ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೂನಿನ ಮರ್ಮ ನಿಮಗೆ ಗೊತ್ತೇ?

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗಾಳಿ ತುಂಬಿದ ಬಲೂನು ಮೇಲೆ ಮೇಲೆ ಏರುತ್ತದೆ. ಬಣ್ಣ ಬಣ್ಣದ ಚಂದದ ಇತರ ಬಲೂನುಗಳೊಡನೆ ತಾನೂ ತಲೆ ಎತ್ತಿ ಹಾರಾಡುತ್ತದೆ. ಆದರೆ, ಹೀಗೆ ಹಾರಾಡುವಾಗ ಒಂದು ಸಣ್ಣ ಸೂಜಿ ತಾಕಿದರೂ ಬಲೂನು ಕ್ಷಣಾರ್ಧದಲ್ಲಿ ಕೆಳಗಿಳಿಯುತ್ತದೆ.

ನಮ್ಮ ಮಕ್ಕಳ ಮನಸ್ಸೂ ಹಾಗೆ. ಗಾಳಿ ತುಂಬಿದ ಚಂದದ ಬಲೂನಿನಂತೆ ಮನೋಹರ, ಮಧುರ, ಸುಂದರ ಹಾಗೂ ಅಷ್ಟೇ ಮೃದು. ಅನೇಕ ಸಲ ಆತ್ಮವಿಶ್ವಾಸದಿಂದ ಮೇಲೇರುತ್ತಿರುವ ಮಕ್ಕಳ ಮನಸ್ಸಿಗೆ ಸೂಜಿಗಳನ್ನು ತಿಳಿದೋ ತಿಳಿಯದೆಯೋ ನಾವೇ ಚುಚ್ಚಿರುತ್ತೇವೆ. `ನೀನು ಕೈಲಾಗದವನು' `ನೀನೆಲ್ಲಿ ಫಸ್ಟ್ ಕ್ಲಾಸ್ ಬರ್ತೀಯಾ' `ನಿನಗೆ ಯಾವ ಸ್ಕೂಲಲ್ಲೂ ಸೀಟ್ ಸಿಗೋಲ್ಲ' ಎನ್ನುತ್ತಾ ಮಕ್ಕಳ ಮನಸ್ಸೆಂಬ ಬಲೂನುಗಳಿಗೆ ಸದಾ ಘಾಸಿ ಮಾಡುತ್ತಲೇ ಇರುತ್ತೇವೆ. ನಾವಲ್ಲದಿದ್ದರೂ ಇನ್ನಾರೋ ಅರಿತೋ ಅರಿಯದೆಯೋ ಈ ಕೆಲಸ ಮಾಡಿರುತ್ತಾರೆ.

ನಮ್ಮ ಮಗುವಿನಲ್ಲಿ ಕುಂದು ಕೊರತೆಗಳಿರಬಹುದು, ಅದು ಓದಿನಲ್ಲಿ ಹೇಳಿಕೊಳ್ಳುವಷ್ಟು ಜಾಣ ಅಲ್ಲದಿರಬಹುದು. ಇತರ ಮಕ್ಕಳಷ್ಟು ಚೂಟಿ ಇಲ್ಲದಿರಬಹುದು. ಆದರೆ ಅದರ ಬಗ್ಗೆ ಅದಕ್ಕೇ ಕೀಳರಿವೆು ಬಾರದಂತೆ ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಮುನ್ನುಗ್ಗುವಂತೆ ಮಾಡುವುದೇ ಪೋಷಕರ ಅಥವಾ ಹಿರಿಯರ ಜಾಣ್ಮೆ. ಬೇರೆ ಯಾವುದರಲ್ಲಿ ಕಡಿಮೆ ಇದ್ದರೂ ಉತ್ತಮ ಆತ್ಮವಿಶ್ವಾಸ ಹೊಂದಿದ ಮಕ್ಕಳು ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲರು.

ಯಾವುದೇ ಕ್ಷೇತ್ರದಲ್ಲಿ ಒಳ್ಳೆಯ ಸಾಮರ್ಥ್ಯವನ್ನು ಹೊಂದಿದ್ದರೂ ಆತ್ಮವಿಶ್ವಾಸದ ಕೊರತೆ ಇರುವವರು, ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸುವುದರಲ್ಲಿ, ಅದರ ಬಗ್ಗೆ ಸಂತಸ ಪಡುವುದರಲ್ಲಿ ವಿಫಲರಾಗುತ್ತಾರೆ. ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆದ್ದರಿಂದ ಮಕ್ಕಳ ಮನಸ್ಸೆಂಬ ಬಲೂನಿನೊಳಗೆ ಆತ್ಮವಿಶ್ವಾಸವೆಂಬ ಗಾಳಿಯನ್ನು ತುಂಬುವ ಕಾರ್ಯವನ್ನು ಹಿರಿಯರು/ ಪೋಷಕರು ಮಾಡಬೇಕು. ಈ ಕೆಲಸ ಸಾಧ್ಯವಾದರೆ ಬಲೂನು ಪ್ರತಿಕೂಲ ವಾತಾವರಣದಲ್ಲೂ ಮೇಲೇರಬಹುದು!

ಮಕ್ಕಳ ಏರುವ ವೇಗ ತಗ್ಗಬಹುದು, ಕೆಲವೊಮ್ಮೆ ಅಸ್ಥಿರತೆ ಉಂಟಾಗಬಹುದು. ಆದರೆ, ಅವರ ವ್ಯಕ್ತಿತ್ವವೆಂಬ ಬಲೂನಿನಲ್ಲಿ ಆತ್ಮವಿಶ್ವಾಸವೆಂಬ ಗಾಳಿ ಇರುವವರೆಗೆ ಆ ಬಲೂನು ಒಡೆಯಲಾರದು. ಹೀಗೆ ಆತ್ಮವಿಶ್ವಾಸದಿಂದ ಮೇಲೇರುವ ಸಾಮರ್ಥ್ಯವನ್ನು ಮಕ್ಕಳಲ್ಲಿ ನಾವು ತುಂಬಬಲ್ಲವರಾದರೆ ಅವರಲ್ಲಿನ ಸಣ್ಣ ಪುಟ್ಟ ಕೊರತೆಗಳು, ವೈಫಲ್ಯಗಳು ಅವರನ್ನು ಹಿಮ್ಮೆಟ್ಟಿಸಲಾರವು.

ಪ್ರತಿಕೂಲ ವಾತಾವರಣದಲ್ಲೂ ಮೇಲೆ ಏರಿ ಆತ್ಮವಿಶ್ವಾಸದಿಂದ ಸಾಧನೆ ಮಾಡಿ ಯಶಸ್ಸು ಪಡೆದಿರುವ ಅನೇಕರು ಇದಕ್ಕೆ ಜೀವಂತ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT