ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಊಟದ ಮಾತಲ್ಲ..!

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಈ ಬೆಂಗಳೂರೇ ಹೀಗೆ... ಈ ನಗರಿಯಲ್ಲಿ ಸಾಯಲು ನೂರು ದಾರಿಗಳಿದ್ದರೆ, ಬದುಕಲು ಇನ್ನೂರು ಹಾದಿಗಳಿವೆ. ಕೆಂಪೇಗೌಡ ಕಟ್ಟಿದ ಊರಲ್ಲಿ ಪುಡಿಗಾಸು ಇಟ್ಟುಕೊಂಡೂ ಬದುಕಬಹುದು. ಹಾಗೇ, ತಿಂಗಳಿಗೆ 25 ಸಾವಿರ ರೂಪಾಯಿ ಸಿಕ್ಕರೂ ಬದುಕು ಸಾಗಿಸೋದು ತುಂಬಾ ಕಷ್ಟ ಎನಿಸಿಬಿಡುತ್ತದೆ. ಆದರೆ ಯಾರನ್ನೂ ಹಸಿವಿನಿಂದ ಸಾಯಲು ಬಿಡುವುದಿಲ್ಲ ಈ ನಗರಿ. ಯಾರು ಬಂದರೂ ಬಾಚಿ ತಬ್ಬಿಕೊಳ್ಳುವ ಸಿಲಿಕಾನ್ ಸಿಟಿ, ಬಿಟ್ಟು ಹೋಗುತ್ತೇನೆ ಎಂದರೆ ಒಂದು ಹನಿ ಕಣ್ಣೀರೂ ಸುರಿಸುವುದಿಲ್ಲ.

ಜೇಬಿನಲ್ಲಿ ಚಿಲ್ಲರೆ ಕಾಸು ಇಟ್ಟುಕೊಂಡವರಿಗೆ ಫುಟ್‌ಪಾತಿನಲ್ಲಿ ಐದು ರೂಪಾಯಿಗೆ ಚಿತ್ರಾನ್ನವೋ, ಎರಡು ಇಡ್ಲಿಯೋ ಸಿಗುತ್ತೆ. ಯಾವುದೋ ನ್ಯೂಸ್‌ಪೇಪರಿನ ಮೇಲೆ ಒಂದು ಸಣ್ಣ ಬಾಳೆ ಎಲೆಗೆ ಚಟ್ನಿ ಹಾಕಿ ಸುತ್ತಿಕೊಟ್ಟಿದ್ದನ್ನು ಪಕ್ಕದ ಕಲ್ಲಿನ ಬೆಂಚಿನ ಮೇಲೆ ಕುಳಿತು ತಿಂದರೆ ಎಂತಹ ಹಸಿವೂ ಮಾಯ!

ಅಂದಹಾಗೆ, ಈಗ ಹೇಳ ಹೊರಟಿರುವುದು ಬಡವರ ಹೊಟ್ಟೆ ತುಂಬಿಸುವ ಫುಟ್‌ಪಾತ್‌ಗಳಲ್ಲಿನ ಅನ್ನ, ಸಾಂಬರ್, ಹಪ್ಪಳದ ಬಗ್ಗೆ...

ಯಾವುದೋ ಹುದ್ದೆಗಾಗಿ ಪರೀಕ್ಷೆ ಬರೆಯಲು ಮೆಜೆಸ್ಟಿಕ್‌ಗೆ ಬಂದಿಳಿಯುವ ಹುಡುಗನಿಗೆ, ಏನನ್ನೋ ಖರೀದಿಸಲು ನಗರಿಗೆ ಬಂದವರಿಗೆ, ಎಸ್ಸೆಸ್ಸೆಲ್ಸಿ ಫೇಲಾಗಿ ಮನೆಬಿಟ್ಟು ಬರುವ ಹುಡುಗರಿಗೆ, ಬರಗಾಲ ತಾಳದೆ ಹಳ್ಳಿ ಬಿಟ್ಟು ಕೆಲಸ ಹುಡುಕುತ್ತಾ ಉದ್ಯಾನನಗರಿಯ ರೈಲು ಹತ್ತುವವರಿಗೆ, ಯಾರದ್ದೋ ಕನಸಿನ ಕಟ್ಟಡವನ್ನು ಆಕಾಶದೆತ್ತರಕ್ಕೇರಿಸುವ ಗಾರೆ ಕೆಲಸದವರಿಗೆ, ತಾವು ಅಥವಾ ತಮ್ಮ ಮಕ್ಕಳು ಒಮ್ಮೆಯಾದರೂ ಮೆಟ್ರೊದಲ್ಲಿ ಓಡಾಡಬಹುದು ಎಂಬ ಸಣ್ಣ ಆಸೆ ಅಥವಾ ಯೋಚನೆಯೂ ಇಲ್ಲದೇ ನೆಲ ಬಗೆಯುವ ಬಿಹಾರಿಗಳಿಗೆ, ಆಟೊ ಚಾಲಕರಿಗೆ, ಗೆಳೆಯರೊಂದಿಗೆ ಬಾಡಿಗೆ ಕೋಣೆಯಲ್ಲಿ ವಾಸಿಸುವ ಕಡಿಮೆ ಸಂಬಳದಲ್ಲಿ ದುಡಿಯುವವರಿಗೆ, ಅಮಾಯಕರಿಗೆ ಟೋಪಿ ಹಾಕಿ ಬದುಕುತ್ತಿರುವವರಿಗೆ, ಹಿಜಡಾಗಳಿಗೆ, ತರಕಾರಿ ಮಾರುವವರಿಗೆ ಫುಟ್‌ಪಾತ್‌ನಲ್ಲಿರುವ ಮೊಬೈಲ್ ವಾಹನ ಅಥವಾ ತಳ್ಳುಗಾಡಿಗಳೇ ಸ್ಟಾರ್ ಹೋಟೆಲ್‌ಗಳು!

ಬೆಳಿಗ್ಗೆ ಬಿಸಿ ದೋಸೆ, ಇಡ್ಲಿ, ಪೂರಿ, ಚಿತ್ರಾನ್ನ, ಒಂದರ್ಧ ಟೀ, ಮಧ್ಯಾಹ್ನ 10 ರೂಪಾಯಿಗೆ ಅನ್ನ ಸಾಂಬರ್, ಹಪ್ಪಳ, ಮುದ್ದೆಗೆ ಎಕ್ಸಟ್ರಾ ಐದು ರೂಪಾಯಿ, ಇನ್ನೆರಡು ರೂಪಾಯಿ ಕೊಟ್ಟರೆ ಎರಡು ಬೋಂಡಾ. ಕುಡಿಯುವಷ್ಟು ನೀರು. ರಾತ್ರಿಯ ಬೀದಿ ದೀಪದ ಬೆಳಕಿನಲ್ಲಿ 12 ಗಂಟೆವರೆಗೆ ತೆರೆದಿರುವ `ಓಪನ್ ಏರ್ ಕಂಡಿಷನ್~ ಹೋಟೆಲ್‌ಗಳಿವು. ಇನ್ನು ಪಕ್ಕದ ಬಾರುಗಳಲ್ಲಿ ಕುಡಿದು ಬಂದವರಿಗೆ ಚಿಕನ್ ಕಬಾಬ್, ಬೋಟಿ, ತಲೆಮಾಂಸ, ಫಿಷ್ ಫ್ರೈ, ಬೇಯಿಸಿದ ಮೊಟ್ಟೆಯೂ ಉಂಟು.

ಕೆಲವರು ತಳ್ಳೋ ಗಾಡಿಯಲ್ಲಿ, ಇನ್ನು ಕೆಲವರು ರಸ್ತೆಯ ಬದಿಯ ಕಟ್ಟಡದ ಮೇಲೆ ಒಂದೆರಡು ಪಾತ್ರೆಯಲ್ಲಿ ತುಂಬಿಕೊಂಡು ಬಂದು ಊಟ ಮಾರಿ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ನಗರದ ಹೊರ ವಲಯಗಳಲ್ಲಿ, ಹೈವೆಗಳಲ್ಲಿ, ಬಸ್ ಸ್ಟಾಫ್ ಸನಿಹ, ಮಾರ್ಕೆಟ್‌ನಲ್ಲಿ, ಸರ್ಕಲ್‌ಗಳಲ್ಲಿ, ಪಾರ್ಕ್, ಕಚೇರಿ, ಆಸ್ಪತ್ರೆ, ಸಿನಿಮಾ ಟಾಕೀಸು ಮುಂಭಾಗದಲ್ಲಿ, ಫುಟ್‌ಪಾತ್‌ಗಳಲ್ಲಿ ಬಡವರ ಈ ರೆಸ್ಟೋರೆಂಟ್‌ಗಳು ಟೆಂಟು ಹೂಡಿರುತ್ತವೆ. ನಸುಕಿನಿಂದ ಹಿಡಿದು ಮಧ್ಯರಾತ್ರಿಯವರೆಗೆ ಬೀದಿ ದೀಪಗಳ ಬೆಳಕಿನಲ್ಲಿ ಮಾರಾಟ ನಡೆದೇ ಇರುತ್ತದೆ.

ಹೆಚ್ಚಿನವರು ಮನೆಯಲ್ಲಿ ಬೆಳಿಗ್ಗೆ ಮಾಡಿಕೊಂಡು ಮೊಬೈಲ್ ವಾಹನ/ತಳ್ಳು ಗಾಡಿಯಲ್ಲೇರಿಸಿಕೊಂಡು ಬಂದಿರುತ್ತಾರೆ. ಕೆಲವರು ಬಿಸಿ ಮಾಡಿಕೊಡುತ್ತಾರೆ. ಕೆಲವರು ದೋಸೆ, ಪೂರಿ, ಇಡ್ಲಿಯನ್ನು ಸ್ಥಳದಲ್ಲೇ ಮಾಡಿಕೊಡುತ್ತಾರೆ.

ಫುಟ್‌ಪಾತ್ ಕ್ಯಾಂಟಿನ್‌ಗಳ ಪ್ರಮುಖ ಟಾರ್ಗೆಟ್ ಬಡವರು, ಮಧ್ಯಮ ವರ್ಗದವರೇ ಆಗಿರುತ್ತಾರೆ. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡೋರು ಕೆಲವೊಮ್ಮೆ ರಾತ್ರಿ ಕಾರು ನಿಲ್ಲಿಸಿ ಊಟ ಮಾಡಿ ಹೋಗುತ್ತಾರೆ. ಮನೆಯಲ್ಲಿ ತಿಂದು ಬೋರಾದವರೂ ಇಲ್ಲಿಗೆ ಬರುತ್ತಾರೆ. ಯಾರಾದರೂ ನೋಡಿದರೆ ಕಂಜೂಸ್ ಎಂದುಕೊಂಡಾರು ಎಂದು ಮರೆಯಲ್ಲಿ ಚಕಚಕನೆ ಊಟ ಮಾಡುವ ಉದ್ಯೋಗಿಗಳು ಇರುತ್ತಾರೆ!

`ನಂದು ಕಡೂರು ತಾಲ್ಲೂಕಿನ ದೇವನೂರು. ಬೆಂಗಳೂರಿಗೆ ಬಂದು 9 ವರ್ಷಗಳಾಯ್ತು. ಯಶವಂತಪುರದ ಎಪಿಎಂಸಿಯ ಮಂಡಿಯೊಂದರಲ್ಲಿ ಕೆಲಸ ಮಾಡ್ತಿದ್ದೇನೆ. ನಾವು ನಾಲ್ಕು ಮಂದಿ ಗೆಳೆಯರು ಮತ್ತಿಕೆರೆಯಲ್ಲಿ ರೂಮ್ ಮಾಡಿದ್ದೇವೆ. ಇಲ್ಲಿನ ಬದುಕು ಸಾಗ್ತಾ ಇರೋದೇ ರಸ್ತೆ ಬದಿಯಲ್ಲಿ ಸಿಗುವ ಕಡಿಮೆ ಬೆಲೆಯ ಊಟದಿಂದ~ ಎನ್ನುತ್ತಾರೆ ಮಹಾದೇವಪ್ಪ.

ಬಾಡಿಗೆ ಆಟೊ ಓಡಿಸುವ ಚಳ್ಳಕೆರೆಯ ಆನಂದ ಅವರದ್ದು ಮತ್ತೊಂದು ಕಥೆ. `ಸರ್ ನನಗೆ ದಿನಕ್ಕೆ ಆಟೊ ಮಾಲೀಕರು 200 ರೂ ಕೂಲಿ ಕೊಡ್ತಾರೆ. ಚಾಮರಾಜಪೇಟೆಯಲ್ಲಿ ನಾನಿರೋ ರೂಮಿಗೆ ತಿಂಗಳಿಗೆ 2 ಸಾವಿರ ಕೊಡಬೇಕು. ಕರೆಂಟು, ನೀರು, ಪೇಪರ‌್ರು, ಕೇಬಲ್ಲಿಗೆ ಸಾವಿರ ಹೋಗುತ್ತೆ. ಊರಿಗಂತ ಎರಡು ಸಾವಿರ ಎತ್ತಿಡಬೇಕು. ಇನ್ನು ಉಳಿಯುವುದು ಒಂದು ಸಾವಿರ. ಅದರಲ್ಲಿ ತಿಂಗಳೆಲ್ಲಾ ಊಟ ಮಾಡಲು ಸಾಕಾಗುತ್ತಾ? ಹೇಗೊ ಈ ಫುಟ್‌ಪಾತ್‌ನಲ್ಲಿರೋ ಗಾಡಿಗಳ ಊಟ ಮಾಡಿ ಒಂದಿಷ್ಟು ಉಳಿಸುತ್ತೇನೆ~ ಎನ್ನುತ್ತಾರೆ.

ಇವರದ್ದು ಈ ಕಥೆಯಾದರೆ ಮೈಸೂರು ರಸ್ತೆಯಲ್ಲಿ 7 ವರ್ಷಗಳಿಂದ ಮೊಬೈಲ್ ವಾಹನದಲ್ಲಿ ಅನ್ನ, ಸಾರ್ ಮಾರಿ ಬದುಕುತ್ತಿರುವ ಬೇಲೂರಿನ ರಾಜಣ್ಣ ಅವರದ್ದು ಮತ್ತೊಂದು ಕಥೆ. `ನನ್ನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದೇ ಈ ಕೆಲಸದಿಂದ. ನಂದು ಬೇಲೂರಿನ ಬಿಕ್ಕೋಡು. ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಕೊಡುವ ಸಂಬಳ ಸಾಕಾಗುತ್ತಿರಲಿಲ್ಲ. ಹಾಗಾಗಿ ಒಂದು ದಿನ ಕುಟುಂಬ ಸಮೇತ ಬೆಂಗಳೂರು ಬಸ್ಸು ಹತ್ತಿದೆ. ಈಗ ಹೇಗೊ ಜೀವನ ಸಾಗುತ್ತಿದೆ~ ಎನ್ನುತ್ತಾರೆ ರಾಜಣ್ಣ. ಪಕ್ಕದಲ್ಲಿದ್ದ ಹೆಂಡತಿ ಗ್ರಾಹಕರಿಗೆ ಅನ್ನ ಸಾರು ಬಡಿಸುತ್ತಿದ್ದರು. 12ರ ಹರೆಯದ ಮಗ ಚಂದ್ರು ಎಂಟನೇ ತರಗತಿ ಓದುತ್ತಿದ್ದಾನೆ.

`ನಾವು ಮಾರುವುದೇ ಕಡಿಮೆ ರೇಟಿಗೆ. ಅದರಲ್ಲಿ ಪೊಲೀಸರ ಕಾಟ ಬೇರೆ. ಮಾಮೂಲಿ ನೀಡದಿದ್ದರೆ ಮಾರಲು ಬಿಡುವುದಿಲ್ಲ~ ಎನ್ನುತ್ತಾರೆ ಕಲಾಸಿಪಾಳ್ಯದಲ್ಲಿ ದೋಸೆ, ಇಡ್ಲಿ ಮಾರುವ ಪುರುಷೋತ್ತಮ (ಹೆಸರು ಬದಲಿಸಲಾಗಿದೆ).

ರಸ್ತೆಯಲ್ಲಿ ಮಾರುವ ತಿನಿಸು ತಿನ್ನುಬಾರದು ಎಂದು ಹೇಳುವ ವರ್ಗವಿದೆ. ಹೊಗೆ, ರಸ್ತೆಯ ದೂಳು, ನೈರ್ಮಲ್ಯದ ಚಿಂತೆ ಮಾಡುವವರು.

`ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ನೂರಾರು ರೂಪಾಯಿ ತೆತ್ತು ತಿಂದು ತೇಗುತ್ತಾ ಹೊರಬರುವವರು ಒಮ್ಮೆ ಆ ಹೋಟೆಲ್‌ಗಳ ಕಿಚನ್‌ಗೆ ಹೋಗಿ ನೋಡ್ತಾರಾ ಸರ್? ಎಷ್ಟೊ ದಿನಗಳ ಮಾಂಸವನ್ನು ಫ್ರಿಜ್‌ನಲ್ಲಿಟ್ಟು ಬಳಿಕ ಅದರಲ್ಲೇ ಬಿರಿಯಾನಿಯೋ, ಫಿಷ್ ಫ್ರೈಯೊ ಮಾಡಿಕೊಡುತ್ತಾರೆ~ ಎಂದು ನುಡಿಯುತ್ತಾರೆ ಆವಲಹಳ್ಳಿ ಬಿಡಿಎ ಪಾರ್ಕ್ ಬಳಿ ತಳ್ಳುಗಾಡಿಯಲ್ಲಿ ಊಟ ಮಾರುವ ಬಿಡದಿಯ ಮಲ್ಲೇಶ್.

ಅದು ನಾವು ಆಗಿರಬಹುದು, ನೀವೂ ಇರಬಹುದು, ಮತ್ತಿನ್ಯಾರೋ ಆಗಿರಬಹುದು.  ನೆಂಟರು, ಗೆಳೆಯರು ಇಲ್ಲದವರು, ಕೊನೆಗೆ ಯಾವ ಗಲ್ಲಿಯ ಪರಿಚಯವಿಲ್ಲದಿದ್ದರೂ ಈ ನಗರಿಯಲ್ಲಿ ಬದುಕಬಹುದು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT