ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಿಲ್ಲ... ಬೆಳೆಯಿಲ್ಲ...

Last Updated 11 ಅಕ್ಟೋಬರ್ 2011, 5:20 IST
ಅಕ್ಷರ ಗಾತ್ರ

ಬಳ್ಳಾರಿ: `ಕನಿಷ್ಠ 20ರಿಂದ 40 ಕಾಯಿ ಹಿಡಿಯುತ್ತಿದ್ದ ಶೇಂಗಾದ ಬಳ್ಳಿಯಲ್ಲಿ ಈ ವರ್ಷ ಮಳೆಯ ಅಭಾವದಿಂದ ಕೇವಲ 10ರಿಂದ 12 ಕಾಯಿಗಳಿವೆ. ಅವೂ ಜೊಳ್ಳುಜೊಳ್ಳು. ಬಲಿಷ್ಠ ಕಾಳುಗಳೇ ಇಲ್ಲ. ಹತ್ತಿಯ ಪ್ರತಿ ಗಿಡದಲ್ಲಿ ಹತ್ತಾರು ಕಾಯಿಗಳ ಬದಲು ಅಲ್ಲೊಂದು, ಇಲ್ಲೊಂದು ಕಾಯಿ ಕಾಣುತ್ತಿವೆ. ರೊಟ್ಟಿ ಮಾಡಿಕೊಂಡು ತಿನ್ನಲೂ ಆಗದಂತೆ ಜೋಳದ ಬೆಳೆಯೂ ಒಣಗಿ ಚೆಂಡು ನೆಲಕ್ಕೆ ಚೆಲ್ಲಿದೆ~.

ಮಳೆಗಾಗಿ ಆಕಾಶದತ್ತಲೇ ದೃಷ್ಟಿ ನೆಟ್ಟಿರುವ ಜಿಲ್ಲೆಯ ಸಂಡೂರು ತಾಲ್ಲೂಕಿನ ವಿಠ್ಠಲಾಪುರ, ರಾಜಾಪುರ, ಗಂಗಲಾಪುರ ಮತ್ತಿತರ ಗ್ರಾಮಗಳ ರೈತರ ಗೋಳು ಇದು. ಮಳೆಯಿಲ್ಲದೆ ಮುಂಗಾರು ಬೆಳೆಯೆಲ್ಲ ಹಾಳಾಗಿ ಹೋಗಿದ್ದು, ಮುಂದೆ ಹಿಂಗಾರು ಬೆಳೆಯಾದರೂ ಕೈ ಹಿಡಿಯದಿದ್ದರೆ ಗುಳೆ ಹೋಗದೆ ವಿಧಿಯಿಲ್ಲ ಎಂಬ ಸ್ಥಿತಿ ಅವರದ್ದಾಗಿದೆ.

`ಬಿಸಿಲನಾಡು~ ಎಂದೇ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ರೈತ ಸಮೂಹ ಆತಂಕಕ್ಕೆ ಒಳಗಾಗಿದೆ. ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಮೂರು ತಾಲ್ಲೂಕುಗಳಲ್ಲಿ ತುಂಗಭದ್ರಾ ಜಲಾಶಯದ ನೀರಾವರಿ ಸೌಲಭ್ಯವಿದ್ದು, ಮಿಕ್ಕ ಕಡೆಯ ಬೆಳೆಯೆಲ್ಲ ಮಳೆಯಾಶ್ರಿತವಾಗಿದೆ.

ನೀರಾವರಿ ಸೌಲಭ್ಯವಿರುವ ಬಳ್ಳಾರಿ, ಹೊಸಪೇಟೆ ಮತ್ತು ಸಿರುಗುಪ್ಪ ತಾಲ್ಲೂಕಿನಲ್ಲೂ 2.20 ಲಕ್ಷ ಹೆಕ್ಟೆರ್ ಭೂಮಿಯು ಮಳೆಯನ್ನೇ ಅವಲಂಬಿಸಿದೆ.

ಸಾಮಾನ್ಯವಾಗಿ ಜಿಲ್ಲೆಯಾದ್ಯಂತ ಅಕ್ಟೋಬರ್‌ವರೆಗೆ ಒಟ್ಟು 587 ಮಿಲಿ ಮೀಟರ್ ಮಳೆ ಬೀಳಬೇಕು. ಆದರೆ, ಈವರೆಗೆ ಸುರಿದ ಮಳೆಯ ಪ್ರಮಾಣ ತೀರ ಕಡಿಮೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚೇ ಸುರಿದಿದ್ದ ಮಳೆ, ನಂತರದ ಅವಧಿಯಲ್ಲಿ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಯೆಲ್ಲ ಒಣಗಿ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಸೆಪ್ಟಂಬರ್‌ನಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ 141 ಮಿಮೀ ಬದಲಿಗೆ, ಕೇವಲ 23 ಮಿಮೀ ಮಳೆ ಸುರಿದಿದ್ದು, ಅಕ್ಟೋಬರ್‌ನಲ್ಲಿ ಈವರೆಗೆ ಕೇವಲ 12 ಮಿ.ಮೀ. ಮಳೆ ಸುರಿದಿದೆ. ಇದರಿಂದಾಗಿ ಜಿಲ್ಲೆಯ ಕೆರೆಗಳು ಸಂಪೂರ್ಣ ಬತ್ತಿ ಹೋಗಿ, ಜನ ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ.

ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆಯಿಂದಾಗಿ ಹರ್ಷಚಿತ್ತರಾಗಿದ್ದ ರೈತರು, ಹತ್ತಿ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ತೊಗರಿ, ಜೋಳ, ಔಡಲ, ನವಣೆ ಮತ್ತಿತರ ಬೆಳೆ ಬೆಳೆದಿದ್ದರು. ಆದರೆ, ಬಹುತೇಕ ಬೆಳೆ ಕಾಳುಕಟ್ಟುವ ಹಂತದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಬೆಳೆದುನಿಂತ ಬೆಳೆಯೆಲ್ಲ ಒಣಗಿಹೋಗಿದೆ.
ಶೇ. 70ಕ್ಕೂ ಅಧಿಕ ಪ್ರಮಾಣದ ನಷ್ಟವನ್ನು ಈಗಾಗಲೇ ಅನುಭವಿಸಿರುವ ರೈತರು, ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದು, ಆ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.

`ಸಾಲಸೋಲ ಮಾಡಿ ಕಾಳು ಬಿತ್ತಿದ್ದೇವೆ. ಸಕಾಲಕ್ಕೆ ಮಳೆ ಬಾರದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಡ್ಡಿ ಸಮೇತ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆ ಮನೆಮಾಡಿದ್ದು, ರಾತ್ರಿ ನಿದ್ದೆಯೇ ಬರದಂತಾಗಿದೆ~ ಎಂದು ಗಂಗಲಾಪುರದ ರೈತಮಹಿಳೆ ಬಸಮ್ಮ ಅವಲತ್ತುಕೊಳ್ಳುತ್ತಾರೆ.

ಮಳೆ ಕೈಕೊಟ್ಟಿದ್ದರಿಂದ ಎರಡು ತಿಂಗಳಿಂದ ಕೃಷಿ ಕೂಲಿಕಾರರಿಗೆ ಕೆಲಸವೇ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಪರಿಹಾರ ಕಾಮಗಾರಿ ಆರಂಭಿಸಿ ಕೂಲಿಕಾರರು ಗುಳೆ ಹೋಗದಂತೆ ತಡೆಯಬೇಕು ಎಂದು ವಿಠ್ಠಲಾಪುರ ಗ್ರಾಮದ ಸಣ್ಣಹನುಮಂತಪ್ಪ ಕೋರುತ್ತಾರೆ.

ಜಿಲ್ಲೆಯಾದ್ಯಂತ ಒಟ್ಟು 53798 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತೆನ ಮಾಡಲಾಗಿದ್ದ ಶೇಂಗಾ ಬೆಳೆಯು ಹೂಬಿಟ್ಟು ಕಾಯಿ ಬಲಿಯುವ ಹಂತದಲ್ಲಿತ್ತು. ಮಳೆ ಸುರಿಯದ್ದರಿಂದ ಈಗಾಗಲೇ ಶೇ. 90ರಷ್ಟು ಶೇಂಗಾ ಒಣಗಿ ಮಣ್ಣುಪಾಲಾಗಿದೆ.

ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಸಂಡೂರು, ಹೊಸಪೇಟೆ, ಕೂಡ್ಲಿಗಿ ತಾಲ್ಲೂಕುಗಳಲ್ಲಿ ಮಳೆ ಸಮರ್ಪಕವಾಗಿ ಸುರಿಯದ್ದರಿಂದ ಅವುಗಳನ್ನು `ಬರಗಾಳ ಪೀಡಿತ~ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ತಮ್ಮ ತಾಲ್ಲೂಕಲ್ಲೂ ಮಳೆ ಸುರಿಯದೆ, ಬರದ ಛಾಯೆ ಆವರಿಸಿದ್ದು, ಕೂಡಲೇ `ಬರಪೀಡಿತ~ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಹೂವಿನ ಹಡಗಲಿ ತಾಲ್ಲೂಕಿನ ರೈತರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT