ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಗಾಗಿ ಕಾದಿರುವ ಘಾತುಕ ತಿರುವುಗಳು

Last Updated 3 ಜನವರಿ 2011, 5:55 IST
ಅಕ್ಷರ ಗಾತ್ರ



ಬೀದರ್: ತಾಲ್ಲೂಕಿನ ಇರುವ ಮನ್ನಳ್ಳಿ ಮತ್ತು ಮಲ್ಕಾಪುರ ಕೆರೆಗಳ ಸಮೀಪ ಇರುವ ಘಾತುಕ ತಿರುವು ಅವಘಡ ಸಂಭವಿಸುವುದಕ್ಕೆ ಹೇಳಿ ಮಾಡಿಸಿದಂತಿವೆ. ಸಣ್ಣ ನೀರಾವರಿ ಇಲಾಖೆಯ ಈ ಕೆರೆಗಳ ಮೇಲೆ ಹಾದು ಹೋಗುವ ರಸ್ತೆಗಳಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಯಾವುದೇ ಕ್ಷಣದಲ್ಲಿ ‘ಅಪಾಯ’ ಸಂಭವಿಸಬಹುದಾಗಿದೆ.

ಜಿಲ್ಲಾ ಕೇಂದ್ರದಿಂದ ಅಮಲಾಪುರ ಮಾರ್ಗವಾಗಿ ಮನ್ನಳ್ಳಿ ಗ್ರಾಮ ತಲುಪುವ ಮುನ್ನವೇ ದೊಡ್ಡ ಕೆರೆ ಕಾಣಿಸುತ್ತದೆ. ಕೆರೆಯ ಏರಿಯ ಮೇಲೆ ರಸ್ತೆ ಹೋಗುವುದಕ್ಕಿಂತ ಮುಂಚೆಯೇ ಒಂದು ತಿರುವು ಇದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ವಾಹನ ನೇರವಾಗಿ ಕೆರೆಯೊಳಕ್ಕೆ ಅಥವಾ ಒಡ್ಡಿನ ಕೆಳಗೆ ಬಿದ್ದು ಬಿಡುವ ಸಾಧ್ಯತೆಯಿದೆ. ಈ ರಸ್ತೆಯು ಮನ್ನಳ್ಳಿಯಿಂದ ಮುಂದು ವರೆದು ರಾಷ್ಟ್ರೀಯ ಹೆದ್ದಾರಿ 9ಅನ್ನು ತಲುಪುತ್ತದೆ.

ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಪಕ್ಕದಲ್ಲಿಯೇ ಇರುವ ಕೆರೆಯ ಏರಿಯ ಮೇಲಿನ ರಸ್ತೆಗೆ ಹೋಗುವ ಮುನ್ನ ತಿರುವು ದಾಟಿಯೇ ಮುಂದೆ ಸಾಗಬೇಕಾಗುತ್ತದೆ. ಅಲ್ಲಿಂದ ಮುಂದೆ ಸಾಗುವ ಮಾರ್ಗವು ಆಂಧ್ರಪ್ರದೇಶ ಗಡಿಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಲ್ಕಾಪುರ, ಸುಲ್ತಾನ ಪುರ ಗ್ರಾಮಸ್ಥರು ತಮ್ಮ ತರಕಾರಿ, ಹೂವು ಹಣ್ಣು ಹೊತ್ತ ವಾಹನಗಳನ್ನು ಇದೇ ರಸ್ತೆಯ ಮೂಲಕವೇ ಕ್ರಮಿಸಿ ಬೀದರ್ ನಗರಕ್ಕೆ ತಲುಪಿಸುತ್ತಾರೆ. ತುಂಬಿದ ವಾಹನಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸುವುದು ಮಾಮೂ ಲಿ ಸಂಗತಿ. ಈ ಎರಡೂ ಕೆರೆಗಳು ಅಪಾಯದ ಕರೆಗಂಟೆ ಬಾರಿಸುವ ರೀತಿಯಲ್ಲಿ ಇದ್ದರೂ ಇದುವರೆಗೆ ಯಾವುದೇ ರೀತಿಯ ದುರಂತ ಸಂಭವಿಸಿಲ್ಲ ಎಂಬುದೇ ಸಮಾಧಾನದ ಸಂಗತಿ.

ಕೆರೆಯ ಒಡ್ಡಿನ ಮೇಲಿನ ರಸ್ತೆಯ ಪಕ್ಕ ತಡೆಗೋಡೆ ಅಥವಾ ರೇಲಿಂಗ್ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉತ್ತರ ನೀಡುತ್ತಾರೆ. ಅವರ ಪ್ರಕಾರ ವಾಸ್ತವವಾಗಿ ಕೆರೆಯ ಒಡ್ಡಿನ ಮೇಲೆ ರಸ್ತೆ ನಿರ್ಮಿಸುವ ಹಾಗಿಲ್ಲ. ತುಂಬ ಹಳೆಯ ಕೆರೆಗಳ ಒಡ್ಡುಗಳು ಅಗಲ ಆಗಿರುವುದರಿಂದ ಇಂತಹ ರಸ್ತೆಗಳು ಹುಟ್ಟಿಕೊಂಡಿವೆ.
 
ಇತ್ತೀಚೆಗೆ ನಿರ್ಮಾಣವಾದ ಕೆರೆಯ ಒಡ್ಡುಗಳ ಅಗಲ ಕಡಿಮೆ ಇರುವುದರಿಂದ ರಸ್ತೆ ನಿರ್ಮಿಸುವುದು ಸಾಧ್ಯವೇ ಇಲ್ಲ. ಹಿಂದೆ ಕಾಲು ದಾರಿಗಳಾಗಿದ್ದ ಈ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಥವಾ ಜಿಲ್ಲಾ ಪಂಚಾಯಿತಿಗಳು ತಮ್ಮ ಇಲಾಖೆಯ ಜೊತೆ ಪತ್ರ ಸಂಪರ್ಕ ನಡೆಸಿಲ್ಲ. ಪರವಾನಗಿ ಪಡೆದು ಈ ರಸ್ತೆಗಳನ್ನು ನಿರ್ಮಿಸಲಾಗಿಲ್ಲ ಎಂದು ವಿವರಿಸುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ‘ಕೆರೆಯ ನಿರ್ವಹಣೆಗೆ ಮಾತ್ರ ಹಣ ಇರುತ್ತದೆ.
 
ರಸ್ತೆಗೆ ಸಂಬಂಧಿಸಿದ ಯಾವುದೇ ರೀತಿಯ ಕಾಮಗಾರಿ ಕೈಗೆತ್ತಿಕೊಳ್ಳಲೂ ತಮಗೆ ಅವಕಾಶ ಇಲ್ಲ’ ಎಂದು  ನುಣುಚಿಕೊಳ್ಳುತ್ತಾರೆ. ರಸ್ತೆಗಳನ್ನು  ನಿರ್ಮಿಸಿ ನಿರ್ವಹಣೆ ಮಾಡುತ್ತಿರುವ ಇಲಾಖೆಯೇ ಅಡ್ಡಗೋಡೆ ನಿರ್ಮಿಸಬೇಕು ಎಂಬುದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT