ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲೂ ಮೆಚ್ಚುಗೆ ಪಾಲಿಥಿನ್ ಮುಚ್ಚುಗೆ

Last Updated 4 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಈಗ ಎಲ್ಲೆಲ್ಲೂ ಬರದ ಮಾತು. ಎಲ್ಲೆಡೆ ನೀರಿನ ಕೊರತೆ. ಪರಿಣಾಮ, ಕೃಷಿ ಚಟುವಟಿಕೆಗಳಲ್ಲಿ ಕುಂಠಿತ. ರೈತ ಆಗಸದತ್ತ ಮುಖ ಮಾಡಿ ಮಳೆಯ ನಿರೀಕ್ಷೆಯಲ್ಲಿ ಇರಬೇಕಾದ ಪರಿಸ್ಥಿತಿ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಲ ಕ್ಷಾಮವನ್ನು ಎದುರಿಸಿ ಕಡಿಮೆ ನೀರಿನಲ್ಲಿಯೇ ಹೆಚ್ಚು ಪ್ರಯೋಜನ ಪಡೆದುಕೊಳ್ಳುವ ರೈತನೇ ಜಾಣ. ಬರದ ಸಂದರ್ಭದ್ಲ್ಲಲೂ ರೈತನ ಕೈಹಿಡಿಯುವ ಸಾಮಗ್ರಿ ಎಂದರೆ ಪಾಲಿಥಿನ್ ಮುಚ್ಚುಗೆ. ಚೀನಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಜನಪ್ರಿಯವಾದ ಈ ಪದ್ಧತಿ ಭಾರತದಲ್ಲೂ ಬಳಕೆ ಮಾಡಬಹುದು ಎಂದು ಇದೀಗ ದೃಢಪಟ್ಟಿದೆ.  ನೆಲಗಡಲೆ, ಟೊಮೆಟೊ, ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಚೆಂಡು ಹೂ, ಕಲ್ಲಂಗಡಿ ಮುಂತಾದ ಬೆಳೆಗಳಿಗೆ ಪಾಲಿಥಿನ್ ಮುಚ್ಚುಗೆ ಸೂಕ್ತ ಹಾಗೂ ಲಾಭದಾಯಕವೆಂದು ಕಂಡು ಬಂದಿದೆ.

ಮುಚ್ಚುಗೆಯ ಪ್ರಯೋಜನ

ಜಲ ಸಂರಕ್ಷಣೆ: ಪ್ಲಾಸ್ಟಿಕ್ ಹಾಳೆ ನೀರು ಆವಿಯಾಗುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಹಾಳೆಯ ಮೇಲೆ ಶೇಖರಣೆಯಾಗುವ ನೀರಿನ ಹನಿಗಳು ಪುನಃ ನೆಲದಲ್ಲಿ ಇಂಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚು ಹೊತ್ತು ಉಳಿದಿರುತ್ತದೆ. ಬೆಳೆಗಳಿಗೆ ನೀರಾವರಿ ಒದಗಿಸುವ ಸಮಯದ ಅಂತರ ಹೆಚ್ಚಾಗುತ್ತದೆ. ಇದರಿಂದ ನೀರಾವರಿ ಮೂಲಗಳ ಮೇಲಿನ ಅವಲಂಬನೆ, ಒತ್ತಡ ಕಡಿಮೆಯಾಗುತ್ತದೆ.

ಮಣ್ಣಿನ ಸವಕಳಿಯ ನಿಯಂತ್ರಣ: ರಭಸದ ಮಳೆನೀರು ಅಥವಾ ತೋಟಕ್ಕೆ ಹಾಯಿಸಿದ ನೀರು, ಭೂಮಿಯ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುವುದರಿಂದ ಭೂಮಿಯ ಫಲವತ್ತತೆ ನಾಶವಾಗುವುದು. ಪಾಲಿಥಿನ್ ಮುಚ್ಚುಗೆಯಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು.

ಕಳೆ ಹಾಗೂ ಪೀಡೆಗಳ ನಿಯಂತ್ರಣ: ಕಳೆ ಸಸ್ಯಗಳ ದ್ಯುತಿಸಂಶ್ಲೇಷಣೆಗೆ ಅತ್ಯವಶ್ಯಕವಾದ ಸೂರ್ಯನ ಕಿರಣಗಳಿಗೆ ಕಪ್ಪು ಪ್ಲಾಸ್ಟಿಕ್  ಹಾಳೆ ತಡೆಯೊಡ್ಡುತ್ತದೆ. ಇದರಿಂದ ಪಾಲಿಥಿನ್ ಮುಚ್ಚುಗೆಯಿರುವ ಪ್ರದೇಶದಲ್ಲಿ ಕಳೆಗಳು ಬೆಳೆಯುವುದು ಸಾಧ್ಯವಿಲ್ಲ. ಪಾಲಿಥಿನ್ ಮುಚ್ಚುಗೆಯಿರುವ ಪ್ರದೇಶದಲ್ಲಿ ಗಾಳಿಯಾಡುವುದಿಲ್ಲ ಮತ್ತು ತಾಪಮಾನ ಉಳಿದೆಡೆಗಳಿಗಿಂತ ಹೆಚ್ಚಿಗೆ ಇರುತ್ತದೆ.

ಹೀಗಾಗಿ ಮೇಲ್ಮಣ್ಣಿನಲ್ಲಿರುವ ಕಳೆ ಸಸ್ಯಗಳ ಬೀಜಗಳು ಹಾಗೂ ಕೀಟಗಳ ಮರಿ, ಲಾರ್ವ (ಕೋಶಾವಸ್ಥೆಯಲ್ಲಿರುವ ಹುಳು) ನಾಶವಾಗುತ್ತದೆ.

ಬಳಸುವ ವಿಧಾನ

ಕೃಷಿಯಲ್ಲಿ ಉಪಯೋಗಿಸುವ 50 ಮೈಕ್ರಾನ್ ಪಾಲಿಥಿನ್ ಮುಚ್ಚುಗೆಯ ಪ್ರಸಕ್ತ ಮಾರುಕಟ್ಟೆ ದರ ಕೆ.ಜಿ.ಗೆ ಸುಮಾರೂ 150 ರಿಂದ 160 ರೂಪಾಯಿಗಳು. ಕೃಷಿ ಕ್ಷೇತ್ರದ ಉದ್ದಳತೆ ಹಾಗೂ ಸಾಗುವಳಿ ಮಾಡುವ ಬೆಳೆಯನ್ನು ಆಧರಿಸಿ ಪಾಲಿಥಿನ್ ಮುಚ್ಚುಗೆಯ ಅಳತೆ ಹಾಗೂ ವಿನ್ಯಾಸವನ್ನು ನಿರ್ಧರಿಸಬೇಕು. ರೈತರು ಸ್ಥಳೀಯ ಪಾಲಿಥಿನ್ ಮುಚ್ಚುಗೆಯ ತಯಾರಕರೊಟ್ಟಿಗೆ ಚರ್ಚಿಸಿ ಸಲಹೆ ಪಡೆಯಬಹುದು.

ಇದನ್ನು ಬಳಕೆ ಮಾಡಬೇಕಾದರೆ ಕಲ್ಲು ಮತ್ತು ಕಳೆಗಳಿಂದ ನೆಲ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ, ಅವಶ್ಯಕ ಪ್ರಮಾಣದಲ್ಲಿ ಕೊಟ್ಟಿಗೆ  ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು.

ಎತ್ತರದ ಮಡಿ (ಬೆಡ್) ಗಳನ್ನು ಮಾಡಿಸಿಕೊಳ್ಳಬೇಕು. ಭೂಮಿಗೆ ನೀರು ಹಾಯಿಸಿ ಮಣ್ಣು ಆರ್ದ್ರತೆಯಿಂದಿರುವಂತೆ ನೋಡಿಕೊಳ್ಳಬೇಕು. ಪಾಲಿಥಿನ್ ಮುಚ್ಚುಗೆಯಿಂದ ಹೊದಿಕೆ ಮಾಡುವ ಮೊದಲೇ ಹನಿ ನೀರಾವರಿ ಕೊಳವೆಗಳನ್ನು ಮಡಿಗಳ ಮೇಲೆ ಎಳೆಯಬೇಕು.

ಹೆಚ್ಚು ಗಾಳಿ ಬೀಸದಿರುವ ದಿನ ಪಾಲಿಥಿನ್ ಮುಚ್ಚುಗೆಯನ್ನು ಹೊದಿಸಲು ಸೂಕ್ತ. ಇದರ ಮುಚ್ಚುಗೆಯನ್ನು ಬಿಗಿಯಾಗಿ ಎಳೆದು ಹೊದಿಸಬೇಕು. ಪಾಲಿಥಿನ್ ಹಾಳೆಯ ಅಂಚುಗಳನ್ನು 4-6 ಇಂಚು ಆಳದವರೆಗೆ ಮಣ್ಣಿನಲ್ಲಿ ಹೂಳಬೇಕು.

ಮುಚ್ಚುಗೆ ಹಾಸುವ ಮೊದಲು ಬೆಳೆಗೆ ಸರಿಹೊಂದತಕ್ಕ ಅಂತರದಲ್ಲಿ ರಂಧ್ರಗಳನ್ನು ಕೊರೆದಿರಬೇಕಾಗುತ್ತದೆ. ಮೊದಲೇ ಪಾಲಿಥಿನ್ ಮುಚ್ಚುಗೆ ತಯಾರಕರಿಗೆ ತಿಳಿಸಿದಲ್ಲಿ ಬಳಸಲು ಸಿದ್ಧವಿರುವ ರಂಧ್ರಗಳುಳ್ಳ ಪಾಲಿಥಿನ್ ಹಾಳೆಗಳು ದೊರೆಯುತ್ತವೆ. ಪಾಲಿಥಿನ್ ಮುಚ್ಚಗೆಯ ಒಳಗೆ ಗಾಳಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಜಾನುವಾರುಗಳು ತೋಟಕ್ಕೆ ನುಗ್ಗದಂತೆ ನೋಡಿಕೊಳ್ಳಬೇಕು.

ರಂಧ್ರವಿರುವ ಜಾಗದಲ್ಲಿ ಬೀಜ ಬಿತ್ತುವುದು. ತೋಟಕ್ಕೆ ನೀರಾವರಿ ಒದಗಿಸಿದಾಗ ರಂಧ್ರಗಳಿರುವ ಜಾಗದಲ್ಲಿ ನೀರು ಇಂಗಿ ಬೆಳೆಗಳಿಗೆ ದೊರಕುತ್ತದೆ. ವ್ಯವಸ್ಥಿತವಾದ ರೀತಿಯಲ್ಲಿ ಪಾಲಿಥಿನ್ ಮುಚ್ಚಗೆಯ ನಿರ್ವಹಣೆ ಮಾಡಿದಲ್ಲಿ ಕಳೆಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ ಹಾಗೂ ಬೆಳೆಗಳಿಗೆ ಹೆಚ್ಚಿನ ಅಡಚಣೆ ಉಂಟಾಗುವುದಿಲ್ಲ ಮತ್ತು ಅಂತರ ಬೇಸಾಯದ ಅವಶ್ಯಕತೆ ಇರುವುದಿಲ್ಲ. 

ಬೆಳೆಯ ಕಟಾವಿನ ನಂತರ ಮುಚ್ಚುಗೆಯನ್ನು ತೆಗೆದು ಹಾಕುವುದು. ಈ ಮುಚ್ಚುಗೆ ಸುಸ್ಥಿತಿಯಲ್ಲಿದ್ದರೆ ಮುಂದಿನ ಬೆಳೆಗಳಿಗೆ ಬಳಸಬಹುದು. ಈ ಮುಚ್ಚುಗೆಯಿಂದ ಬೆಳೆಯ ನಿರ್ವಹಣೆ ಸುಲಭವಾಗುವುದರ ಜೊತೆ ಕಳೆ ನಿರ್ವಹಣೆಗೆಂದು ಪ್ರತ್ಯೇಕ ವೆಚ್ಚ ಮಾಡುವ ತೊಂದರೆ ತಪ್ಪುವುದು. ಸಾಂಪ್ರದಾಯಿಕ ಪದ್ಧತಿಯಲ್ಲಿ ಪಡೆಯುವ ಇಳುವರಿಗಿಂತ ಹೆಚ್ಚಿಗೆ ಇಳುವರಿ ಪಡೆಯಬಹುದು. ನೀರಿನ ಉಳಿತಾಯವೂ ಆಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT