ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಗಣಿ ಅಕ್ರಮ: ಸಿಬಿಐ ತನಿಖೆ ಆರಂಭ

Last Updated 12 ಜನವರಿ 2011, 6:35 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕ- ಆಂಧ್ರಪ್ರದೇಶ ಗಡಿಯಲ್ಲಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪೆನಿ ಸೇರಿ ಆರು ಕಂಪೆನಿಗಳು ನಡೆಸಿವೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ಮನವಿಯ ಮೇರೆಗೆ ಸಿಬಿಐ ತನಿಖೆ ಆರಂಭವಾಗಿದೆ. ಎಂಟು ಜನ ಅಧಿಕಾರಿಗಳ ಸಿಬಿಐ ತಂಡ, ಮಂಗಳವಾರ ಉಭಯ ರಾಜ್ಯಗಳ ಗಡಿಯಲ್ಲಿರುವ ಗಣಿ ಪ್ರದೇಶದಲ್ಲಿ ಸಮಗ್ರ ಪರಿಶೀಲನೆ ನಡೆಸಿತು.

ಅಕ್ರಮ ಗಣಿಗಾರಿಕೆ, ಗಡಿ- ಗಣಿ ಒತ್ತುವರಿ ಅಲ್ಲದೆ, ಕೋಟ್ಯಂತರ ರೂಪಾಯಿ ರಾಜಸ್ವ ವಂಚನೆ ಉದ್ದೇಶದಿಂದ ಅಕ್ರಮ ಅದಿರು ಸಾಗಣೆ ಮಾಡಿರುವ ಕುರಿತು ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಿದ್ದು, ಸಿಬಿಐನ ಆಂಧ್ರಪ್ರದೇಶದ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ ನೇತೃತ್ವದ ತಂಡ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಗಣಿ ಪ್ರದೇಶಗಳ ಮಾಹಿತಿ  ಸಂಗ್ರಹಿಸಿತು.

ಓಬಳಾಪುರಂ ಮೈನಿಂಗ್ ಕಂಪೆನಿ-1 ಮತ್ತು 2 (ಓಎಂಸಿ), ಅನಂತಪುರ ಮೈನಿಂಗ್ ಕಂಪೆನಿ (ಎಎಂಸಿ), ಅಂತರಗಂಗಮ್ಮ ಕೊಂಡ ಮೈನಿಂಗ್ ಕಂಪೆನಿ (ಎಜಿಕೆ), ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ (ವೈಎಂ), ಬಳ್ಳಾರಿ ಐರನ್ ಓರ್ ಪ್ರೈ. ಲಿ.ನ (ಬಿಐಓಪಿ) ಗಣಿ ಪ್ರದೇಶಗಳಲ್ಲಿ ಅಕ್ರಮ ನಡೆದಿದೆ ಎಂದು ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಿತ್ತು.

ಆದರೆ ಇದರ ವಿರುದ್ಧ ಆಂಧ್ರ ಹೈಕೋರ್ಟ್‌ನಲ್ಲಿ ಗಣಿ ಕಂಪೆನಿಗಳು ಸಲ್ಲಿಸಿದ್ದ ತಾಂತ್ರಿಕ ಆಕ್ಷೇಪಣೆ ಅರ್ಜಿಯಿಂದಾಗಿ ತನಿಖೆಗೆ ತಡೆಯಾಜ್ಞೆ ನೀಡಲಾಗಿತ್ತು. ಕಳೆದ ಡಿ.16ರಂದು ಆ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಇದೀಗ ತನಿಖೆ ಆರಂಭವಾಗಿದೆ.

ಪರಿಶೀಲನೆ: ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿನಾರಾಯಣ, ಹೈಕೋರ್ಟ್ ತಡೆಯಾಜ್ಞೆ ತೆರವಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ, ಇಲ್ಲಿನ ಗಣಿ ಚಟುವಟಿಕೆ ಮತ್ತು ಗಣಿ ಗುತ್ತಿಗೆ ಬಗ್ಗೆ ಸಮಗ್ರವಾಗಿ ಅರಿಯಲು ಸಿಬಿಐ ತಂಡ ಸ್ವತಃ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ. ಗಣಿಗಾರಿಕೆ ಪ್ರದೇಶ, ಅದಿರಿನ ವರ್ಗೀಕರಣದ ಬಗ್ಗೆ ಇರುವ ಎಲ್ಲ ದಾಖಲೆಗಳನ್ನು ವಿವಿಧ ಇಲಾಖೆಗಳಿಂದ ಸಂಗ್ರಹಿಸಲಾಗುವುದು ಎಂದರು.

ಈ ಪ್ರದೇಶದಲ್ಲಿದ್ದ ಸರ್ವೆ ಸ್ಟೇಷನ್ ಹಾಗೂ ದೇವಸ್ಥಾನಗಳ ‘ಲ್ಯಾಂಡ್ ಮಾರ್ಕ್’ಗಳ ಕುರಿತ ದಾಖಲೆಗಳು ಹಾಗೂ ನಕ್ಷೆಗಳನ್ನೆಲ್ಲ ಪರಿಶೀಲಿಸಲಾಗುವುದು. ಎಲ್ಲ ಮಾಹಿತಿ ಕಲೆ ಹಾಕಿ, ಸಮಗ್ರ ವಿಷಯ ಅರಿತು ತನಿಖೆ ನಡೆಸಲಾಗುವುದು ಎಂದರು.‘ಇಲ್ಲಿಂದಲೇ ನಿರ್ದಿಷ್ಟ ತನಿಖೆ ಆರಂಭವಾಗಿದ್ದು, ನಾವೆಲ್ಲ ಈ ವಿವಿಧ ಗಣಿ ಪ್ರದೇಶಗಳಲ್ಲಿನ ಗಣಿ ಗುತ್ತಿಗೆ ಪರವಾನಗಿ, ಸ್ಥಿತಿಗತಿ ಬಗ್ಗೆ ಹಾಗೂ ಇನ್ನಿತರ ಬೆಳವಣಿಗೆ ಕುರಿತು ಅರಿಯುತ್ತಿದ್ದೇವೆ. ಹಿಂದಿನ ಮತ್ತು ಈಗಿನ ಸ್ಥಿತಿಗತಿ ತಿಳಿದುಕೊಳ್ಳಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಸಿಬಿಐ ಎಸ್.ಪಿ ವೆಂಕಟೇಶಲು, ವಿಶೇಷ ಅಧಿಕಾರಿ ಆರ್.ಎಂ. ಖಾನ್, ಸಿಬಿಐ ಬೆಂಗಳೂರು ಡಿಐಜಿ ಇತೇಂದ್ರ ಅವರೂ ಒಳಗೊಂಡಂತೆ ಎಂಟು ಜನ ಸಿಬಿಐ ಅಧಿಕಾರಿಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಚಲಪತಿ, ಅರಣ್ಯ ಇಲಾಖೆ ಕೆಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಗ್ರ ಪರಿಶೀಲನೆ: ಈ ಗಣಿ ಪ್ರದೇಶಗಳಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸಿಬಿಐ ತಂಡ ಪ್ರದೇಶದ ಪುರಾತನ ನಕ್ಷೆಯ ಸಹಾಯದೊಂದಿಗೆ ತುಲನಾತ್ಮಕವಾಗಿ ಪರಿಶೀಲನೆ ನಡೆಸಿತಲ್ಲದೆ, ಸಂಬಂಧಿಸಿದ ಪ್ರದೇಶಗಳ ಇಂಚಿಂಚೂ ಮಹತ್ವದ ಭಾವಚಿತ್ರಗಳನ್ನೂ  ಸಂಗ್ರಹಿಸಿತು.

ಈ ಸಂದರ್ಭದಲ್ಲಿ ಗಣಿ ಕಂಪೆನಿಗಳ ಪ್ರತಿನಿಧಿಗಳೂ ಹಾಜರಿದ್ದು, ಗಣಿಗಾರಿಕೆ ನಡೆಸಿದ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ವಿವರ ನೀಡಿದರು. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಇದೇ ಪ್ರದೇಶದ ಸಮೀಕ್ಷೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ನೀಡಿದ್ದನ್ನು ಸ್ಮರಿಸಬಹುದು.


ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು 2009ರ ನವೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ಆಗಿನ ಸಿಎಂ ರೋಸಯ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಂದ್ರದ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದರು.  ಇದನ್ನು ಪುರಸ್ಕರಿಸಿದ ಕೇಂದ್ರ ಗೃಹ ಸಚಿವಾಲಯವು ಅಕ್ರಮ ಗಣಿಗಾರಿಕೆ  ಪ್ರಕರಣವನ್ನು ಸಿಬಿಐಗೆ ವಹಿಸಲು 2009ರ ಡಿ. 1ರಂದು ಹಸಿರು ನಿಶಾನೆ ತೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT