ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ನದಿ: ಹೆಚ್ಚಿದ ಮೊಸಳೆ ಹಾವಳಿ

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಮಳೆಯಿಲ್ಲದೆ ಜಿಲ್ಲೆಯ ಜೀವನದಿಗಳು ಮತ್ತು ಜಲಾಶಯಗಳು ಬರಿದಾಗಿವೆ. ಒಂದೆಡೆ ಜನ-ಜಾನುವಾರು ನೀರಿಲ್ಲದೆ ತತ್ತರಿಸಿದ್ದರೆ, ಇನ್ನೊಂದೆಡೆ ನದಿಯನ್ನೇ ಆಶ್ರಯಿಸಿ ಬದುಕುವ ಜಲಚರಗಳೂ ತೀವ್ರ ತೊಂದರೆಗೆ ಸಿಲುಕಿವೆ.

ಬಾಗಲಕೋಟೆ-ವಿಜಾಪುರ ಅವಳಿ ಜಿಲ್ಲೆಗಳ ಜೀವನದಿಗಳಾದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ ಮತ್ತು ಡೋಣಿ ನದಿಗಳು ಸಂಪೂರ್ಣ ಬರಿದಾಗಿವೆ. ಜೊತೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ಕೂಡ ತಳಕಂಡಿವೆ.
 
ಇದರಿಂದಾಗಿ ನೆಲೆ ಕಳೆದುಕೊಳ್ಳತೊಡಗಿರುವ ಜಲಚರಗಳು ಅದರಲ್ಲೂ ಮೊಸಳೆಗಳು ಹೊಲ- ಗದ್ದೆಗಳಲ್ಲಿ ಆಶ್ರಯ ಪಡೆಯತೊಡಗಿವೆ. ಆಹಾರ ಅರಸಿ ನದಿ ಸಮೀಪದ ಗ್ರಾಮಗಳಿಗೆ ದಾಳಿ ಇಡತೊಡಗಿವೆ.
ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಏಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು 27 ಮೊಸಳೆಗಳು ಕಬ್ಬಿನ ಗದ್ದೆ ಅಥವಾ ಗ್ರಾಮದಲ್ಲಿ ಕಾಣಿಸಿಕೊಂಡಿವೆ.

ಹುನಗುಂದ ತಾಲ್ಲೂಕಿನ ಕೂಡಲಸಂಗಮ, ಕೆಂಗಲ್, ಗಂಜಿಹಾಳ, ಚಿಕ್ಕಮಳಗಾವಿ, ಚಿತ್ತರಗಿ, ನಂದನೂರಗಳಲ್ಲಿ ಒಟ್ಟು 11, ಮುಧೋಳ ತಾಲ್ಲೂಕಿನ ಬಿ.ಕೆ.ಬುದ್ನಿ, ಗುಲಗಾಲ ಜಂಬಗಿಗಳಲ್ಲಿ ಏಳು. ಜಮಖಂಡಿ ತಾಲ್ಲೂಕಿನಲ್ಲಿ ಏಳು  ಮತ್ತು ಬಾಗಲಕೋಟೆ ತಾಲ್ಲೂಕಿನ ಆನದಿನ್ನಿ ಮತ್ತು ಬಾದಾಮಿ ತಾಲ್ಲೂಕಿನ ಸಬ್ಬಲಹುಣಸಿಯಲ್ಲಿ ತಲಾ ಒಂದೊಂದು ಮೊಸಳೆಗಳು ಪ್ರತ್ಯಕ್ಷವಾಗಿದ್ದು, ನದಿ ತೀರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಕೂಡಲಸಂಗಮ ಸಮೀಪದ ನಂದನೂರ ಗ್ರಾಮದ ಸಂಗಪ್ಪ ಕುಂಬಾರ ಎಂಬುವವರ ಮನೆಯಲ್ಲಿ  ಅವಿತುಕೊಂಡಿದ್ದ ಮೊಸಳೆಯೊಂದು, ರುದ್ರಪ್ಪ ಸಂಗಪ್ಪ ಕುಂಬಾರ (53) ಎಂಬುವವರ ಮೇಲೆ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ.

ಮುಧೋಳ ತಾಲ್ಲೂಕಿನ ಬಿ.ಕೆ. ಬುದ್ನಿ ಗ್ರಾಮದಲ್ಲಿ ಕಬ್ಬಿನ ಹೊಲಕ್ಕೆ ತೆರಳಿದ್ದ ರೈತ ವೆಂಕಪ್ಪ ಪುಂಡಲೀಕ ಎಂಬುವವರ ಮೇಲೂ ಮೊಸಳೆ ದಾಳಿ ಮಾಡಿದೆ. ಇದೇ ಗ್ರಾಮದಲ್ಲಿ ತಿಂಗಳೊಳಗೆ ನಾಲ್ಕು ಮೊಸಳೆಗಳು ಪತ್ತೆಯಾಗಿವೆ.

ಗುಳೇದಗುಡ್ಡ ಸಮೀಪದ ಸಬ್ಬಲಹುಣಸಿ ಗ್ರಾಮದಲ್ಲಿ ಮೊಸಳೆಗಳು 8 ರಿಂದ 10 ಕುರಿಗಳನ್ನು ತಿಂದುಹಾಕಿವೆ. ಜಿಲ್ಲೆಯ ನದಿತೀರದ ಗ್ರಾಮಗಳಿಗೆ ಬಂದಿದ್ದ 14 ಮೊಸಳೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ, ಅವುಗಳನ್ನು ಆಲಮಟ್ಟಿ ಹಿನ್ನೀರಿನಲ್ಲಿ ಬಿಟ್ಟಿದ್ದಾರೆ. ಆದರೆ, ಜಲಾಶಯ ಬರಿದಾಗಿರುವ ಕಾರಣ ಮೊಸಳೆಗಳು ಆಹಾರ ಮತ್ತು ಸುರಕ್ಷಿತ ಪ್ರದೇಶವನ್ನು ಹುಡುಕುತ್ತಾ ಸಮೀಪದ ಕಬ್ಬಿನ ಗದ್ದೆ, ಇಲ್ಲವೇ ಗ್ರಾಮಗಳತ್ತ ಮತ್ತೆ ಮತ್ತೆ  ಬರುತ್ತಿವೆ.

2011ರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧೆಡೆ 40 ಮೊಸಳೆಗಳು ಪತ್ತೆಯಾಗಿದ್ದವು. 2008 ಜುಲೈನಲ್ಲಿ ಕೂಡಲಸಂಗಮದ ಬಸ್ ನಿಲ್ದಾಣದ ಬಳಿ ಮೊಸಳೆಯೊಂದು ಪ್ರವಾಸಿಯೊಬ್ಬರ ಮೇಲೆ ದಾಳಿ ನಡೆಸಿ, ಸಾಯಿಸಿತ್ತು.

ಮೊಸಳೆ ಪಾರ್ಕ್ ಬೇಕು
ಬಾಗಲಕೋಟೆ: 
`ಮೊಸಳೆ ಪಾರ್ಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಯಾವುದೇ ಯೋಜನೆ ರೂಪಿಸಿಲ್ಲ. ಈ ಕಾರ್ಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು~ ಎಂದು ಬಾಗಲಕೋಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ನಾಯಕ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಮೊಸಳೆ ಪಾರ್ಕ್ ನಿರ್ಮಾಣದಿಂದ ಅವುಗಳ ಹಾವಳಿ ನಿಯಂತ್ರಿಸಲು ಸಾಧ್ಯವಿಲ್ಲ. ನದಿಗಳು ಬರಿದಾದಾಗ ಸುರಕ್ಷಿತ ಸ್ಥಳದತ್ತ ಆಹಾರ ಅರಸಿ ತೆರಳುವುದು ಸಾಮಾನ್ಯ. ಈ ಬಗ್ಗೆ ನದಿ ತೀರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT