ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗೆ ಜವಳಿ ಪಾರ್ಕ್‌ ಘೋಷಣೆ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗ: ‘ಹೈದರಾಬಾದ್–ಕರ್ನಾಟಕ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ಬಳ್ಳಾರಿಯಲ್ಲಿ ಜವಳಿ ಪಾರ್ಕ್‌ ಹಾಗೂ ಗುಲ್ಬರ್ಗದಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು ಕೇಂದ್ರದಿಂದ ಸೂಕ್ತ ಅನುದಾನ ನೀಡಲಾಗುವುದು’ ಎಂದು ಕೇಂದ್ರ ಜವಳಿ ಖಾತೆ ಸಚಿವ ಕಾವೂರು ಸಾಂಬಶಿವರಾವ್ ಭರವಸೆ ನೀಡಿದರು.

ನಗರ ಹೊರವಲಯದ ನಂದೂರು–ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ ‘ಗುಲ್ಬರ್ಗ ಜವಳಿ ಪಾರ್ಕ್’ ಮೂಲಸೌಲಭ್ಯ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗುಲ್ಬರ್ಗ, ರಾಯಚೂರು, ಬಳ್ಳಾರಿಯಂತಹ ಹಿಂದುಳಿದ ಪ್ರದೇಶಗಳು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಜವಳಿ ಪಾರ್ಕ್‌ ಸ್ಥಾಪನೆಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿ ಗುಲ್ಬರ್ಗದಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಉದ್ದೇಶದಿಂದ ಸಿದ್ಧ ಉಡುಪು ತಯಾರಿಕೆ ಬಗ್ಗೆ ತರಬೇತಿ ನೀಡಲು ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.
ಇದಕ್ಕಾಗಿ ರೂ. 3 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಗುಲ್ಬರ್ಗ ಜವಳಿ ಪಾರ್ಕ್‌ನಿಂದ 10 ಸಾವಿರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಲಭ್ಯವಾಗಲಿದ್ದು, ವಾರ್ಷಿಕ 200 ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಾದ್ಯಂತ 90 ದಶಲಕ್ಷ ಜನರು ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಜವಳಿ ಉದ್ಯಮಕ್ಕೆ ಕೇಂದ್ರ ಸರ್ಕಾರ ವಾರ್ಷಿಕ ರೂ. 19 ಸಾವಿರ ಕೋಟಿ ಸಹಾಯಧನ ನೀಡುತ್ತಿದೆ. ಅಲ್ಲದೇ, ಪ್ರತಿ ವರ್ಷ ರೂ. 60 ಸಾವಿರ ಕೋಟಿ ಮೌಲ್ಯದ ಸಿದ್ಧ ಉಡುಪುಗಳನ್ನು ರಫ್ತು ಮಾಡಲಾಗುತ್ತಿದೆ. ಹತ್ತಿ ಬೆಳೆದು ರಫ್ತು ಮಾಡುವುದರಿಂದ ದೇಶದ ಬೊಕ್ಕಸಕ್ಕೆ ಹೆಚ್ಚಿನ ಲಾಭ ಸಿಗುವುದಿಲ್ಲ. ಹೀಗಾಗಿ, ಸಿದ್ಧ ಉಡುಪುಗಳನ್ನು ತಯಾರಿಸಲು ಉತ್ತೇಜನ ನೀಡಲಾಗುತ್ತಿದೆ. ಇದರಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಬಡ ಕುಟುಂಬಗಳ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ’ ಎಂದು ಅಭಿಪ್ರಾಯಪಟ್ಟರು.

ಜವಳಿ ಸಚಿವ ಬಾಬುರಾವ್ ಚಿಂಚನಸೂರು ಮಾತನಾಡಿ, ‘ಗುಲ್ಬರ್ಗದಲ್ಲಿ 200 ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, 5 ಸಾವಿರ ಜನರು ಉದ್ಯೋಗ ಪಡೆದಿದ್ದಾರೆ. ಜವಳಿ ಪಾರ್ಕ್‌ ಸ್ಥಾಪನೆಯಿಂದ ಇನ್ನೂ 10 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ ಎಂದರು.

ಜಿಲ್ಲೆಯಲ್ಲಿರುವ ಸಿದ್ಧ ಉಡುಪು ಕೈಗಾರಿಕೆಗಳನ್ನು ಸಂಘಟಿತ ರೂಪದಲ್ಲಿ ತರುವ ನಿಟ್ಟಿನಲ್ಲಿ 57 ಉದ್ಯಮಿಗಳು ಚಿಂತನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನೊಂದಿಗೆ ಜವಳಿ ಪಾರ್ಕ್‌ ಸ್ಥಾಪಿಸಲು ಯೋಜನೆ ರೂಪಿಸಿದ್ದರು. ಆ ಯೋಜನೆ ಇದೀಗ ಸಾಕಾರಗೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಕೇಂದ್ರ ಜವಳಿ ಮಂತ್ರಾಲಯ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಮುಂದಾದರೂ ರಾಜ್ಯ ಸರ್ಕಾರ ಉಚಿತ ಭೂಮಿ ಮತ್ತು ನೀರಿನ ಸೌಲಭ್ಯ ಒದಗಿಸಲಿದೆ. ಬಳ್ಳಾರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT