ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಬುರುಡೆ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಕನ್ನಡದ ಆದಿ ಕವಿ ಪಂಪನ ಹುಟ್ಟೂರು. ಇತ್ತೀಚಿನ ದಿನಗಳಲ್ಲಿ ಅಣ್ಣಿಗೇರಿಯಲ್ಲಿ ಇಲ್ಲಿ ಸಿಕ್ಕಿರುವ ನೂರಾರು ತಲೆ ಬುರುಡೆಗಳಿಂದ ಸುದ್ದಿಯಲ್ಲಿದೆ.

ಕಳೆದ ವರ್ಷದ ಆಗಸ್ಟ್ ಹಾಗೂ ಸೆಪ್ಟೆಂಬರ್ ನಡುವೆ ಒಂದು ದಿನ ಅಲ್ಲಿನ ಅಗಸಿ ಓಣಿ ಬಳಿಯ ದೊಡ್ಡ ಗಟಾರವನ್ನು ಜೆಸಿಬಿ ಯಂತ್ರ ಬಳಸಿ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿತ್ತು. ರಾತ್ರಿ ಮಳೆ ಸುರಿಯಿತು. ಬೆಳಿಗ್ಗೆ ಊರಿನ ಕೆಲವರು ಗಟಾರದ ಗೋಡೆಯ ಅಂಚಿನಲ್ಲಿ ಮೂರ್ನಾಲ್ಕು ತಲೆ ಬುರುಡೆಗಳನ್ನು ಕಂಡರು! ಕೆಲವೇ ಕ್ಷಣಗಳಲ್ಲಿ ಇದು ಸುದ್ದಿಯಾಗಿ ಊರ ತುಂಬ ಹರಡಿತು. ಜನರು ಮಾಡುತ್ತಿದ್ದ ಕೆಲಸ ಬಿಟ್ಟು ಗಟಾರದ ಮುಂದೆ ಜಮಾಯಿಸಿದರು. ಕೆಲವು ಕುತೂಹಲಿಗಳು ಇನ್ನಷ್ಟು ನೆಲ ಅಗೆದರು. ಅಲ್ಲಿ ಇನ್ನೂ ಕೆಲವು ಬುರುಡೆಗಳು ಕಾಣಿಸಿದವು!

ಬುರುಡೆಗಳು ಕಂಡದ್ದೇ ಚರ್ಚೆ ಶುರುವಾಯಿತು. ಮೊದಲು ಇದು ಸ್ಮಶಾನವಾಗಿತ್ತು. ಆದ್ದರಿಂದ ಇಲ್ಲಿ ಬುರುಡೆಗಳಿವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಅದನ್ನು ಒಪ್ಪದೆ   ವಾಮಾಚಾರಕ್ಕೆ ಬಳಸಿದ ಬುರುಡೆಗಳಿವು ಎಂದರು. ಮಾತಿಗೆ ಮಾತು ಬೆಳೆಯುತ್ತ ಹೋಯಿತು. ತಲೆ ಬುರುಡೆಗಳ ಬಗ್ಗೆ ವಿಚಿತ್ರ ವಿಶ್ಲೇಷಣೆಗಳು ಆರಂಭವಾದವು.

ಜೆಸಿಬಿ ಯಂತ್ರ ನಡೆಸುತ್ತಿದ್ದ ವ್ಯಕ್ತಿ ಈ ಬುರುಡೆಗಳಿಗೂ ತನಗೂ ಸಂಬಂಧವೇ ಇಲ್ಲದಂತೆ ತನ್ನ ಕೆಲಸ ಮುಂದುವರಿಸಿದ. ಯಂತ್ರದ ಉಕ್ಕಿನ ಬಾಹುಗಳು ಭೂಮಿಯ ಆಳಕ್ಕೆ ಚಾಚಿ ಮಣ್ಣನ್ನೆತ್ತಿ ಹೊರಕ್ಕೆ ಎಸೆಯುತ್ತಿದ್ದಂತೆ ಜನರು ‘ಹೋ...’ ಎಂಬ ಉದ್ಗಾರ ತೆಗೆದರು. ಯಂತ್ರದ ಬಾಹುಗಳಿಗೆ ಹತ್ತಾರು ಬುರುಡೆಗಳು ಅಂಟಿಕೊಂಡು ಮೇಲೆ ಬಂದವು!

ಇದು ಸಾಮಾನ್ಯ ಸಂಗತಿ ಅಲ್ಲ ಅನ್ನಿಸಿ ಯಂತ್ರ ನಡೆಸುತ್ತಿದ್ದವ ಕೆಲಸ ನಿಲ್ಲಿಸಿದ. ಸುದ್ದಿ ತಿಳಿದು ಜಿಲ್ಲೆಯ ಹಿರಿಯ ಅಧಿಕಾರಿಗಳು, ಪೊಲೀಸರು ಬಂದು ನೋಡಿದರು. ತಮಗೆ ಗೊತ್ತಿರುವುದನ್ನು ಹೇಳಿದರು. ಈ ಬುರುಡೆಗಳ ರಹಸ್ಯ ತಿಳಿಯಬೇಕಾದರೆ ಅವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದರು. ಅಲ್ಲಿವರೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ಬುರುಡೆಗಳು ಸಿಕ್ಕಿದ್ದವು!

ಈ ಬುರುಡೆಗಳು ಯಾರವು ಎಂಬ ರಹಸ್ಯವನ್ನು ತಿಳಿಯಲು ಸಾಧ್ಯವಾಗಿಲ್ಲ. ಪ್ರಾಚ್ಯವಸ್ತು ಇಲಾಖೆಯ ತಜ್ಞರು, ವಿಧಿ-ವಿಜ್ಞಾನ ಪ್ರಯೋಗಾಲಯದವರು ತಮಗೆ ತೋಚಿದ ರೀತಿ ಅವುಗಳ ರಹಸ್ಯ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಣ್ಣಿಗೇರಿ ಜನರು ಈ ಬುರುಡೆಗಳ ಕುರಿತು ಹಲವು ಬಗೆಯ ಕಥೆ- ಉಪಕಥೆಗಳನ್ನು ಹೇಳುತ್ತಿದ್ದಾರೆ.

 ‘ಊರ ಅಗಸಿ ಬಾಗಿಲಿಗೆ (ಮುಖ್ಯ ದ್ವಾರ) ಮಾರು ದೂರದಲ್ಲಿ ಬುರುಡೆಗಳು ಸಿಕ್ಕಿರುವುದರಿಂದ ಹಿಂದೆ ಯಾವುದೋ ಕಾಲದಲ್ಲಿ ಗೆದ್ದ ರಾಜನ ಕಡೆಯವರು ಸೋತವರನ್ನು ಸಾಮೂಹಿಕವಾಗಿ ಕೊಲೆ ಮಾಡಿ ಹೂತು ಹಾಕಿರಬಹುದು!’

ಕಲಚೂರಿ ವಂಶದ ಬಿಜ್ಜಳ, ವಿಜಯನಗರದ ವೀರಬಲ್ಲಾಳ, ಚಾಲುಕ್ಯ ರಾಜರು, ಸವಣೂರ ನವಾಬರು ಮುಂತಾದವರ ಆಳ್ವಿಕೆಗೆ ಅಣ್ಣಿಗೇರಿ ಒಳಪಟ್ಟಿತ್ತು ಎಂದು ಇತಿಹಾಸ ಹೇಳುತ್ತದೆ. ಈ ಮೇಲಿನ ಯಾವುದಾದರೂ ರಾಜನ ಕಾಲದಲ್ಲಿ ನಡೆದ ಸಾಮೂಹಿಕ ಕಗ್ಗೊಲೆಯಲ್ಲಿ ಹತರಾದವರ ತಲೆ ಬುರುಡೆಗಳಿವು ಎಂದು ಬಹಳಷ್ಟು ಜನರು ನಂಬಿಕೊಂಡಿದ್ದಾರೆ.

ಬುರುಡೆಗಳು ಸಿಕ್ಕಿರುವ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಇರುವ ದಾರಿಯನ್ನು ‘ದಂಡಿನ ದಾರಿ’ ಎಂದು ಕರೆಯುತ್ತಾರೆ. 1857ನಂತರ ದೇಶದ ಉದ್ದಗಲದಲ್ಲಿ ಬ್ರಿಟಿಷರ ವಿರುದ್ಧ ಅಲ್ಲಲ್ಲಿ ದಂಗೆಗಳು ನಡೆದವು. ನರಗುಂದ ಸಂಸ್ಥಾನದ ದೊರೆ ಬಾಬಾ ಸಾಹೇಬರು ಬ್ರಿಟಿಷರ ವಿರುದ್ಧ ಬಂಡಾಯವೆದ್ದರು. ಸುತ್ತ ಮುತ್ತಲಿನ ಸಣ್ಣ-ಪುಟ್ಟ ಪಾಳೇಗಾರರು, ದೇಶಪ್ರೇಮಿಗಳು ಬಾಬಾ ಸಾಹೇಬರ ಬಂಡಾಯಕ್ಕೆ ಹೆಗಲು ಕೊಟ್ಟರು. ಮುಂಡರಗಿಯ ಭೀಮರಾಯರು ಅವರಿಗೆ ಸಹಾಯ ಮಾಡಿದ್ದರು ಎನ್ನುವುದು ಜಗಜ್ಜಾಹೀರಾಗಿದೆ. ಬಾಬಾ ಸಾಹೇಬರು ಹಾಗೂ ಮುಂಡರಗಿ ಭೀಮರಾಯರು ಆಂಗ್ಲರ ವಿರುದ್ಧ ಬಂಡೆದ್ದು ಹೋರಾಡಿದ್ದನ್ನು ಆ ಕಾಲದ ಜನಪದರು ಲಾವಣಿ ಕಟ್ಟಿ ಹಾಡಿದ್ದರು. 

ಮುಂಡರಗಿಯಿಂದ ಬಂಡಾಯಗಾರರ ಸೈನ್ಯ ನರಗುಂದಕ್ಕೆ ಹೋದದ್ದು ಅಣ್ಣಿಗೇರಿಯ ಇದೇ ದಂಡಿನ ದಾರಿಯ ಮೂಲಕವೇ. ಅಲ್ಲದೆ ನರಗುಂದದಲ್ಲೂ ಇದೇ ಹಾದಿಯನ್ನು ದಂಡಿನ ದಾರಿ ಎಂದೇ ಇಂದಿಗೂ ಗುರುತಿಸುತ್ತಾರೆ! ಈ ದಾರಿಯಲ್ಲಿ ಬರುತ್ತಿದ್ದ ಬಂಡಾಯಗಾರರನ್ನು ಹೊಂಚು ಹಾಕಿ ಕೂತ ಬ್ರಿಟಿಷರ ದಂಡು ತಡೆದು ದಾಳಿ ಮಾಡಿ ಅವರನ್ನು ಸಾಮೂಹಿಕ ಹತ್ಯೆ ಮಾಡಿರಬಹುದು ಎಂಬ ಊಹೆ ಗ್ರಾಮದ ಅನೇಕರಲ್ಲಿದೆ. ಆಗ ಸತ್ತವರ ತಲೆ ಬುರುಡೆಗಳಿವು ಎಂದೇ ಜನರು ನಂಬಿದ್ದಾರೆ.

‘ನಮ್ಮ ಅಜ್ಜಿ ಸಣ್ಣವಳಿದ್ದಾಗ ಗ್ರಾಮದಲ್ಲಿ ‘ಡೌಗಿ ಬರ’ ಬಂದಿತ್ತಂತೆ. ಆಗ ಜನರು ನಿಂತ-ನಿಂತಲ್ಲೇ ಬಿದ್ದು ಸತ್ತರಂತೆ. ಸತ್ತವರ ಅಂತ್ಯ ಸಂಸ್ಕಾರ ಮಾಡಲೂ ಜನರು ಇರಲಿಲ್ಲವಂತೆ! ಆಗ ಸತ್ತವರ ತಲೆ ಬುರುಡೆಗಳಿರಬಹುದು ಎಂಬ ಅಂತೆ, ಕಂತೆಗಳ ಕತೆಗಳನ್ನು ಹೇಳುವವರೂ ಇದ್ದಾರೆ.

ಇವು ಬ್ರಿಟಿಷರ ವಿರುದ್ಧ ಬಂಡೆದ್ದ ದೇಶಪ್ರೇಮಿಗಳ ತಲೆ ಬುರುಡೆಗಳಲ್ಲ. ಹಿಂದಿನ ಯಾವುದೋ ರಾಜನ ಕಾಲದಲ್ಲಿ ಸಾಮೂಹಿಕ ಕೊಲೆಯಾದವರ ಬುರುಡೆಗಳಿರಬಹುದು. ಕರ ಕೊಡಲು ನಿರಾಕರಿಸಿದವರನ್ನು ಕೊಂದು ಕ್ರೂರತ್ವ ಮೆರೆದಿರಬಹುದು ಎನ್ನುತ್ತಾರೆ ಸ್ಥಳೀಯ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಹರ್ಲಾಪೂರ.

ಅಣ್ಣಿಗೇರಿ ಜನರ ಊಹೆ, ಅನುಮಾನ, ಭಯ, ಅಂತೆ-ಕಂತೆಗಳ ನಡುವೆ ಬುರುಡೆಗಳು ಸಿಕ್ಕ ಜಾಗದಲ್ಲಿ ಉತ್ಖನನವೂ ನಡೆದು ಈಗ ಬರೋಬ್ಬರಿ 600 ಬುರುಡೆಗಳು ಮತ್ತು ದೇಹದ ಅಂಗಾಂಗಗಳ ಮೂಳೆಗಳು ದೊರೆತಿವೆ. ಅಳ್ಳೆದೆಯ ಜನರು ಬುರುಡೆಗಳನ್ನು ನೋಡಿಯೇ ಹೆದರಿದ್ದಾರೆ. ಎಂದೋ ನಡೆದ ಕಗ್ಗೊಲೆಗಳ ಭೀಕರತೆಯನ್ನು ನೆನಪಿಸಿಕೊಂಡು ನಡುಗಿದವರೂ ಇದ್ದಾರೆ.

ಈ ಬುರುಡೆಗಳು ನಮ್ಮ ಹಿರಿಯರವೇ ಆಗಿರಬಹುದು ಎನ್ನುವ ಭಾವನೆಯೂ ಕೆಲವರಲ್ಲಿದೆ.  ಬುರುಡೆಗಳ ರಹಸ್ಯ ಪತ್ತೆ ಹಚ್ಚುವ ಪ್ರಯತ್ನವಾಗಿ ಕೆಲವು ಮಾದರಿಗಳನ್ನು ಭುವನೇಶ್ವರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ತಜ್ಞರು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ತಲೆ ಬುರುಡೆಗಳ ಕಾರ್ಬನ್ ಡೇಟಿಂಗ್ ವರದಿ ನೀಡುತ್ತಾರೆ. ಆ ವರದಿ ಬಂದರೆ ಬುರುಡೆಗಳು ಯಾವ ಕಾಲದವು ಎನ್ನುವುದು ಗೊತ್ತಾಗಬಹುದು.  ಅಲ್ಲಿವರೆಗೆ ಬುರುಡೆ ಇತಿಹಾಸ ವಿಚಿತ್ರ ತಿರುವು ಪಡೆದುಕೊಳ್ಳುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT