ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಮತಾಂತರ ಸಲ್ಲದು: ಪ್ರಸಾದ್

Last Updated 15 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ನಂಜನಗೂಡು: ಭಾರತ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ತನಗೆ ಸರಿ ಕಂಡ ಧರ್ಮವನ್ನು ಅನುಸರಿಸುವ ಹಕ್ಕಿದೆ. ಆದರೆ, ಬಲವಂತ ಮತಾಂತರ ಸಲ್ಲದು ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.

`ಶೋಷಿತರ ಧಮ್ಮ ಜಾಗೃತಿ ದಿನ~ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಸಂಘಟನೆಗಳಿಗೆ ಜೀವವೇ ಇಲ್ಲ
ದಲಿತ ಸಂಘರ್ಷ ಸಮಿತಿ, ರೈತ ಸಂಘ, ಕನ್ನಡ ಪರ ಸಂಘಗಳು, ಸಿಪಿಐ, ಸಿಪಿಎಂ ಸೇರಿದಂತೆ ನೂರಾರು ಸಂಘಟನೆಗಳು ರಾಜ್ಯದಲ್ಲಿವೆ. ಆದರೆ, ಯಾವುದಕ್ಕೂ ಜೀವವೇ ಇಲ್ಲ. ಇದ್ದಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುತ್ತಿರಲಿಲ್ಲ. ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ, ಆದಿವಾಸಿಗಳ ವಸತಿ ಶಾಲೆಗಳನ್ನು ಮುಚ್ಚಲು ಸರ್ಕಾರ ಕ್ರಮ ವಹಿಸಿದೆ. ಖಾಸಗಿ ಶಾಲೆ ಸಂಸ್ಥೆಗಳ ಪರ ಸರ್ಕಾರ ಕೆಲಸ ಮಾಡುತ್ತಿದೆ.
-ದೇವನೂರು ಮಹದೇವ, ಸಾಹಿತಿ

ಭಾರತದಲ್ಲಿ ಕಸುಬಿಗೊಂದು ಜಾತಿ ಹುಟ್ಟಿತ್ತು. ಪರಸ್ಪರ ಪ್ರೀತಿ, ವಾತ್ಸಲ್ಯ ಇಲ್ಲದೇ ಮನುಷ್ಯನನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಇಂಥ ಸಂದರ್ಭದಲ್ಲೇ ಅಂಬೇಡ್ಕರ್ ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿದರು. `ಯಾವ ಧರ್ಮದಲ್ಲಿ ನನಗೆ ಸಮಾನತೆ, ಹಕ್ಕು ಬಾಧ್ಯತೆಗಳು ಇಲ್ಲವೋ? ಅಂತಹ ಧರ್ಮದಲ್ಲಿ ಇದ್ದಾದರೂ ಏನು ಪ್ರಯೋಜನ?~ ಎಂಬ  ಚಿಂತನೆ ನಡೆಸಿದ ಅವರು, `ನಾನು ಹಿಂದೂವಾಗಿ ಹುಟ್ಟಿದ್ದೇನೆ.

ಆದರೆ, ಹಿಂದೂವಾಗಿ ಸಾಯುವುದಿಲ್ಲ~ ಎಂದು ಪ್ರತಿಜ್ಞೆ ಕೈಗೊಂಡರು. ಅದರಂತೆ ನಡೆದ 1956 ಅ. 14ರಂದು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ದಲಿತರು ಮೂಲ ಬುದ್ಧರು ಎಂಬ ಚರಿತ್ರೆಯನ್ನು ಬಹಿರಂಗ ಪಡಿಸಿದರು. `ಬುದ್ಧನೆಡೆಗೆ, ನಮ್ಮ ನಡಿಗೆ,  ಸೇರೋಣ ಬನ್ನಿ ಮರಳಿ ಮನೆಗೆ~ ಎಂಬುದು ಅವರ ಕಟ್ಟಕಡೆಯ ಸಂದೇಶ ಎಂದು ಶಾಸಕರು ಸ್ಮರಿಸಿದರು.

ಸಾಹಿತಿ ದೇವನೂರು ಮಹದೇವ ಮಾತನಾಡಿ, ನಂಜನಗೂಡು ಬಳಿ ಕಪಿಲಾ ನದಿ ನಂಜಾಗಿದೆ. ಕಲುಷಿತ ನೀರು ನದಿಗೆ ನಿರಂತರವಾಗಿ ಹರಿಯುತ್ತಿದ್ದು, ವಿಷಮಯವಾಗಿದೆ. ಮನುಷ್ಯನಿಗೆ ಒಂದು ಹೊತ್ತು ಊಟ ಇಲ್ಲದಿದ್ದರೂ, ಕೆಲಸ ಇಲ್ಲದಿದ್ದರೂ ಶುದ್ಧ ಕುಡಿಯುವ ನೀರು ಸಿಗಬೇಕು. ಇದು ಬುದ್ಧನ ಧರ್ಮದಲ್ಲೂ ಅಡಕವಾಗಿದೆ. ಸ್ಥಳೀಯ ಶಾಸಕರು, ದಸಂಸ ವಿವಿಧ ಬಣಗಳು ಈ ಬಗ್ಗೆ ಹೋರಾಟ ನಡೆಸಬೇಕಾಗಿ ಮನವಿ ಮಾಡಿದರು.

ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಎನ್. ವೆಂಕಟೇಶ್, ತಾಲ್ಲೂಕು ಸಂಚಾಲಕ ಕಾರ್ಯ ಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರಪುರ ಮಂಜು, ಬಸವಟ್ಟಿಗೆ ನಾಗೇಂದ್ರ, ಹಲ್ಲರೆ ಮಹದೇವು, ರತ್ನಪುರಿ ಪುಟ್ಟಸ್ವಾಮಿ, ಚೋರನಹಳ್ಳಿ ಶಿವಣ್ಣ, ಬಿ.ಡಿ.ಶಿವಬುದ್ಧಿ, ಸಿದ್ದರಾಜು, ಜಗದೀಶ್, ಮಹದೇವು ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT