ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿ ಬೆಳಗಲ್ಲೋ ಅಣ್ಣಾ...

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅದು ಹತ್ತೊಂಬತ್ತನೇ ಶತಮಾನ. ಬಂಗಾಳದ ಪುನರುಜ್ಜೀವನ ಕಾಲ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗೆ ದೇಶ ತನ್ನನ್ನು ಒಡ್ಡಿಕೊಂಡಿದ್ದ ಸಮಯ. ಎಲ್ಲೆಡೆ ದೇಸಿ ಚಳವಳಿಯ ಬಿರುಗಾಳಿ. ಕಲಾಕ್ಷೇತ್ರದ ಮೇಲೂ ಅದರ ಪ್ರಭಾವ.

ಕಲ್ಕತ್ತೆಯ ಕಲಾಶಾಲೆಯ ಪ್ರಾಂಶುಪಾಲರಾಗಿದ್ದ ಇ.ಬಿ. ಹ್ಯಾವೆಲ್, ಅವನೀಂದ್ರನಾಥ ಟ್ಯಾಗೋರ್ ಸೇರಿದಂತೆ ಅನೇಕರು ದೇಸಿಕಲೆಯ ಉಳಿವಿಗಾಗಿ ಶ್ರಮಿಸುತ್ತಿದ್ದರು. ಭಾರತೀಯ ಕಲಾ ಪರಂಪರೆಯು ಯುವಕರಿಗೆ ತಲುಪಬೇಕು ಎಂಬುದು ಅವರ ಕನಸಾಗಿತ್ತು. ಕಲಾ ವಿಮರ್ಶಕ ಕುಮಾರ ಗಂಗೋಲಿಯಂತಹ ವಿಚಾರವಂತರು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದ್ದರು.

`ಬಂಗಾಳಿ ಪಂಥ~ದ ಪ್ರಮುಖ ಕಲಾವಿದ ಕೆ. ವೆಂಕಟಪ್ಪ. ತಮ್ಮ ಸಹಪಾಠಿಗಳಾದ ನಂದಲಾಲ್ ಬಸು, ಅಸೀತ್‌ಕುಮಾರ ಅಲ್ದಾರ್, ಸಮರೇಂದ್ರನಾಥ ಗುಪ್ತಾ, ಗಗನೇಂದ್ರನಾಥ ಟ್ಯಾಗೋರ್ ಮೊದಲಾದವರು ದೇಶೀಯ ಕಲಾಚಳವಳಿಯಲ್ಲಿ ಗುರುತಿಸಿಕೊಂಡಿದ್ದರು.

ಇ.ಬಿ.ಹ್ಯಾವೆಲ್, ಅವನೀಂದ್ರನಾಥ ಟ್ಯಾಗೋರ್‌ರ ಮಾರ್ಗದರ್ಶನದಲ್ಲಿ ಬೌದ್ಧ, ರಜಪೂತ, ಮೊಘಲ್ ಸಾಂಪ್ರದಾಯಿಕ ಚಿತ್ರಗಳನ್ನು ಅಭ್ಯಾಸ ಮಾಡಿ ತಮ್ಮ ಕಲಾಕೃತಿಗಳ ಮೂಲಕ ದೇಶಿ ಪ್ರಜ್ಞೆಯನ್ನು ಯಶಸ್ವಿಯಾಗಿ ಮೂಡಿಸಿದರು.

1908ರಲ್ಲಿ ಕಲ್ಕತ್ತಾದ ಸರ್ಕಾರಿ ಕಲಾಶಾಲೆಗೆ ವೆಂಕಟಪ್ಪ ಸೇರ್ಪಡೆ. 1916ರವರೆಗೆ ಅಭ್ಯಾಸ. ಚಿತ್ರಕಲೆಯ ಜತೆಗೆ ಶಿಲ್ಪ, ಸಂಗೀತದಲ್ಲೂ ಆಸಕ್ತಿ. ಮೈಸೂರಿಗೆ ಮರಳಿದ ಬಳಿಕ ವೀಣೆಯ ಹುಚ್ಚು ಹೆಚ್ಚಿತು. ಸಂಗೀತ ದಿಗ್ಗಜರಾದ ಶೇಷಣ್ಣ, ವರದಾಚಾರ್ಯ, ಕೆ.ವಾಸುದೇವಾಚಾರ್ಯರ ಒಡನಾಟ.
 
ಅವರ ಕಲಾಕೌಶಲ್ಯ ಮೂರು ಪ್ರಕಾರಗಳಲ್ಲಿ ಹರಡಿಕೊಂಡಿದೆ. ಶಿಲ್ಪ, ವರ್ಣಚಿತ್ರ ಹಾಗೂ ಉಬ್ಬುಶಿಲ್ಪ. ಉದಕಮಂಡಲ ಹಾಗೂ ಕೊಡೈಕೆನಾಲ್‌ನ ಸುಂದರ ಭೂದೃಶ್ಯಗಳು ಅವರ ಭಿತ್ತಿಯಲ್ಲಿ ಸೃಷ್ಟಿಯಾದ ಬಗೆ ವಿಸ್ಮಯಕಾರಿ. ಗಾಳಿ, ಮಳೆ, ಆಕಾಶ, ಹೂ ಬಳ್ಳಿಗಳಿಗೆ ವೆಂಕಟಪ್ಪ ತಮ್ಮದೇ ಸ್ಪರ್ಶ ನೀಡಿದ್ದಾರೆ. ವಾತಾವರಣದ ಶಾಂತತೆಯನ್ನು ಬಣ್ಣಗಳಲ್ಲಿ ಹಿಡಿದಿಟ್ಟಿದ್ದಾರೆ. 

ಬೆಳಗಿನಿಂದ ಬೈಗಿನವರೆಗೆ ಕವಿಯಾಗಿ ಕಲಾವಿದನಾಗಿ ಅವರು ತೊಡಗಿಕೊಳ್ಳುತ್ತಿದ್ದ ಪರಿಯನ್ನು ಬಣ್ಣಿಸಲು ಅಸಾಧ್ಯ. ಈಗ ನೀವು ನೋಡುತ್ತಿರುವ ಅವರ ಕಲಾಕೃತಿ ಕೂಡ ಉದಕಮಂಡಲದ ಒಂದು ಬಿಂಬ. ಇಲ್ಲಿನ ಬೆಳಕಿನ ಆಟ ಮರೆಯಲಾರದಂಥದ್ದು. ವರ್ಣ ಬಳಕೆ ಮೇಲಿನ ಹಿಡಿತ ಮತ್ತು ಪ್ರಕೃತಿಯ ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ಕಾಣಬಹುದು. ಪ್ರಕೃತಿಯನ್ನು ಆಧುನಿಕ ಕಣ್ಣಿನಲ್ಲಿ ನೋಡುವ ಅವರ ತಂತ್ರ ಹಿತಕರವಾಗಿದೆ.
 
ವರ್ಣಗಳ ಹೊಳಪು ಸಾಯಂಕಾಲದ ಸೂರ್ಯಸ್ತ ಎಂಬುದನ್ನು ಸಾರುತ್ತ ಹೋಗುತ್ತವೆ.
ಚಿತ್ರದಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಕೆಳಗೆ ಹಸಿರನ್ನು ಹೊದ್ದ ಭೂಮಿ. ಮತ್ತೊಂದು ಬೆಳಕಿನ ಓಕುಳಿಯಲ್ಲಿ ಮಿಂದ ಆಕಾಶ. ಸೂಕ್ಷ್ಮವಾಗಿ ನೋಡಿದರೆ ಈ ಎರಡರ ಏರಿಳಿತಗಳು ಸಂಗೀತದ ಲಯವನ್ನೇ ಹೋಲುತ್ತವೆ.

ವೆಂಕಟಪ್ಪ ಸಂಗೀತದ ಕಣ್ಣಲ್ಲಿ ದೃಶ್ಯಗಳನ್ನು ನೋಡುತ್ತಿದ್ದರೆ? ಎಂಬ ಭಾವ ಮೂಡುತ್ತದೆ. ಅಭಿವ್ಯಕ್ತಿಯ ಸರಳತೆ, ಹಾಗೂ ಸೌಮ್ಯ ವರ್ಣಗಳು ಚಿತ್ರದ ಹೆಚ್ಚುಗಾರಿಕೆ. ಅದು ಪ್ರಕೃತಿ ಚಿತ್ರಗಳ ಗುಣ ಲಕ್ಷಣ ಕೂಡ. ಅನುಭವ ಹಾಗೂ ಅವರ ಕವಿ ಮನಸ್ಸು ಕಲಾಕೃತಿಯಲ್ಲಿ ತೀವ್ರವಾಗಿ ಕೆಲಸ ಮಾಡಿದೆ.

ಅಲ್ಲದೆ ಬೆಸೆದುಕೊಂಡ ಆಕಾಶ ಭೂಮಿ ಹಾಗೂ ಅವರಿಬ್ಬರ ಕೂಸಿನಂತೆ ಕಾಣುವ ರವಿ ಕೂಡ ಕಲಾಕೃತಿಯ ಪಾತ್ರಧಾರಿಗಳಂತೆ ಕಾಣುತ್ತಾರೆ. ಇನ್ನೊಂದು ನೆಲೆಯಲ್ಲಿ ನೋಡಿದರೆ ಇದೊಂದು ವಿದಾಯದ ಗೀತೆಯಾಗಿಯೂ ಕಾಡುತ್ತದೆ. ಇನ್ನೇನು ಸೂರ್ಯ ಮುಳುಗಲಿದ್ದಾನೆ. ಕತ್ತಲು ಹರಿಯಲಿದೆ ಎಂಬ ದುಗುಡದ ಮುನ್ನುಡಿ ಇಲ್ಲಿದೆ.

ವೆಂಕಟಪ್ಪನವರ ಕಲಾಕೃತಿಗಳು ಇತಿಹಾಸದ ಜತೆಗೆ ಕಾಲದ ಕಲ್ಪನೆಯನ್ನೂ ನೀಡುತ್ತವೆ. ಪ್ರಕೃತಿಯನ್ನು ಉತ್ತುಂಗದಲ್ಲಿ ನಿಲ್ಲಿಸಿ ನೋಡುವ ಪ್ರಯತ್ನವಿದು. ಇಳಿಸಂಜೆಯನ್ನು ಬದುಕಿಗೂ ಅನ್ವಯಿಸುವುದರ ಮೂಲಕ ಇದು ವೆಂಕಟಪ್ಪನವರ ಸಾರ್ವಕಾಲಿಕ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದಾಗಿ ಮೆರೆಯುತ್ತದೆ.

ಅಲೌಕಿಕದೆಡೆಗೆ ಸೆಳೆವ ಶಕ್ತಿ ಇಲ್ಲಿನ ವರ್ಣಗಳಿಗಿದೆ ಎಂದರೆ ಅತಿಶಯೋಕ್ತಿಯಲ್ಲ. ಇನ್ನೊಂದು ವಿಶೇಷವೆಂದರೆ ಇಡೀ ಚಿತ್ರದಲ್ಲಿ ಮೌನ ಆವರಿಸಿದೆ. ಅದು ಸಂಜೆಯ ಹಿತದ ಯಾತನೆಯನ್ನು ಸಾರುತ್ತಿದೆ.  

ಕೃತಿ ಇಂಪ್ರೇಶನಿಸ್ಟ್ ಮಾದರಿಯ ಪ್ರಕೃತಿ ಚಿತ್ರ. ಎಂದಿನಂತೆಯೇ ವೆಂಕಟಪ್ಪನವರ ಜಲವರ್ಣಗಳು ಇಲ್ಲಿಯೂ ಆಟವಾಡಿವೆ. ಅವರು ಭೂದೃಶ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ನಂತರ ತಮ್ಮ ಸ್ಟುಡಿಯೋದಲ್ಲಿ ಚಿತ್ರಿಸುತ್ತಿದ್ದರು. ಏಕಾಗ್ರತೆಯ ಮುಖಾಂತರ ಮಾತ್ರ ಈ ಧ್ಯಾನ ಸಾಧ್ಯವಾಗುತ್ತಿತ್ತು. ಕಲೆಗಾಗಿ ಬದುಕನ್ನೇ ಮುಡಿಪಾಗಿಟ್ಟ ವೆಂಕಟಪ್ಪ ವಿವಾಹವಾಗಿರಲಿಲ್ಲ ಎಂಬುದು ಬಹುತೇಕರಿಗೆ ತಿಳಿಯದ ಸಂಗತಿ. 

ಕಲೆಯೆಂದರೆ ದೈವಸಾನಿಧ್ಯ, ದೇವರ ದಯೆಯಿಂದ ತಮ್ಮ ಕಲಾಕೃತಿ ರಚನೆಯಾಗುತ್ತವೆ ಎಂಬುದು ಅವರ ತಿಳಿವಳಿಕೆಯಾಗಿತ್ತು. ಪಾಶ್ಚಾತ್ಯ ಸಂಸ್ಕೃತಿಯ ಬಿರುಗಾಳಿಗೆ ಬಾಗದ ಹೆಮ್ಮರವಾಗಿ ಭಾರತೀಯ ಕಲೆಯನ್ನು ಬೆಳೆಸಿದ ಕಲಾ ತಪಸ್ವಿ ಕರುನಾಡಿನ ಕಣ್ಮಣಿ ಎಂಬುದು ಹೆಮ್ಮೆಯ ಸಂಗತಿ.

 (ಲೇಖಕರು ದೃಶ್ಯಕಲಾವಿದರು ಹಾಗೂ ಸಂಶೋಧಕರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT