ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೇಪೇಟೆಯ ಸಾರಥಿಗಳು

Last Updated 29 ಮೇ 2012, 19:30 IST
ಅಕ್ಷರ ಗಾತ್ರ

`ಆಟೊ ಕತೆಗಳು~ ಅಂಕಣ ನಿಯಮಿತವಾಗಿ ಓದುತ್ತಿದ್ದೇನೆ. ಆಟೊ ಚಾಲಕರ ಬಗ್ಗೆ ಸಾಮಾನ್ಯವಾಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಈ ಅಂಕಣ ಖಂಡಿತಾ ಸಹಕಾರಿಯಾಗುತ್ತದೆ.

ಬಳೇಪೇಟೆ ಪ್ರದೇಶದಲ್ಲಿ ದಶಕಗಳಿಂದಲೂ ವ್ಯಾಪಾರ ನಡೆಸುತ್ತಿರುವ ನಾನು ಮತ್ತು ನನ್ನಂತಹ ನೂರಾರು ಮಂದಿ ವ್ಯಾಪಾರಿಗಳಿಗೆ ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸಾರ್ಹತೆಯನ್ನೇ ಬಂಡವಾಳವಾಗಿರಿಸಿಕೊಂಡು ಹಗಲಿರುಳೂ ದುಡಿಯುತ್ತಿರುವ ಆಟೊ ಚಾಲಕರ ಒಡನಾಟವಿದೆ.

ಬೆಂಗಳೂರಿನ ಹೃದಯ ಭಾಗವಾದ ಚಿಕ್ಕಪೇಟೆ, ಬಳೆಪೇಟೆ ಮತ್ತಿತರ ವ್ಯಾಪಾರಕೇಂದ್ರಿತ ಪ್ರದೇಶಗಳಲ್ಲಿ ನಿತ್ಯವೂ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ದೊಡ್ಡ ಪ್ರಮಾಣದ ಸರಕುಗಳು ನಿರಂತರವಾಗಿ ಸಾಗಣೆಯಾಗುತ್ತವೆ.

ಇಲ್ಲಿ ನೀವು ಯಾವುದೇ ಅಂಗಡಿಗೆ ಹೋಗಿ ನೋಡಿದರೂ ಆ ಅಂಗಡಿಯೆದುರು ಒಂದಾದರೂ ಆಟೊ ನಿಂತಿರುವುದನ್ನು ಕಾಣಬಹುದು. ನಿಮ್ಮ ಖರೀದಿ ಮುಗಿದಾಕ್ಷಣ ಆ ಆಟೊ ಚಾಲಕನೊಂದಿಗೆ ಶುಲ್ಕ ನಿಗದಿಮಾಡಿಕೊಂಡು ನಿಮ್ಮ ವಿಳಾಸ, ಫೋನ್ ನಂಬರ್ ಕೊಟ್ಟು ನಿಶ್ಚಿಂತೆಯಿಂದ ನಿಮ್ಮ ದಾರಿ ಹಿಡಿದರಾಯಿತು. ನಿಮ್ಮ ಸರಕು ನಿರ್ವಿಘ್ನವಾಗಿ ಮನೆ ಬಾಗಿಲಿಗೆ ತಲುಪಿರುತ್ತದೆ!

ಹಾಗಂತ ಈ ಆಟೊಗಳು ಅಂಗಡಿಯವರದ್ದೂ ಅಲ್ಲ. ಈ ಚಾಲಕರಿಗೆ ಯಾವ ನಿಶ್ಚಿತವಾದ ಸಂಬಳವೂ ಇಲ್ಲ. ಅಂಗಡಿಗೆ ಬರುವ ಗಿರಾಕಿಗಳೇ ಇವರಿಗೆ ಗಿರಾಕಿಗಳು. ಒಬ್ಬೊಬ್ಬ ಆಟೊದವರು ನಾಲ್ಕೈದು ಅಂಗಡಿಗಳನ್ನು ಗೊತ್ತು ಮಾಡಿಕೊಂಡಿರುತ್ತಾರೆ. ಅಕಸ್ಮಾತ್ ತಾವು ರಜೆ ಮಾಡಬೇಕಾದ ಸಂದರ್ಭದಲ್ಲಿ ಬದಲಿ ಆಟೊವನ್ನು ವ್ಯವಸ್ಥೆ ಮಾಡಿ `ತಮ್ಮ ಅಂಗಡಿ~ಯ ಗಿರಾಕಿಗಳ ಸೇವೆ ಸುಸೂತ್ರವಾಗಿ ಸಾಗುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಅಂಗಡಿ ಮಾಲೀಕರಿಗೂ ನಿಶ್ಚಿಂತೆ.

ಶ್ರಮಜೀವಿಗಳಾದ ಈ ಚಾಲಕರು ಕೆಲವೊಮ್ಮೆ ಲೋಡ್ ಅನ್‌ಲೋಡ್ ಕೂಡಾ ಮಾಡುತ್ತಾರೆ. ಇವರು ಚಿಕ್ಕಪೇಟೆಯ ವ್ಯಾಪಾರ ವಹಿವಾಟಿನ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ.

ನಮ್ಮ ರಾಮು
ನಮ್ಮ ಅಂಗಡಿಗೆ ಬರುವ ರಾಮು ಅಂತಹವರಲ್ಲಿ ಒಬ್ಬರು. ನೀವು ಎಷ್ಟೇ ಸಾಮಾನು ಕಳುಹಿಸಿದರೂ ಒಂದು ಸಾಮಾನು ಹೆಚ್ಚು ಕಡಿಮೆ ಆಗದಂತೆ ತಲುಪಿಸುತ್ತಾರೆ.
ರಾತ್ರಿ ತಲುಪಿಸಲಾಗದಿದ್ದರೆ ಮರುದಿನ ತಲುಪಿಸುವ ಹೊಣೆಗಾರಿಕೆ ಅವರದು.

ರಾಮು ಕೈಯಲ್ಲಿ ನಾವು ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮಾನು ಕಳುಹಿಸುತ್ತೇವೆ. ಒಂದು ಬಾರಿಯೂ ಹೆಚ್ಚು ಕಡಿಮೆ ಆಗಿಲ್ಲ. ಕೆಲವೊಮ್ಮೆ ಚೆಕ್ ಕಳುಹಿಸುವ, ತರಿಸುವ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡುತ್ತಾರೆ.ರಾಮುನಂತಹ ನೂರಾರು ಆಟೊ ಚಾಲಕರು ಈ ಪ್ರದೇಶದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT