ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ ಒಗ್ಗೂಡಿಸಿ ಆಡಿ: ಆಫ್ರಿದಿ ಮನವಿ

Last Updated 19 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ವಿಶ್ವಕಪ್‌ನಲ್ಲಿ ತಂಡದ ಯಶಸ್ಸಿಗಾಗಿ ಬಲವನ್ನು ಒಗ್ಗೂಡಿಸಿ ಆಡಬೇಕೆಂದು ಪಾಕಿಸ್ತಾನ ತಂಡದ ನಾಯಕ ಶಾಹೀದ್ ಆಫ್ರಿದಿ ಅವರು ಸಹ ಆಟಗಾರರಿಗೆ ಮನವಿ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕ್ ಸೋಲನುಭವಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರ ‘ಇದೊಂದು ಆಘಾತಕಾರಿ ಸೋಲು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಈಗಲೇ ಎಚ್ಚೆತ್ತುಕೊಂಡು ವಿಶ್ವಕಪ್‌ನ ಪ್ರತಿಯೊಂದು ಪಂದ್ಯದಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡಲು ತಂಡದ ಆಟಗಾರರು ಪ್ರಯತ್ನ ಮಾಡಬೇಕು’ ಎಂದಿರುವ ಆಫ್ರಿದಿ, ದೇಶದ ಕ್ರಿಕೆಟ್ ಈಗ ಸಂಕಷ್ಟದಲ್ಲಿದೆ. ಅನೇಕ ಸವಾಲುಗಳನ್ನು ಮೀರಿ ನಿಲ್ಲಬೇಕಾಗಿದೆ. ಪಾಕ್ ಜನರಿಗೆ ಹರ್ಷ ನೀಡುವಂಥ ಕೆಲಸವನ್ನು ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅವರ ತಂಡದ ಸದಸ್ಯರಿಗೆ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಖಾಸಗಿ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನಿರಾಸೆ ಹೊಂದಿದ ಸಂದರ್ಭದಲ್ಲಿ ಹಾಗೂ ಅಹಿತಕರ ಘಟನೆಗಳು ನಡೆದಾಗ ದೇಶದ ಜನತೆಯನ್ನು ಕ್ಷಮೆ ಕೇಳುತ್ತಾ ಬಂದಿದ್ದೇವೆ. ಎಷ್ಟೊಂದು ಬಾರಿ ಹೀಗೆ ಮಾಡಲು ಸಾಧ್ಯ? ಈ ಬಾರಿಯ ವಿಶ್ವಕಪ್ ನಂತರವೂ ಅಂಥದೊಂದು ಪರಿಸ್ಥಿತಿ ನಿರ್ಮಾಣ ಆಗಬಾರದು’ ಎಂದು ಎಚ್ಚರಿಸಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಆಫ್ರಿದಿ ಆಡಿರಲಿಲ್ಲ. ಆದರೆ ತಂಡವನ್ನು ಗೆಲುವಿನೆಡೆ ನಡೆಸುವಂಥ ಸಾಮರ್ಥ್ಯದ ಆಟಗಾರರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಆದರೆ ನಿರೀಕ್ಷಿತ ಮಟ್ಟವನ್ನು ಮುಟ್ಟಲಿಲ್ಲ ಎನ್ನುವುದೇ ಸೋಲಿಗೆ ಕಾರಣವೆಂದು ಅವರು ವಿಶ್ಲೇಷಣೆ ಮಾಡಿದ್ದಾರೆ. ‘ತಂಡದಲ್ಲಿರುವ ಅನುಭವಿ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದರೆ ಯುವ ಆಟಗಾರರೂ ವಿಶ್ವಕಪ್ ದೊಡ್ಡದೊಂದು ಅವಕಾಶವೆಂದು ಅರಿತು ಆಡಬೇಕು’ ಎಂದು ಹೇಳಿದ್ದಾರೆ.

‘ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಹೋಗುವುದು ಮೊದಲ ಆದ್ಯತೆ ಆಗಬೇಕು. ಜೊತೆಗೆ ಎಲ್ಲ ಆಟಗಾರರು ದೈಹಿಕ ಸಾಮರ್ಥ್ಯವನ್ನು ಕಾಯ್ದುಳ್ಳಲು ಗಮನ ನೀಡುವುದೂ ಅಗತ್ಯ’ ಎಂದ ಆಫ್ರಿದಿ ‘ಯಾರಿಗೂ ಕೆಟ್ಟದಾಗಿ ಆಡಬೇಕು ಎನ್ನುವ ಉದ್ದೇಶ ಇರುವುದಿಲ್ಲ. ತಂಡದಲ್ಲಿ ಇರುವ ಎಲ್ಲರೂ ತಮ್ಮ ಸಾಮರ್ಥ್ಯ ಮೀರಿ ತಂಡದ ಯಶಸ್ಸಿಗೆ ಕೊಡುಗೆ ನೀಡಲು ಪ್ರಯತ್ನಿಸುವ ಆಶಯ ಹೊಂದಿದ್ದಾರೆ. ಆದರೆ ಕೆಲವೊಮ್ಮೆ ಎಲ್ಲವೂ ನಿರೀಕ್ಷೆಯಂತೆ ನಡೆಯುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT