ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿ ಪಡೆಯುತ್ತಲೇ ಇರುವ ಕೆರೆ ಏರಿ ರಸ್ತೆ

Last Updated 13 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ರಾಮಲಿಂಗಪುರ ಕೆರೆಗೆ ಉರುಳಿ ಬಿದ್ದ ಟ್ರ್ಯಾಕ್ಟರ್‌ನಲ್ಲಿ ಇದ್ದವರೆಷ್ಟು ಜನ ಎಂಬುದು ಸ್ವತಃ ಟ್ರ್ಯಾಕ್ಟರ್‌ನಲ್ಲಿದ್ದು ಪ್ರಾಣಾಪಾಯದಿಂದ ಪಾರಾದವರಿಗೂ ಗೊತ್ತಿರಲಿಲ್ಲ!

ಟ್ರ್ಯಾಕ್ಟರ್‌ನಲ್ಲಿ ಇದ್ದವರೆಷ್ಟು? ಸತ್ತವರೆಷ್ಟು? ಬದುಕಿಳಿದವರೆಷ್ಟು? ಎಂಬ ಗೊಂದಲ ಬಹಳ ಹೊತ್ತಿನವರೆಗೂ ಕಾಡುತ್ತಲೇ ಇತ್ತು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಾಣೇಹಾರು ಗ್ರಾಮದಿಂದ ಶಿರಾ ತಾಲ್ಲೂಕಿನ ಯರಮಾರನಹಳ್ಳಿ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬರುವ ವೇಳೆ ಟ್ರ್ಯಾಕ್ಟರ್‌ನಲ್ಲಿ ಎಷ್ಟು ಜನ ಕುಳಿತಿದ್ದಾರೆ ಎಂದು ಯಾರೂ ಕೂಡ ಲೆಕ್ಕ ಹಾಕಿರಲಿಲ್ಲ!

ಜೊತೆಗೆ ಅಪಘಾತವಾದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಭರಾಟೆ, ಮೃತ ದೇಹಗಳ ಪತ್ತೆ ಕಾರ್ಯ ನಡೆಯುತ್ತಿದ್ದ ವೇಳೆಗೆ ಪ್ರಾಣಾಪಾಯಾದಿಂದ ಪಾರಾಗಿದ್ದ ಕೆಲವರು ಕಣ್ಣಿಗೆ ಕಾಣಲಿಲ್ಲ. ಹೀಗಾಗಿ ಮತ್ತಷ್ಟು ಮೃತ ದೇಹಗಳು ನೀರಿನಲ್ಲಿ ಇವೆ ಎಂದು ಅಗ್ನಿಶಾಮಕ ಸಿಬ್ಬಂದಿ ಶೋಧಿಸುತ್ತಲೇ ಇದ್ದರು.

ಟ್ರ್ಯಾಕ್ಟರ್‌ನಲ್ಲಿದ್ದವರು 32 ಜನ ಎಂಬ ಲೆಕ್ಕ ಸಿಕ್ಕರೆ, ಮತ್ತೊಮ್ಮೆ 36 ಎಂಬ ಗೊಂದಲ ಕಾಡುತ್ತಿತ್ತು. ಈ ಮಧ್ಯೆ ಪ್ರಾಣಾಪಾಯದಿಂದ ಪಾರಾಗಿದ್ದ 2 ವರ್ಷದ ಕೂಸು ಯಾವುದೇ ಗಾಯವಾಗದೆ ಕೆರೆ ದಡದಲ್ಲಿ ಆಡುತ್ತ ಕುಳಿತಿದ್ದನ್ನು ರಾಮಲಿಂಗಪುರದ ಗ್ರಾಮಸ್ಥರು ಗಮನಿಸಿ ಹಾರೈಕೆ ಮಾಡುತ್ತಿದ್ದರು.

ಕೊನೆಗೆ ಲೆಕ್ಕ ಹಾಕಿದ ನಂತರ ಮೃತರಾದ ಶಿಲ್ಪಾ (11), ಚಿಕ್ಕವ್ವ (50), ರೇಖಾ (18) ಹಾಗೂ ಸಂತೋಷ್ (9) ಸೇರಿದಂತೆ ಟ್ರ್ಯಾಕ್ಟರ್‌ನಲ್ಲಿದ್ದವರು ಒಟ್ಟು 36 ಜನ ಎಂಬ ನಿರ್ಧಾರಕ್ಕೆ ಬರಲಾಯಿತು.

ಕೆರೆ ಏರಿ ಚಿಕ್ಕದಾಗಿದ್ದು, ಅದರ ಮೇಲೆ ರಸ್ತೆ ನಿರ್ಮಿಸಲಾಗಿದೆ. ಆದರೆ ಅಕ್ಕಪಕ್ಕ ತಡೆ ಗೋಡೆ ನಿರ್ಮಿಸಿಲ್ಲ. ರಸ್ತೆ ಕಿರಿದಾದ ಕಾರಣ ನಾಲ್ಕು ಚಕ್ರದ ವಾಹನ ಏಕಮುಖವಾಗಿ ಮಾತ್ರ ಚಲಿಸಲು ಸಾಧ್ಯ.

ಎದುರುಗಡೆಯಿಂದ ಮತ್ತೊಂದು ವಾಹನ ಬಂದರೆ ಹಾದು ಹೋಗಲು ಸಾಧ್ಯವಿಲ್ಲ. ಇಂಥ ಕೆರೆ ರಸ್ತೆಗಳಿಗೆ ಪರ್ಯಾಯ ಮಾರ್ಗ ಹುಡುಕದಿದ್ದರೆ ಮತ್ತಷ್ಟು ಅಪಾಯ ತಪ್ಪಿದ್ದಲ್ಲ ಎಂಬ ಅನಿಸಿಕೆ ಸ್ಥಳದಲ್ಲಿದ್ದ ಜನರಿಂದ ವ್ಯಕ್ತವಾಯಿತು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಜಿಲ್ಲೆಯಲ್ಲಿ ಇಂತಹ ಕಿರಿದಾದ 81 ಕೆರೆ ರಸ್ತೆ ಗುರುತಿಸಲಾಗಿದ್ದು, ವಿಸ್ತರಣೆಗೆ ರೂ. 16 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದರು.

ಟ್ರ್ಯಾಕ್ಟರ್‌ನಲ್ಲಿ 36 ಜನ ಪ್ರಯಾಣಿಸುವುದು ಸಾರಿಗೆ ನಿಯಮದ ಪ್ರಕಾರ ಅಪರಾಧ. ಮೃತರು, ಗಾಯಾಳುಗಳಿಗೆ ವಿಮೆ ಪರಿಹಾರ ದೊರೆಯುವುದಿಲ್ಲ ಎಂಬ ಅಂಶವನ್ನು ಸ್ಥಳದಲ್ಲಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ವ್ಯಕ್ತಪಡಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕ ಕಿರಣ್‌ಕುಮಾರ್, ಎಸ್‌ಪಿ ಟಿ.ಆರ್.ಸುರೇಶ್, ಉಪ ವಿಭಾಗಾಧಿಕಾರಿ ದೀಪ್ತಿ ದಿಲೀಪ್ ಮೆಹಂದಳೆ, ತಹಶೀಲ್ದಾರ್ ವಿ.ಪಾತರಾಜು, ಡಿವೈಎಸ್‌ಪಿ ಜಗದೀಶ್, ಸಿಪಿಐಗಳಾದ ಪಿ.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT