ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ, ಹಡಗಲಿ ಬಿಟ್ಟು ಬೇರೆಡೆ ನೋಡದ ಪಿಟಿಪಿ

ಉಸ್ತುವಾರಿ ಸಚಿವರಿಂದ ಜಿಲ್ಲೆಯ ಉಪೇಕ್ಷೆ
Last Updated 27 ಸೆಪ್ಟೆಂಬರ್ 2013, 4:47 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಿರುಗುಪ್ಪ, ಕಂಪ್ಲಿ, ಕುರುಗೋಡು, ಸಂಡೂರು, ಕೂಡ್ಲಿಗಿ, ಕೊಟ್ಟೂರು,  ಹಗರಿ ಬೊಮ್ಮನಹಳ್ಳಿ, ಹೊಸಪೇಟೆ ಮತ್ತಿತರ ಊರುಗಳು ಜಿಲ್ಲೆಯಲ್ಲಿವೆ  ಎಂಬುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ’.
ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಂಡಿರುವ ಜಿಲ್ಲೆಯ ಜನ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪಿ.ಟಿ. ಪರಮೇಶ್ವರ ನಾಯ್ಕ ಕೇವಲ ತಾವು ಆಯ್ಕೆ ಯಾಗಿ ಬಂದಿರುವ ಹೂವಿನ ಹಡಗಲಿ ಕ್ಷೇತ್ರ ಹಾಗೂ ಜಿಲ್ಲಾ ಕೇಂದ್ರ ಬಳ್ಳಾರಿಯನ್ನು ಹೊರತು ಪಡಿಸಿ ಬೇರೆ ಕಡೆ ಗಮನ ಹರಿಸದಿರುವುದು ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಅಧಿಕಾರಕ್ಕೆ ಬಂದು 4 ತಿಂಗಳು ಕಳೆದರೂ ಸಚಿವರು ಜಿಲ್ಲೆಯ ಪ್ರಮುಖ ಪಟ್ಟಣವಾಗಿರುವ ಸಿರುಗುಪ್ಪದತ್ತ ಒಮ್ಮೆ ಯೂ ಕಣ್ಣು ಹಾಯಿಸಿಲ್ಲ. ಸಂಡೂರಿ ನತ್ತ ಸುಳಿದಿಲ್ಲ. ಕುತೂ ಹಲಕ್ಕೂ ಕೂಡ್ಲಿಗಿ ಮತ್ತು ಕೊಟ್ಟೂರಿನತ್ತ ಕಾಲಿಟ್ಟಿಲ್ಲ. ಕಂಪ್ಲಿ, ಕುರುಗೋಡುಗಳು ಇವೆ ಎಂಬುದನ್ನೂ ಗಮನಸಿಲ್ಲ. ಕಾಟಾಚಾರಕ್ಕೆ ಎಂಬಂತೆ ಹೊಸಪೇಟೆ ಮತ್ತು ಹಗರಿ ಬೊಮ್ಮನಹಳ್ಳಿಗೆ ತೆರಳಿದ್ದನ್ನು ಬಿಟ್ಟರೆ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ಜನಸಂಪರ್ಕ ಸಭೆ ಕರೆದಿಲ್ಲ ಎಂಬುದು ಜನರ ದೂರು.

ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಯಲ್ಲಿ ಪ್ರಮುಖ ಕಾರ್ಯಕ್ರಮ, ಸಭೆಗಳಿಗೆ ತೆರಳುವಾಗ ಮಾರ್ಗ ಮಧ್ಯದಲ್ಲಿರುವ ಹಗರಿ ಬೊಮ್ಮನಹಳ್ಳಿ ಹಾಗೂ ಹೊಸಪೇಟೆಗಳಲ್ಲಿ ಕೆಲವೇ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದ್ದಾರೆ. ಅವರು ‘ಹೂವಿನ ಹಡಗಲಿ ಉಸ್ತುವಾರಿ ಸಚಿವ’ರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿದೆ.

ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪರಮೇಶ್ವರ ನಾಯ್ಕ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಿಯೂ ಅನುಭವ ಹೊಂದಿದ್ದು, ಗ್ರಾಮೀಣ ಪ್ರದೇಶಗಳ ಜನರ ಸಮಸ್ಯೆಗಳನು್ನ ಅರಿತವರಾಗಿದ್ದಾರೆ. ಜಿಲ್ಲೆಯ ಪೂರ್ವ ಭಾಗದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರ ಸಂಕಷ್ಟಗಳ ನಿವಾರಣೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂಬುದು ಸಿರುಗುಪ್ಪ
ತಾಲ್ಲೂಕಿನ ಹಚ್ಚೊಳ್ಳಿ ಗ್ರಾಮದ ಗೋವಿನ ಹನುಮಂತಪ್ಪ ಅವರ ಕೋರಿಕೆಯಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ಚುನಾವಣೆ ಮುಗಿದು ಆರು ತಿಂಗಳೇ ಕಳೆದರೂ ನೂತನ ಸದಸ್ಯರಿಗೆ ಇದುವರೆಗೆ ಅಧಿಕಾರ ದೊರೆತಿಲ್ಲ. ಸಚಿವರು ಪಟ್ಟಣ, ನಗರಗಳ ಜನರ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಿ ಸಭೆ ನಡೆಸಿ ಜನರ ಸಮಸ್ಯೆಗಳ ನಿವಾರಣೆಗೆ ಮುಂದಾಗುವ ಅಗತ್ಯವಿದೆ ಎಂದು ಕೊಟ್ಟೂರಿನ ಎಸ್‌.ಎಸ್‌. ಕೊಟ್ರಪ್ಪ ಮನವಿ ಮಾಡಿದ್ದಾರೆ.

ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಬಳ್ಳಾರಿ ಮತ್ತು ಹೂವಿನ ಹಡಗಲಿ ಹೊರತುಪಡಿಸಿ ಜಿಲ್ಲೆಯ ವಿವಿಧೆಡೆ ಭೇಟಿ ಕೊಟ್ಟಿರುವ ವಿವರ:

* ಸಂಡೂರು ತಾಲ್ಲೂಕಿನ ಚೋರನೂರು ಜಿ.ಪಂ. ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಷ್ಟೇ ಚೋರನೂರಿಗೆ ಭೇಟಿ ನೀಡಿ ಮತ ಯಾಚಿಸಿದ್ದಾರೆ.

* ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೂಡ್ಲಿಗಿ ಮತ್ತು ಕಂಪ್ಲಿಯಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಕಾಂಗ್ರೆಸ್‌ ವೀಕ್ಷಕರ ಸಭೆಯಲ್ಲಿ, ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿಯಲ್ಲಿನ ಮಠದಲ್ಲಿ ನಡೆದಿದ್ದ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

* ಹಗರಿ ಬೊಮ್ಮನಹಳ್ಳಿಯಲ್ಲಿ ಬಿಡಿಸಿಸಿ ಬ್ಯಾಂಕ್‌ ಅತಿಥಿಗೃಹ ಉದ್ಘಾಟನೆ ಹಾಗೂ ಕ್ರೀಡಾಕೂಟದ ಉದ್ಘಾಟನೆಗೆ ಬಂದಿದ್ದನ್ನು ಬಿಟ್ಟರೆ ಮತ್ತೆ ಬಂದಿಲ್ಲ.

* ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನಲ್ಲಿರುವ ಸಕ್ಕರೆಹಳ್ಳಿ ಮತ್ತು ಮೋರಗೇರಿಗಳು ಹೂವಿನ ಹಡಗಲಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಆ ಗ್ರಾಮಗಳಲ್ಲಿ ಒಂದೆರಡು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭಾಗವಹಿಸಿದ್ದಿದೆ.

ಈ ಎಲ್ಲ ಕಡೆ ಸಚಿವರು 15ರಿಂದ 20 ನಿಮಿಷ ಭೇಟಿ ನೀಡಿರುವುದು ವಿಶೇಷ.

‘ಸಚಿವರು ಜಿಲ್ಲೆಯಲ್ಲಿ ಸುತ್ತಾಡಲಿ’
ಜಿಲ್ಲೆಯಾದ್ಯಂತ ಸಂಚರಿಸಿ ಜನರ ಸಮಸ್ಯೆ ಅರಿಯುವುದು ಸಚಿವರ ಕರ್ತವ್ಯ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆ ನಡೆಸುವ ಮೂಲಕ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಮಟ್ಟದಲ್ಲೂ ಸಭೆ ಏರ್ಪಡಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು. ಸಚಿವರ ಕೆಲಸ– ಕಾರ್ಯಗಳ ಮೌಲ್ಯಮಾಪನಕ್ಕೆ ಕಾಂಗ್ರೆಸ್‌ ವರಿಷ್ಠರೇ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ ಸಚಿವರು ಜಿಲ್ಲೆಯಲ್ಲಿ ಸಂಚರಿಸಿದ್ದು ಕಂಡುಬರುತ್ತಿಲ್ಲ.

ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡುವುದನ್ನು ಸಚಿವರು ರೂಢಿಸಿಕೊಳ್ಳಬೇಕು.
ನೇಮರಾಜ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

‘ಹಡಗಲಿಗೆ ಸೀಮಿತ ಸಚಿವ’

ಜಿಲ್ಲಾ ಉಸ್ತುವಾರಿ ಸಚಿವರು ಹೂವಿನ ಹಡಗಲಿಗೆ ಸೀಮಿತವಾಗಿದ್ದಾರೆ ಅನಿಸುತ್ತಿದೆ. ಜಿಲ್ಲೆಯಾದ್ಯಂತ ಇರುವ ಜನರ ಸಮಸ್ಯೆಗಳೇನು, ಅವುಗಳ ಪರಿಹಾರೋಪಾಯಗಳೇನು? ಎಂಬು ದರ ಬಗ್ಗೆ ಗಮನ ಹರಿಸುವ ಮೂಲಕ ಜನರ ನೋವಿಗೆ ಸ್ಪಂದಿಸಲಿ.
  ಪಿ. ಬ್ರಹ್ಮಯ್ಯ, ಬಿಎಸ್‌ಆರ್‌ ಕಾಂಗ್ರೆಸ್‌ ಸಂಚಾಲಕ, ಕಂಪ್ಲಿ

ನಿರೀಕ್ಷೆ ಹುಸಿಗೊಳಿಸಬಾರದು

ಈ ಹಿಂದೆ ಆಡಳಿತ ನಡೆಸಿರುವ ಸರ್ಕಾರದ ಬಗ್ಗೆ ಬೇಸತ್ತಿರುವ ಜನ ಹೊಸ ಸರ್ಕಾರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ನಿರೀಕ್ಷೆ ಹುಸಿಗೊಳಿಸಬಾರದು.
ಚಂದ್ರಶೇಖರ ಆಚಾರ್‌, ಕಪಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT