ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಪಟ್ಟಿಗೆ ಕೊಳ್ಳೇಗಾಲ ಸೇರಿಸಿ

ಮೃತ ರೈತ ಕುಟುಂಬಕ್ಕೆ ಹೆಚ್ಚು ಪರಿಹಾರ: ಮಾಜಿ ಶಾಸಕಿ ಪರಿಮಳಾ ನಾಗಪ್ಪ ಆಗ್ರಹ
Last Updated 6 ಡಿಸೆಂಬರ್ 2013, 11:00 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದಿರುವ ಪರಿಣಾಮ ಸಾಕಷ್ಟು ಬೆಳೆ ನಷ್ಟವಾಗಿದೆ. ಆದರೆ, ಈ ತಾಲ್ಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ' ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

`ಜಿಲ್ಲೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಕೊಳ್ಳೇಗಾಲ ತಾಲ್ಲೂಕನ್ನು ಕೈ ಬಿಟ್ಟಿರುವುದು ಈ ಭಾಗದ ಶಾಸಕರ ಕಾರ್ಯವೈಖರಿಯನ್ನು ಬಯಲುಗೊಳಿಸಿದೆ. ಇದಕ್ಕೆ ಅವರ ನಿರ್ಲಕ್ಷ್ಯವೇ ಕಾರಣ' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

ಕೂಡಲೇ, ಕೊಳ್ಳೇಗಾಲ ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ ಅವರು,  ಜಿಲ್ಲೆಯಲ್ಲಿ ಸರಿಯಾಗಿ ಮಳೆ ಸುರಿಯದ ಪರಿಣಾಮ ಬೆಳೆ ನಷ್ಟದಿಂದ ನೊಂದ ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಲ್ಲೂ ಯಾವೊಬ್ಬ ಜನ ಪ್ರತಿ­ನಿಧಿಯೂ ರೈತರ ಸಮಸ್ಯೆಗೆ ಸ್ಪಂದಿ­ಸುತ್ತಿಲ್ಲ. ಪರಿಹಾರ ಧನ ವಿತರಣೆ­ಯಲ್ಲೂ ತಾರತಮ್ಯ ಎಸಗಲಾ­ಗುತ್ತಿದೆ ಎಂದು ಆರೋಪಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂಪಾಯಿ ಘೋಷಿಸಿದೆ. ಆದರೆ, ಕೊಳ್ಳೇಗಾಲ ತಾಲ್ಲೂಕಿನ ಸುಂಡ್ರಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ತಿಮ್ಮದಾಸೇಗೌಡ ಕುಟುಂಬಕ್ಕೆ ಕೇವಲ 1 ಲಕ್ಷ ರೂಪಾಯಿ ನೀಡಲಾಗಿದೆ. ಇಂತಹ ತಾರತಮ್ಯ ಸಲ್ಲದು. ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.

ಗೋ ಶಾಲೆ ಅವ್ಯವಸ್ಥೆ:
ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಅನುಕೂಲ ಕಲ್ಪಿಸಲು ಗೋಶಾಲೆ ತೆರೆಯಲಾಗಿತ್ತು ಆದರೆ, ಮೇವು ಪೂರೈಕೆಯಾಗದೆ ರೈತರು ಸಂಕಷ್ಟ ಅನುಭವಿಸುವಂತಾಯಿತು. ಈಗ ಜಾನುವಾರುಗಳನ್ನು ಸಾಕುವುದಕ್ಕೆ ಕಷ್ಟ ಅನುಭವಿಸುತ್ತಿರುವ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ರೈತರು ಜೀವನ ನಡೆಸಲಾಗದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣ ಎಂದು ಟೀಕಿಸಿದರು.

ಉದ್ಯೋಗ ಖಾತ್ರಿ:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿಗಾಗಿ ವಲಸೆ ಹೋಗುವವರನ್ನು ತಡೆಯಲು ರೂಪಿಸಲಾಗಿದೆ. ಆದರೆ, ಇದರಿಂದ ಬಡ ಕೂಲಿಗಾರರಿಗೆ ಅನುಕೂಲವಾಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ. ಉದ್ಯೋಗ ಖಾತ್ರಿ ಸಮರ್ಪಕವಾಗಿ ಜಾರಿಯಾದರೆ ವಲಸೆ ಹೋಗುವವರನ್ನು ತಡೆಯಬಹುದು ಎಂದ ಅವರು, ಇಂದಿರಾ, ಬಸವ ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮೂಲಕ ಅರ್ಹ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುತ್ತಿಲ್ಲ. ಈ ಲೋಪ ಸರಿಪಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಜನಪ್ರತಿನಿಧಿಗಳೇ ಕಾರಣ. ಮುಂದಿನ ಲೋಕಸಭಾ ಚುನಾವಣೆಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಯನ್ನು ಚುರುಕುಗೊಳಿಸಲಾ ಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂರ್ತಿ, ಮುಖಂಡರಾದ ಚಾಮರಾಜು,                     ದಶರಥ, ಮೂಡ್ನಾಕೂಡು ಕುಮಾರ್, ಮುದ್ದುಮಲ್ಲು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT