ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯಾಗದ ರೂ 5.7 ಕೋಟಿ: ಇಓ

Last Updated 7 ಫೆಬ್ರುವರಿ 2011, 10:25 IST
ಅಕ್ಷರ ಗಾತ್ರ

ನಂಜನಗೂಡು: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 45 ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿರುವ ಈ ತಾಲ್ಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರಸಕ್ತ ಹಣಕಾಸು ವರ್ಷ 7.40 ಕೋಟಿ ರೂಪಾಯಿ ಖರ್ಚು ಮಾಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆದರೆ ಈವರೆಗೆ ಕೇವಲ 1.7 ಕೋಟಿ ಹಣ ವೆಚ್ಚವಾಗಿದ್ದು, ಇನ್ನೂ 5.7 ಕೋಟಿ ಹಣ ವೆಚ್ಚ ಮಾಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯನ್ನು ಶನಿವಾರ ನಡೆದ ಕೆಡಿಪಿ ಸಭೆಗೆ ಇಓ ಡಿ.ಕೆ.ಲಿಂಗರಾಜು ತಿಳಿಸಿದರು. 

ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಸಕ್ತ ಹಣಕಾಸು ವರ್ಷ ಮುಗಿಯಲು  ಕೇವಲ ಎರಡು ತಿಂಗಳು ಮಾತ್ರ ಉಳಿದಿದೆ. ಉಳಿಕೆ ಹಣ ಹೇಗೆ ಖರ್ಚು ಮಾಡುತ್ತೀರಿ? ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ಲಿಂಗರಾಜು ಅವರನ್ನು ಪ್ರಶ್ನಿಸಿದರು. ಎಲ್ಲ ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಪಿಡಿಓಗಳ ಸಭೆ ಕರೆದು ಸರ್ಕಾರದ ನಿರ್ದೇಶನದಂತೆ ಸೂಕ್ತ ರೀತಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಸೂಚಿಸಿದರು. ಫೆ.1 ರಿಂದ ದಿನಗೂಲಿ ಮೊತ್ತವನ್ನು 125 ರೂಪಾಯಿಗೆ ಏರಿಸಲಾಗಿದೆ. ಕಾಮಗಾರಿ ಕೆಲಸಕ್ಕೆ ಪುರುಷರ ಕೊರತೆ ಇದ್ದರೆ, ಮಹಿಳಾ ಕಾರ್ಮಿಕರಿಂದ ಕಾಮಗಾರಿ ಪೂರ್ಣಗೊಳಿಸಿ ಎಂದರು.

ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷದಿಂದ ಬಡವರಿಗೆ ಯಾವುದೇ ಯೋಜನೆ ಅಡಿ ಒಂದು ಮನೆ ಅಥವಾ ನಿವೇಶನ ವಿತರಿಸಿಲ್ಲ. ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್ ಹೆಸರಿನ ಯೋಜನೆಗಳನ್ನು ಒಂದುಗೂಡಿಸಿ ರಾಜ್ಯ ಸರ್ಕಾರ ಹೊಸದಾಗಿ ಬಸವಾ- ಇಂದಿರಾ ಯೋಜನೆ ಹುಟ್ಟು  ಹಾಕಿದೆ. ಈ ಯೋಜನೆಯ ಪ್ರಕಾರ ಗುಡಿಸಲು ರಹಿತ ಗ್ರಾಮ ಮಾಡಲು ಮೊದಲ ಆದ್ಯತೆ ನೀಡಬೇಕಿದೆ. ಲಾಟರಿ ಎತ್ತುವ ಮೂಲಕ ಆಯ್ಕೆಯಾಗುವ ಗ್ರಾಮಗಳನ್ನು ಮೊದಲಿಗೆ ಕೈಗೆತ್ತಿಕೊಳ್ಳಬೇಕು ಎಂಬ ನಿಯಮವಿದೆ.

ಹೆಂಚಿನ ಮೇಲೆ ಮಟ್ಟಾಳೆ!: ಬಸವಾ- ಇಂದಿರಾ ಯೋಜನೆ ಅಡಿ ಮನೆ ನಿರ್ಮಿಸಲು ಸರ್ಕಾರ 62,250 ರೂಪಾಯಿ ನೆರವು ನೀಡುತ್ತದೆ. ಇದರಲ್ಲಿ 50 ಸಾವಿರ ಸಬ್ಸಿಡಿ, 10 ಸಾವಿರ ಸಾಲದ ರೂಪದಲ್ಲಿ, ಉಳಿದ 2,500 ರೂಪಾಯಿ ಫಲಾನುಭವಿ ಭರಿಸಬೇಕು. ಈ ಯೋಜನೆ ಅಡಿ ಫಲ ಪಡೆಯಲು ನೂರಾರು ಮಂದಿ ತಮ್ಮ ಹೆಂಚಿನ ಮನೆಯ ಮೇಲ್ಛಾವಣಿಗೆ ತೆಂಗಿನ ಗರಿ ಮಟ್ಟಾಳೆ ಹೊದಿಸಿ, ಫೋಟೊ ತೆಗೆಸಿ ಅರ್ಜಿ ಸಲ್ಲಿಸಿರುವ ಸಂಗತಿಯನ್ನು ಬಿಳಿಗೆರೆ ಜಿ.ಪಂ ಕ್ಷೇತ್ರದ ಪಕ್ಷೇತರ ಸದಸ್ಯ ಎಲ್.ಮಾದಪ್ಪ ಬಹಿರಂಗ ಪಡಿಸಿದರು.

‘ಇದು ನಿಜವೇನ್ರಿ?’ ಎಂದು ಸಿದ್ದರಾಮಯ್ಯ ಅಧಿಕಾರಿಯನ್ನು ಕೇಳಿದಾಗ ‘ಹೌದು’ ಎಂದರು. ಆದರೆ ಇದನ್ನು ಪತ್ತೆ ಮಾಡಲಾಗಿದೆ. ಇಬ್ಜಾಲ ಗ್ರಾಮದಲ್ಲಿ 100 ಮಂದಿಗೆ ಈಗ 13 ಮಂದಿ ಮಾತ್ರ ಆಯ್ಕೆ ಯಾಗಿದ್ದಾರೆ. ಇದೇ ರೀತಿ ಎಲ್ಲ ಕಡೆ ಪತ್ತೆ ಮಾಡಲಾಗಿದೆ ಎಂದರು. ತಾಲ್ಲೂಕಿನಲ್ಲಿ ಒಟ್ಟು 3700 ಮಂದಿಗೆ ಅವಕಾಶವಿದ್ದು, ಅರ್ಹ ಫಲಾನು ಭವಿಗಳ ಪಟ್ಟಿ ಸಿದ್ಧವಾಗುತ್ತಿದೆ ಎಂದರು. ಇಗ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಕಳಪೆ ಪೈಪ್ ಅಳವಡಿಸಿ 1.5 ಲಕ್ಷ ನಷ್ಟಕ್ಕೆ ಕಾರಣ ಆಗಿರುವ ಪಿಆರ್‌ಇಡಿಯ ಕಿರಿಯ ಎಂಜಿನಿಯರ್ ವೇತನದಲ್ಲಿ ನಷ್ಟದ ಹಣವನ್ನು ವಸೂಲು ಮಾಡುವಂತೆ ಸೂಚಿಸ ಲಾಯಿತು. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪಿಆರ್ ಇಡಿಯ ಜೆಇ ಧನಲಕ್ಷ್ಮಿ, ಪುರಸಭೆಯ ಜೆಇ ಕುಮಾರ್ ಅವರನ್ನು ಸಿದ್ದು ತರಾಟೆಗೆ ತೆಗೆದುಕೊಂಡರು.

ಆಹಾರ ಇಲಾಖೆ, ಪುರಸಭೆ, ಕೃಷಿ, ಆರೋಗ್ಯ, ನೀರಾವರಿ, ಲೋಕೋಪ ಯೋಗಿ ಸೇರಿ ಕೆಲವು ಇಲಾಖೆಗಳ ಪ್ರಗತಿಯ ಪರಾಮರ್ಶೆ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಆರಂಭ ವಾಗಬೇಕಿದ್ದ ಸಭೆ ಮಧ್ಯಾಹ್ನ 2.30ಕ್ಕೆ ಶುರುವಾಯಿತು. ಸಮಯ ಸಾಲದ ಹಿನ್ನೆಲೆಯಲ್ಲಿ ಮುಂದುವರಿದ ಸಭೆಯನ್ನು ಫೆ.17 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ.ಶಾಸಕ ವಿ.ಶ್ರೀನಿವಾಸಪ್ರಸಾದ್, ಪುರಸಭೆ ಅಧ್ಯಕ್ಷ ಜಿ.ಮುಹೀರ್ ಅಹಮದ್, ಜಿಲ್ಲಾ ಯೋಜನಾ ನಿರ್ದೇಶಕಿ ಜಹೀರಾ ನಸೀಮ್, ಜಿ.ಪಂ ಸದಸ್ಯ ರಾದ ಡಾ.ಶಿವರಾಮ, ಕೆಂಪಣ್ಣ ಕೆ.ಮಾರುತಿ, ಗೀತಾ, ರೇವಮ್ಮ, ಟಿಎಚ್‌ಓ ನಾಗೇಶ್, ಆಹಾರ ನಿರೀಕ್ಷಕರಾದ ಗಜಾನನ, ಜಗದೀಶ್ ಹಾಗೂ ಇನ್ನಿತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT