಇವರಿಂದ ಲಾವಣಿ ಪದಗಳು ಜರುಗಲಿವೆ. 9 ರಂದು ಸಾಯಂಕಾಲ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿಗಳು, ರಾತ್ರಿ 10 ಗಂಟೆಗೆ ‘ಭೂಮಿ ತೂಕದ ತಾಯಿ‘ ಎಂಬ ಸಾಮಾಜಿಕ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಗುರು ಪುಟ್ಟರಾಜ ನಾಟ್ಯ ಸಂಘ ಬಾಗಲ ಕೋಟೆ ಅವರು ನಡೆಸಿಕೊಡಲಿದ್ದಾರೆ ಎಂದು ಮಲ್ಲಿಕಾರ್ಜುನ ಜಾತ್ರಾ ಸಮಿತಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT