ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕಾಲೇಜಿಗೆ ಹುಸಿ ಬಾಂಬ್ ಬೆದರಿಕೆ

Last Updated 15 ಸೆಪ್ಟೆಂಬರ್ 2011, 18:55 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಕೌಲ್‌ಬಝಾರ್ ರೈಲ್ವೆ ಗೇಟ್ ಬಳಿ ಇರುವ ಮಹಮ್ಮದೀಯ ಶಿಕ್ಷಣ ಸಂಸ್ಥೆಗೆ ಸೇರಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ ಬಾಂಬ್ ಇರಿಸಲಾಗಿದೆ ಎಂಬ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ತೀವ್ರ ಆತಂಕ ಮೂಡಿತ್ತು.

`ಶಾಲೆಯಲ್ಲಿ ಬಾಂಬ್ ಇರಿಸಲಾಗಿದೆ~ ಎಂಬ ಕರೆ ಬಂದಿದ್ದಾಗಿ ಪ್ರಾಚಾರ್ಯ ಇದ್ರಿಸ್ ಮೌಲಾನಾ ಅವರು ಮಧ್ಯಾಹ್ನ 12ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ, ಸಂಜೆ 4.30ರವರೆಗೆ ಶೋಧ ಕಾರ್ಯ ನಡೆಸಿದರು.

ಮಹಮ್ಮದೀಯ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಕೌಲ್‌ಬಜಾರ್‌ನಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ತೀವ್ರ ಆತಂಕಗೊಂಡ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಧಾವಿಸಿದರು.

ಪೊಲೀಸರ ಸಲಹೆಯ ಮೇರೆಗೆ ಮಧ್ಯಾಹ್ನವೇ ಶಾಲೆಗೆ ರಜೆ ಘೋಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ತೆರಳುವಂತೆ ಸೂಚಿಸಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಯಿತು.

ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿಗಳ ಚೀಲವನ್ನೂ ತಪಾಸಿಸಲಾಯಿತಲ್ಲದೆ, ಪ್ರತಿ ಕೊಠಡಿ, ಶಾಲೆಯ ಆವರಣ, ಸಂಶಯಾಸ್ಪದವಾಗಿ ಬಿದ್ದಿದ್ದ ವಸ್ತುಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, `ದೂರವಾಣಿ ಕರೆ ಹುಸಿ~ ಎಂದು ಘೋಷಿಸಿದರು.

ಎರಡು ವರ್ಷಗಳ ಹಿಂದೆಯೂ ಇದೇ ಶಾಲೆಯಲ್ಲಿ ಬಾಂಬ್ ಇಡಿಸಲಾಗಿದೆ ಎಂಬ ಹುಸಿ ಕರೆ ಬಂದಿತ್ತು. ದೂರು ದಾಖಲಿಸಿಕೊಂಡಿರುವ ಕೌಲ್ ಬಜಾರ್ ಠಾಣೆ ಪೊಲೀಸರು ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ, ಸಿಬ್ಬಂದಿ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಹೆಚ್ಚುವರಿ ಪೊಲೀಸ್ ವರಿಷ್ಠ ಚಂದ್ರಶೇಖರ್ ಕ್ಯಾತನ್, ಇನ್‌ಸ್ಪೆಕ್ಟರ್ ಗಿರೀಶ ಭೋಜಣ್ಣವರ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT