ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ ಗಡಗಡ ಚಳಿ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಬೆಂಗಳೂರು: ಪ್ರತಿವರ್ಷ ಡಿಸೆಂಬರ್ ತಿಂಗಳು ಬಂದರೆ ರಾಜ್ಯದಲ್ಲಿ ಚಳಿಯ ನಡುಕ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ ಅಂತ್ಯ ಸಮೀಪಿಸುತ್ತಿದ್ದರೂ ಚಳಿಯ ಕೊರೆತ ಜನರನ್ನು ಹೆಚ್ಚಾಗಿ ತಟ್ಟಿಲ್ಲ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮೋಡಗಳು ಚಲಿಸುತ್ತಿದ್ದ ಕಾರಣ ಚಳಿಯ ಪ್ರಮಾಣ ಈವರೆಗೂ ಕಡಿಮೆಯಾಗಿತ್ತು. ಆದರೆ ಮುಂದಿನ ಎರಡು ಮೂರು ದಿನಗಳಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
 
`ದಕ್ಷಿಣ ಕರ್ನಾಟಕದ ವಾತಾವರಣದಲ್ಲಿ ತೇವಾಂಶ ಹಾಗೂ ತೆಳುವಾಗಿ ಮೋಡ ಹರಿದಾಡುತ್ತಿದ್ದ ಕಾರಣ ಚಳಿ ಈವರೆಗೂ ಕಡಿಮೆಯೇ ಇದೆ. ಮುಂದಿನ ದಿನಗಳಲ್ಲಿ ಶುಭ್ರ ಆಕಾಶ ಮತ್ತು ವಾತಾವರಣದ ತೇವಾಂಶದಲ್ಲಿ ಇಳಿಕೆ ಕಂಡು ಬಂದರೆ ಚಳಿ ಹೆಚ್ಚಾಗುತ್ತದೆ. ಆದರೆ, ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ ಉತ್ತರ ಕರ್ನಾಟಕದಲ್ಲಿ ಶುಭ್ರ ಆಕಾಶ ಹಾಗೂ ಒಣಹವೆ ಇರುವುದರಿಂದ, ಆ ಭಾಗದಲ್ಲಿ ಚಳಿ ಸಹಜವಾಗಿ ಹೆಚ್ಚಾಗಲಿದೆ' ಎಂದು ಹವಾಮಾನ ಇಲಾಖೆಯ ನಿರ್ದೇಶಕ ಬಿ.ಪುಟ್ಟಣ್ಣ ತಿಳಿಸಿದರು.
 
`2010ರಲ್ಲಿ ರಾಜ್ಯದಲ್ಲಿ ಹೆಚ್ಚು ಚಳಿ ಕಂಡುಬಂದಿತ್ತು. 2010ರ ಡಿಸೆಂಬರ್‌ನಲ್ಲಿ ವಿಜಾಪುರದಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1897ರ ನಂತರ ಅಂದರೆ 119 ವರ್ಷಗಳ ಬಳಿಕ ಈ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. 2011ರಲ್ಲಿ ಈ ಕನಿಷ್ಠ ಉಷ್ಣಾಂಶದ ಪ್ರಮಾಣ 8 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಈ ವರ್ಷ ವಿಜಾಪುರದಲ್ಲಿ ಕನಿಷ್ಠ ಉಷ್ಣಾಂಶ 11 ಡಿಗ್ರಿ ಸೆಲ್ಸಿಯಸ್ ಇದೆ. ಹಿಂದಿನ ದಾಖಲೆಗಳನ್ನು ಗಮನಿಸಿದರೆ ಈ ವರ್ಷದ ಚಳಿಯ ಪ್ರಮಾಣ ಕಡಿಮೆಯೇ ಇದೆ' ಎಂದು ಮಾಹಿತಿ ನೀಡಿದರು.
 
`ಮುಂದಿನ ಕೆಲದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಠ ಉಷ್ಣಾಂಶವು ಹತ್ತು ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕ ಬಯಲು ಪ್ರದೇಶವಾಗಿರುವುದರಿಂದ ವಾತಾವರಣದಲ್ಲಿ ಒಣಹವೆ ಹೆಚ್ಚಾಗಿ ಚಳಿಯೂ ಹೆಚ್ಚಾಗಲಿದೆ. ಉತ್ತರದಿಂದ ಗಾಳಿ ಹೆಚ್ಚು ಬೀಸುವುದರಿಂದ ಉಷ್ಣಾಂಶದಲ್ಲಿ ಇಳಿಕೆಯಾಗಿ ಶೀತ ಮಾರುತ ಬೀಸುವ ಸಂಭವವೂ ಇದೆ' ಎಂದರು.
 
`ದಕ್ಷಿಣ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಅತಿಯಾಗಿ ಏರುವುದು ಅಪರೂಪ. 1883ರಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 8.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 129 ವರ್ಷಗಳು ಕಳೆದರೂ ನಗರದ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿಲ್ಲ. ಈ ವರ್ಷ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕದ ಉಷ್ಣಾಂಶ ಒಂದೆರಡು ಡಿಗ್ರಿಗಳಷ್ಟು ಕಡಿಮೆಯಾಗಬಹುದು' ಎಂದು ಹೇಳಿದರು.
 
`ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚು. ದಕ್ಷಿಣ ಭಾರತದ ಭೂ ಭಾಗವನ್ನು ಮೂರು ಕಡೆಗಳಿಂದ ಸಮುದ್ರ ಸುತ್ತುವರಿದಿದೆ. ವಾತಾವರಣದ ಒಣಹವೆಯು ಸಮುದ್ರದ ತೇವಾಂಶವನ್ನು ಹೀರುವ ಕಾರಣದಿಂದ ದಕ್ಷಿಣ ಭಾರತದಲ್ಲಿ ಚಳಿಯ ಪ್ರಮಾಣ ಕಡಿಮೆ. ಅಲ್ಲದೇ ರಾಜ್ಯದ ದಕ್ಷಿಣ ಭಾಗ, ತಮಿಳುನಾಡು ಮತ್ತು ಕೇರಳಗಳಲ್ಲಿ ಚಳಿಗಾಲದಲ್ಲೂ ಆಗಾಗ ಮೋಡಗಳು ಚಲಿಸುವ ಕಾರಣ ಚಳಿ ಕಡಿಮೆ ಇರುತ್ತದೆ' ಎಂದು ತಿಳಿಸಿದರು.

`ಉ.ಕರ್ನಾಟಕದಲ್ಲಿ ಹೆಚ್ಚು'
`ಉತ್ತರ ಕರ್ನಾಟಕ ಬಯಲು ಪ್ರದೇಶವಾದ ಕಾರಣ ಚಳಿ ಹೆಚ್ಚಾಗಿರಲಿದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲಿ ಚಳಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವಾತಾವರಣದ ತೇವಾಂಶ, ದಕ್ಷಿಣದಿಂದ ಬೀಸುವ ಮಾರುತಗಳು ತರುವ ಮೋಡಗಳ ಕಾರಣದಿಂದ ವಾತಾವರಣದಲ್ಲಿ ಒಣಹವೆ ಹೆಚ್ಚಾಗಿರುವುದಿಲ್ಲ. ಹೀಗಾಗಿ ಚಳಿಯ ಪ್ರಮಾಣ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗುವುದಿಲ್ಲ. ಉತ್ತರ ಭಾಗದಿಂದ ಗಾಳಿ ಬೀಸುವುದು ಹೆಚ್ಚಾದರೆ ಚಳಿ ಹೆಚ್ಚಾಗಬಹುದು. ಸಮುದ್ರದ ತೇವಾಂಶದ ಕಾರಣದಿಂದ ಕರಾವಳಿ ಭಾಗದಲ್ಲೂ ಚಳಿ ಹೆಚ್ಚಾಗಿರುವುದಿಲ್ಲ'
- ಬಿ.ಪುಟ್ಟಣ್ಣ ನಿರ್ದೇಶಕರು, ಹವಾಮಾನ ಇಲಾಖೆ, ಬೆಂಗಳೂರು ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT