ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ನಿರಾಸೆ ಮೂಡಿಸಿದ `ಮುಂಗಾರಿನ ಮಿಂಚು'

Last Updated 3 ಜುಲೈ 2013, 5:30 IST
ಅಕ್ಷರ ಗಾತ್ರ

ಬಳ್ಳಾರಿ: ಬಿರುಬಿಸಿಲಿಗೆ ಹೆಸರಾಗಿರುವ ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಕಣ್ಣಾ- ಮುಚ್ಚಾಲೆ ಆಡುತ್ತಿರುವ ವರುಣ, ಮಂಗಳವಾರ ಮಧ್ಯಾಹ್ನ ಧರೆಗಿಳಿಯುವ ಮನಸ್ಸು ಮಾಡಿದರೂ, ನಿರೀಕ್ಷೆಯ ಮಟ್ಟದಲ್ಲಿ ಮಳೆ ಸುರಿಸದೆ ತೀವ್ರ ನಿರಾಸೆ ಮೂಡಿಸಿದ.

ಮುಂಗಾರಿನ ಆರಂಭದಲ್ಲಿ ಒಂದೆರಡು ಬಾರಿ ಬಿರು ಮಳೆ ಸುರಿದಿದ್ದನ್ನು ಬಿಟ್ಟರೆ ಮತ್ತೆ ಮಳೆಯ ಸುಳಿವೇ ಇರದ್ದರಿಂದ ಆಕಾಶದತ್ತಲೇ ದೃಷ್ಟಿ ನೆಟ್ಟಿರುವ ರೈತ ಸಮೂಹ ಇರಿಸಿ ಕೊಂಡಿದ್ದ ಭಾರಿ ವರ್ಷಧಾರೆಯ ನಿರೀಕ್ಷೆ ಮತ್ತೆ ಹುಸಿಯಾಯಿತು.

ನಗರದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾದ ತುಂತುರು ಮಳೆ 15 ನಿಮಿಷಗಳ ಕಾಲ ಒಂದಷ್ಟು ಹನಿಗಳನ್ನು ಚಿಮುಕಿಸಿ ಕಣ್ಮರೆಯಾಗಿ, ಮತ್ತೆ ಒಂದೆರಡು ಬಾರಿ ಪ್ರತ್ಯಕ್ಷ ವಾದರೂ ಬಿರುಸು ಕಾಣಲಿಲ್ಲ.

ಶಾಲೆ- ಕಾಲೇಜುಗಳ ವಿದ್ಯಾರ್ಥಿ ಗಳು, ಸಾರ್ವಜನಿಕರು ದಿಢೀರ್ ಸುರಿದ ಅನಿರೀಕ್ಷಿತ  ಮಳೆಯಿಂದ ರಕ್ಷಣೆ ಪಡೆದಕೊಳ್ಳಳು ಅಲ್ಲಲ್ಲಿ ಆಶ್ರಯ ಪಡೆದು ನಿಂತುಕೊಂಡಿದ್ದು ಕಂಡು ಬಂತು. ಮಳೆಯ ಕೊರತೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ಮಾತ್ರ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪೂರ್ಣ ಗೊಳಿಸಿರುವ ಜಿಲ್ಲೆಯ ಮಳೆಯಾಶ್ರಿತ ಪ್ರದೇಶಗಳ ರೈತರು ಹಸಿ ಮಳೆಯಾದಲ್ಲಿ ಪ್ರಮುಖ ಬೆಳೆಗಳ ಬಿತ್ತನೆಗೆ ಚಾಲನೆ ನೀಡುವ ಆಶಯ ಹೊಂದಿದ್ದು, ಮಳೆ ಸುರಿಯದ್ದರಿಂದ ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ.

ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ವಿವಿಧೆಡೆ ಮಧ್ಯಾಹ್ನ ಸಾಧಾರಣವಾದ ಮಳೆ ಸುರಿದರೆ, ಹೊಸಪೇಟೆ ನಗರವೂ ಒಳಗೊಂಡಂತೆ ತಾಲ್ಲೂಕಿನ ಕೆಲವೆಡೆ ತುಂತುರು ಮಳೆ ಸುರಿದಿದೆ.

ಸಂಡೂರು, ಕೂಡ್ಲಿಗಿ, ಕೊಟ್ಟೂರು ಗಳಲ್ಲಿ ಮೋಡ ಕವಿದ ವಾತಾವರಣ ವಿದ್ದರೂ ಮಳೆ ಸುರಿದಿಲ್ಲ.

ವಾಡಿಕೆಗಿಂತ ಅಧಿಕ ಮಳೆ
ಬಳ್ಳಾರಿ ಜಿಲ್ಲೆಯಾದ್ಯಂತ ಕಳೆದ ಜೂನ್ ತಿಂಗಳಲ್ಲಿ 604.1 ಮಳೆಯಾಗಿದ್ದು, ವಾಡಿಕೆ ಮಳೆಗಿಂತ 69.1 ಮಿಮೀ ಅಧಿಕ ಮಳೆ ಸುರಿದಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೇಶ್ ಶಿವಾಚಾರ್ಯ ತಿಳಿಸಿದ್ದಾರೆ. ಬಳ್ಳಾರಿ ತಾಲ್ಲೂಕಿ ನಲ್ಲಿ 91.7 ಮಿಮೀ, ಹಡಗಲಿ- 90.8, ಹಗರಿಬೊಮ್ಮನಹಳ್ಳಿ- 86, ಹೊಸಪೇಟೆ- 86.4, ಕೂಡ್ಲಿಗಿ- 38.5, ಸಂಡೂರು- 106, ಸಿರುಗುಪ್ಪ ತಾಲ್ಲೂಕಿನಲ್ಲಿ 104.7 ಮಿಮೀ ಸೇರಿದಂತೆ ಒಟ್ಟು 604.1 ಮಳೆಯಾಗಿದ್ದು, ಸರಾಸರಿ 86.3 ಮಿಮೀ ಮಳೆ ಸುರಿದಂತಾಗಿದೆ.

ಜುಲೈ 1ರಂದು ಹಗರಿ ಬೊಮ್ಮನಹಳ್ಳಿಯಲ್ಲಿ 3.6 ಮಿಮೀ, ಹಾಗೂ ಹೊಸಪೇಟೆಯಲ್ಲಿ 3.8 ಮಿ.ಮೀ. ಮಳೆಯಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT