ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಬಾರದ ಶೌಚಾಲಯ

Last Updated 18 ಜೂನ್ 2012, 5:20 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ಸೂಕ್ತ ನಿರ್ವಹಣೆಯೂ ಇಲ್ಲದೆ, ಉಪಯೋಗಕ್ಕೂ ಬಾರದೇ ಹಂಪಿಯಲ್ಲಿ  ನಿರ್ಮಿಸಲಾಗಿರುವ ಶೌಚಾಲಯಗಳು ಸ್ಮಾರಕಗಳ ಪಟ್ಟಿಗೆ ಸೇರುತ್ತಿವೆ!

ಹಂಪಿ ವಿಶ್ವ ಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನಿರ್ಲಕ್ಷ್ಯ ದಿಂದಾಗಿ ಕೋಟ್ಯಂತರ ಮೌಲ್ಯದ ಮೊಬೈಲ್ ಶೌಚಾಲಯಗಳು ಸಮರ್ಪಕ ನಿರ್ವಹಣೆಯಾಗದೇ ಸಾರ್ವಜನಿಕರು ಉಪಯೋಗಕ್ಕೂ ಬಾರದೇ ಉಳಿದಿವೆ.

ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಹಂಪಿಯಲ್ಲಿ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಧಿಕಾರಕ್ಕೆ ಹೇರಳವಾಗಿ ಆರ್ಥಿಕ ನೆರವು ನೀಡುತ್ತಿದೆ.

ಅಂದಾಜು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಹಂಪಿಯ ಪರಿಸರಕ್ಕೆ ಪೂರಕ ಹೊರ ವಿನ್ಯಾಸದೊಂದಿಗೆ ಸಿದ್ಧಗೊಂಡ 14 ಶೌಚಾಲಯಗಳನ್ನು ಹಂಪಿ ವ್ಯಾಪ್ತಿಯ ವಿರೂಪಾಕ್ಷ ದೇವಾಲಯ, ಕೃಷ್ಣ ದೇವಾಲಯ, ಗೆಜ್ಜಲು ಮಂಟಪ, ಪುರಂದರ ಮಂಟಪ, ವಿಠ್ಠಲ ದೇವಸ್ಥಾನ, ಬಸ್‌ನಿಲ್ದಾಣ ಮತ್ತು ಆನೆಗುಂದಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿದೆ.

ವಿಪರ್ಯಾಸ ಎಂದರೆ ಯಾವುದೇ ಒಂದು ಶೌಚಾಲಯವೂ ನಿರ್ವಹಣೆ ಕಾಣದ ಕಾರಣ ಅಕ್ಕಪಕ್ಕ ಹಾದು ಹೋಗುವುದು ಕಷ್ಟ ಸಾಧ್ಯವಾಗುತ್ತಿದೆ. ಸ್ಮಾರಕಗಳ ಆಸುಪಾಸಿನಲ್ಲಿ ದುರ್ನಾತ ಹರಡುತ್ತಿದ್ದು ಪ್ರವಾಸಿಗರು ನರಕ ಯಾತನೆ ಅನುಭವಿಸುವಂತಾಗಿದೆ.

ಒಂದು ಕಡೆಯೂ ಕುಡಿಯುವ ನೀರಿಲ್ಲ, ನಿಲುಗಡೆಗೆ ಸ್ಥಳವಿಲ್ಲದೆ ಉರಿ ಬಿಸಿಲಲ್ಲಿ ಪರಿತಪಿಸುವ ಪ್ರಯಾಣಿಕರಿಗೆ  ನೀರು ನೀಡುವ ಬದಲು ತಮ್ಮಿಂದ ನಿರ್ವಹಣೆ ಮಾಡಲಾಗದ ಯೋಜನೆ ನೀಡಿದ್ದಾರೂ ಏಕೆ ಎಂಬುದು ಬೆಂಗಳೂರಿನ ಪ್ರವಾಸಿಗ ಕೃಷ್ಣಕುಮಾರ ಪ್ರಶ್ನೆ ಮಾಡುತ್ತಾರೆ.

ಮೊಬೈಲ್ ಶೌಚಾಲಯಗಳಿಂದ ಹಂಪಿ ಪರಿಸರಕ್ಕೆ ಮಾರಕವಾಗುತ್ತಿದೆ, ಸರ್ಕಾರಿ ಅಧಿಕಾರಿಗಳು ಸರ್ಕಾರ ಹೇಳಿದಂತೆ ಮಾಡಬೇಕಾದರೂ ಬಳಕೆಯಾಗುವಂತಹ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಯಾರೂ ಬಳಸುತ್ತಿಲ್ಲ. ನಿರ್ವಹಣೆ ಇಲ್ಲದ ಕಾರಣ ಹತ್ತಿರವೂ ಬಾರದಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ಪ್ರವಾಸಿಗರು.

ಸರ್ಕಾರಿ ಹಣ ಪೋಲು ಮಾಡುವುದು ಸಹ ತಪ್ಪು, ಅನಗತ್ಯವಾಗಿ ಇಷ್ಟು ಹಣ ಪೋಲು ಮಾಡಿರುವುದಾದರೆ ಅಕ್ರಮ ವ್ಯವಹಾರವೂ ನಡೆದಿರಬೇಕು ಎಂಬ ಅನುಮಾನ ಬರುತ್ತದೆ ಎನ್ನುತ್ತಾರೆ ಆಂಧ್ರಪ್ರದೇಶದ ಹೈದರಾಬಾದದಿಂದ ಪ್ರವಾಸಿಗ ವೆಂಕಟೇಶಲು.

ವಾಸ್ತವವಾಗಿ ಬಳಕೆಯಾಗುವ ಯೋಜನೆಗಳನ್ನು ರೂಪಿಸಲು ಮುಂದಾಗಲಿ ಎಂಬುದು ಅನೇಕ ಮೂಲಸೌಕರ್ಯಗಳ ಕೊರತೆಯ ಮಧ್ಯ ಪ್ರಯಾಸಪಡುವ ಹಂಪಿ ಪ್ರವಾಸಿಗರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT