ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಛಾಯೆ; ರೈತರಲ್ಲಿ ಹೆಚ್ಚಿದ ಆತಂಕ

Last Updated 12 ಜುಲೈ 2012, 8:45 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪ್ರತಿನಿತ್ಯವೂ ಮೋಡ ಕವಿದ ವಾತಾವರಣ, ಜೋರಾಗಿ ಬೀಸುವ ಗಾಳಿ, ಆಗಾಗ್ಗೆ ಸುರಿಯುವ ತುಂತುರು ಮಳೆ. ಇನ್ನು ಶೇಖರಿಸಲಾಗಿರುವ ಬಿತ್ತನೆ ಬೀಜಗಳು ಇಲಿ-ಹೆಗ್ಗಣಗಳ ಪಾಳು.  ಇದು ತ್ಲ್ಲಾಲೂಕಿನ ಸದ್ಯದ ಪರಿಸ್ಥಿತಿ.

ಮುಂಗಾರು ಆರಂಭವಾಗಿ ಎರಡು ತಿಂಗಳಾದರೂ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ. ಬೀಜ ಬಿತ್ತನೆ ಕಾರ್ಯ ಇನ್ನೂ ಬಿರುಸು ಪಡೆದಿಲ್ಲ. ಇನ್ನೂ ಕೆಲ ಕಡೆ ರೈತರು ಬಿತ್ತನೆ ಬೀಜಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.

`ಮಳೆ ಬಾರದಿದ್ದರೆ, ನಾವು ಬೆಳೆಯೋದು ಏನು ? ಬದುಕುವುದು ಹೇಗೆ ?~ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನದಿ ಮತ್ತು ನೀರಾವರಿ ಸೌಲಭ್ಯವಿಲ್ಲದ ಬಹುತೇಕ ರೈತರು ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ.

ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿಗಳು ಸಹ ಬತ್ತುತ್ತಿದ್ದು, ರೈತರನ್ನು ಕಂಗಾಲು ಆಗಿಸಿದೆ. ಮಳೆಯನ್ನೇ ನೆಚ್ಚಿಕೊಂಡು ಹೊಲ, ಗದ್ದೆಗಳನ್ನು ಹದ ಮಾಡಿಕೊಳ್ಳುತ್ತಿರುವ ರೈತರು ಬೇಸರದಿಂದಲೇ ಕಾಲ ದೂಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಜುಲೈ 7ರ ಅಂತ್ಯಕ್ಕೆ ಸರಾಸರಿ 245 ಮೀ.ಮೀ. ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ 8 ದಿನಗಳಿಂದ ಸರಾಸರಿ 121.4 ಮೀ.ಮೀ. ಮಳೆಯಾಗಿದೆ. ತಾಲ್ಲೂಕಿನ ಸಾಮಾನ್ಯ ಮಳೆಗೆ ಹೋಲಿಸಿದರೆ ಸರಾಸರಿ 123.6 ಮೀ.ಮೀ. ಮಳೆ ಕೊರತೆಯಿದೆ. ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 101 ಮೀ.ಮೀ., ಪಾತಪಾಳ್ಯದಲ್ಲಿ 140.8 ಮೀ.ಮೀ, ಚೇಳೂರಿನಲ್ಲಿ 150.2 ಮೀ.ಮೀ., ಗೂಳೂರಿನಲ್ಲಿ 101 ಮೀ.ಮೀ. ಮತ್ತು ಮಿಟ್ಟೇಮರಿನಲ್ಲಿ 114 ಮೀ.ಮೀ ಮಳೆ ಯಾಗಿದೆ. 

ತಾಲ್ಲೂಕಿನಲ್ಲಿ ಮುಂಗಾರು ಹಂಗಾ ಮಿನಲ್ಲಿ ಏಕದಳ ಧಾನ್ಯಗಳಾದ ಬತ್ತ, ರಾಗಿ, ಮುಸುಕಿನಜೋಳ ಮತ್ತು ತೃಣಮೂಲ ಧಾನ್ಯ ಗಳನ್ನು 14,070 ಹೆಕ್ಟರ್‌ಗಳಲ್ಲಿ ಬೆಳೆಸುವ ಗುರಿಯಿದೆ. ಆದರೆ ಈವರೆಗೆ 650 ಹೆಕ್ಟರ್‌ಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ತೂಗರಿ, ಅವರೆ, ಹುರುಳಿ, ಹೆಸರು, ಅಲಸಂದಿ ಅಂತಹ ದ್ವಿದಳ ಧಾನ್ಯಗಳನ್ನು 4,620 ಹೆಕ್ಟರ್‌ಗಳಲ್ಲಿ ಬೆಳೆಯುವ ಗುರಿಯಿದೆ. ಆದರೆ ಈವರೆಗೆ 11 ಹೆಕ್ಟರ್‌ಗಳಲ್ಲಿ ಮಾತ್ರ ಬಿತ್ತನೆಯಾಗಿದೆ.

ನೆಲಗಡಲೆ, ಸೂರ್ಯಕಾಂತಿ, ಹುಚ್ಚೆಳ್ಳು, ಎಳ್ಳು, ಹರಳು, ಸಾಸುವೆ ಅಂತಹ ಎಣ್ಣೆಕಾಳುಗಳನ್ನು 14,155 ಹೆಕ್ಟರ್‌ಗಳಲ್ಲಿ ಬೆಳೆಯುವ ಗುರಿಯಿದೆ. ಆದರೆ 456 ಹೆಕ್ಟರ್‌ಗಳಲ್ಲಿ ಮಾತ್ರ ಬಿತ್ತನೆಯಾಗಿದೆ.

ರಸಗೊಬ್ಬರ ದಾಸ್ತಾನು ವಿವರ: ಕೃಷಿ ಇಲಾಖೆಯಲ್ಲಿ ಸದ್ಯಕ್ಕೆ ಬತ್ತ-317.25 ಮೆಟ್ರಿಕ್ ಟನ್, ರಾಗಿ 33.3, ಮುಸಕಿನಜೋಳ-706.5, ಅಲಸಂದಿ-1.8, ತೊಗರಿ-117, ನೆಲಗಡಲೆ-257.4 ಮೆಟ್ರಿಕ್ ಟನ್‌ಗಳಷ್ಟು ಶೇಖರಿಸಡಲಾಗಿದೆ. ಇದುವರಿಗೂ ಬತ್ತ-178.75 ಮೆಟ್ರಿಕ್ ಟನ್, ರಾಗಿ-10.5, ಮುಸಕಿನಜೋಳ-407.1, ಅಲಸಂದಿ-1.8, ತೊಗರಿ-72.15, ನೆಲಗಡಲೆ- 159.3 ಮೆಟ್ರಿಕ್‌ಟನ್ ಮಾರಾಟ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಯೊಬ್ಬರು ಹೇಳಿದರು.

`ಆಷಾಡದ ವೇಳೆಗೆ ಬಿತ್ತನೆ ಕಾರ್ಯ ಮುಗಿಯಬೇಕಿತ್ತು. ತುಂತುರು ಮಳೆ ಬದಲು ದೀರ್ಘ ಮಳೆಯಾಗಬೇಕು. ಶಾಸಕರು, ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಬೇಕು. ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಬೇಕು ತಿಳಿಸಿದರು.

`ಜುಲೈ ತಿಂಗಳು ಆರಂಭಗೊಂಡರೂ ಮಳೆಯನ್ನೇ ಕಾಣದ ಕೃಷಿ ಜಮೀನಿನಲ್ಲಿ ಕಳೆ-ಮುಳ್ಳು ಗಿಡಗಳು ಬೆಳೆದಿವೆ.ಅಸಮರ್ಪಕ ಲೋಡ್‌ಶೆಡ್ಡಿಂಗ್‌ನಿಂದ ವಿದ್ಯುತ್ ಸಮಸ್ಯೆ ಇನ್ನಷ್ಟು ಉದ್ಭವಿಸಿದೆ. ಕೊಳವೆಬಾವಿಗಳು ಬತ್ತಿಹೋಗಿದ್ದು, ಕೃಷಿ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಬಿತ್ತನೆ ಬೀಜಕ್ಕಾಗಿ ಮತ್ತು ರಸಗೊಬ್ಬರಕ್ಕಾಗಿ ಈ ಹಿಂದೆ ಮಾಡಿದ್ದ ಸಾಲವನ್ನೇ ತೀರಿಸಲಾಗಿಲ್ಲ. ಮಳೆ ಬಂದರೆ ಮತ್ತೆ ಹೊಸದಾಗಿ ಸಾಲ ಮಾಡಬೇಕು. ಮಳೆ ಬಾರದಿದ್ದರೆ, ಸಾಲ ತೀರಿಸಲಾಗದೇ ನೇಣು ಬಿಗಿದುಕೊಂಡು ಸಾಯಬೇಕಾದಂತಹ ಪರಿಸ್ಥಿತಿಯಿದೆ~ ಎಂದು ಹೊಸಹುಡ್ಯ ಗ್ರಾಮದ ರೈತ ನಾರಾಯಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
-ಪಿ.ಎಸ್.ರಾಜೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT