ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಪ್ರದೇಶ ಘೋಷಣೆ ಮಾಡಿ

Last Updated 16 ಸೆಪ್ಟೆಂಬರ್ 2011, 7:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎನ್ನುವ ನಿರ್ಣಯವನ್ನು ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.  ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.  

ಸಕಾಲದಲ್ಲಿ ಜಿಲ್ಲೆಯಲ್ಲಿ ಮಳೆಬೀಳದ ಕಾರಣ ಎಲ್ಲಾ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರು ಸಮಸ್ಯೆ, ಬಿತ್ತನೆ ಹಾನಿಯಿಂದಾಗಿ ರೈತರು ಗುಳೆ ಹೋಗುವ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 

ಜಿಲ್ಲೆಯಲ್ಲಿ ಕೃಷಿ ಇಲಾಖೆ ಸಮೀಕ್ಷೆ ವರದಿ ಅನ್ವಯ ಸೆ. 14ರವರೆಗೆಶೇ. 61ರಷ್ಟು ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಅಂದಾಜು ರೂ 400 ಕೋಟಿಗೂ ಹೆಚ್ಚು ನಷ್ಟವಾಗಿರಬಹುದು ಎಂದು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ ಎಂದು ಇಲಾಖೆ ಉಪ ನಿರ್ದೇಶಕಿ ಎಚ್.ಎನ್. ಸುಜಾತಾ ಸಭೆಗೆ ಮಾಹಿತಿ ನೀಡಿದರು.

ಕೇಂದ್ರ ಸಚಿವ ಶರದ್ ಪವಾರ್ ಈರುಳ್ಳಿ ರಪ್ತು ನಿಷೇಧ ಮಾಡಿರುವುದರಿಂದ ಜಿಲ್ಲೆಯ ರೈತರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿಯೇ ಜಿಲ್ಲೆಯಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದ್ದು, ರಪ್ತು ನಿಷೇಧದಿಂದ ಈರುಳ್ಳಿ ಬೆಲೆ ಕುಸಿತಕೊಂಡು ರೈತರು ನಷ್ಟ ಅನುಭವಿಸುತ್ತಿದ್ದು, ಈರುಳ್ಳಿ ರಪ್ತಿಗೆ ಅವಕಾಶ ನೀಡುವಂತೆ ಸರ್ಕಾರದ ಗಮನಕ್ಕೆ ತರಬೇಕು ಎಂದು ಜಿ.ಪಂ. ಸದಸ್ಯ ಜಯಪಾಲಯ್ಯ ಒತ್ತಾಯಿಸಿದರು.

ಬಸವ ಇಂದಿರಾ ವಸತಿ ಯೋಜನೆಯಡಿ ಚಳ್ಳಕೆರೆ ತಾಲ್ಲೂಕು ಫಲಾನುಭವಿಗಳ ಆಯ್ಕೆ ವಿವರಗಳನ್ನು ಇದುವರೆಗೂ ತಾ.ಪಂ. ಇಓ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ಜಿ.ಪಂ. ಸದಸ್ಯ ರವಿಕುಮಾರ್ ಸಭೆಯ ಗಮನಕ್ಕೆ ತಂದಾಗ ಕೆಲ ಸದಸ್ಯರು ಅವರಿಗೆ ದನಿಗೂಡಿಸಿದರು.

ಈ ಯೋಜನೆ ಅಡಿ ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಅಧಿಕಾರಿಗಳು ತಮಗಿಷ್ಟದ ರೀತಿಯಲ್ಲಿ ಆಯ್ಕೆ ಮಾಡುತ್ತಿರುವ ಬಗ್ಗೆ ಸದಸ್ಯರು ಸುಮಾರು ಸಭೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಅಕ್ಟೋಬರ್ 10ರ ಒಳಗೆ ಹಿರಿಯೂರು ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ನಿವೇಶನ ರಹಿತರ ಹಾಗೂ ವಸತಿ ರಹಿತರ ಪಟ್ಟಿ ನೀಡಬೇಕು. ಇಲ್ಲದಿದ್ದರೇ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷರು ಎಚ್ಚರಿಸಿದರು.

ಸರ್ಕಾರಿ ಅಧಿಕಾರಿಗಳು ತಮ್ಮ ಮನ ಪರಿವರ್ತನೆ ಮಾಡಿಕೊಂಡು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕ ಸೇವೆ ಮಾಡಿ ಎಂದು ಜಿ.ಪಂ. ಸದಸ್ಯ ಬಾಬುರೆಡ್ಡಿ ಸಭೆಯಲ್ಲಿ ಕೈಮುಗಿದು ಕೇಳಿಕೊಂಡ ಪ್ರಸಂಗ ನಡೆಯಿತು. 

ಬೆಳಿಗ್ಗೆ 11ಕ್ಕೆ ನಡೆಯಬೇಕಿದ್ದ ಸಾಮಾನ್ಯ ಸಭೆ ಮಧ್ಯಾಹ್ನ 12.10ಕ್ಕೆ ಆರಂಭವಾಯಿತು. ಈ ಬಗ್ಗೆ ಸದಸ್ಯ ಪಿ.ಆರ್. ರಮೇಶ್ ಪ್ರಶ್ನಿಸಿದರಾದರೂ ಉತ್ತರ ಮಾತ್ರ ದೊರೆಯಲಿಲ್ಲ. ಜಿ.ಪಂ. ಉಪಾಧ್ಯಕ್ಷೆ ವಿಜಯಮ್ಮ ಎಂ. ಜಯಣ್ಣ ಇತರರು ಸಭೆಯಲ್ಲಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT