ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗೆ ಬೇಸಿಗೆಯಲ್ಲಿ ಸಮರ್ಪಕ ನೀರು

Last Updated 11 ಜನವರಿ 2012, 6:25 IST
ಅಕ್ಷರ ಗಾತ್ರ

ಬಳ್ಳಾರಿ: ಬೇಸಿಗೆ ವೇಳೆ ಬಳ್ಳಾರಿ ನಗರ ನಿವಾಸಿಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಸಮರ್ಪಕವಾಗಿ ಸರಬರಾಜು ಮಾಡಲು ಅಲ್ಲಿಪುರದ ಕೆರೆಯಲ್ಲಿ ನೀರನ್ನು ಸಂಗ್ರಹಿಸಲಾಗಿದೆ ಎಂದು ಶಾಸಕ ಜಿ. ಸೋಮಶೇಖರರೆಡ್ಡಿ ತಿಳಿಸಿದರು.

ತಾಲ್ಲೂಕಿನ ಅಲ್ಲಿಪುರ ಬಳಿ ನಿರ್ಮಿಸಲಾಗಿರುವ ಕೆರೆಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 500 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ 7.5 ಮೀಟರ್ ನೀರು ಸಂಗ್ರಹಿಸಲಾಗಿದ್ದು, ಇನ್ನೂ ನೀರನ್ನು ಹರಿಬಿಡಲಾಗುತ್ತಿದೆ. ಎಚ್‌ಎಲ್‌ಸಿ ಕಾಲುವೆಯಿಂದ ಬರುತ್ತಿರುವ ನೀರನ್ನು ನೇರ ನೀರು ಶುದ್ದೀಕರಣ ಘಟಕಕ್ಕೆ ಹರಿಸಿ, ಶುದ್ಧಿಕರಿಸಿ ಸರಬರಾಜು ಮಾಡಲಾಗುತ್ತಿದೆ.

ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ನಂತರ ಶುದ್ಧೀಕರಿಸಿ ಸರಬರಾಜು ಮಾಡಲಾಗುವುದು. ಫೆಬ್ರವರಿಯಿಂದ ಕೆರೆ ನೀರನ್ನು ಪೂರೈಸಿದರೂ ಬೇಸಿಗೆಗೆ ಯಾವುದೇ ತೊಂದರೆ ಆಗದಂತೆ ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡಬಹುದು ಎಂದು ಅವರು ತಿಳಿಸಿದರು.

ರೂ 98 ಕೋಟಿ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯ ಶೇ 40ರಷ್ಟು ಕಾರ್ಯ ಮುಗಿದಿದೆ. ಆಗಸ್ಟ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಇನ್ನೊಂದು ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗುವುದು.
 
ಈ ಕಾಮಗಾರಿ ಪೂರ್ಣಗೊಂಡ ನಂತರ ನಗರಕ್ಕೆ ನೀರಿನ ಸಮಸ್ಯೆ ಉದ್ಭವ ಆಗುವುದಿಲ್ಲ.  ಪ್ರಯೋಗಿಕವಾಗಿ ಕೆಲ ಪ್ರದೇಶಗಳಿಗೆ ದಿನದಲ್ಲಿ  24 ಗಂಟೆ ಅವಧಿ ನೀರು ಸರಬರಾಜು ಮಾಡಲಾಗುವುದು. ಈ ಪ್ರಯೋಗ ಯಶಸ್ವಿಯಾದಲ್ಲಿ ನಗರದ ಎಲ್ಲ ಬಡಾವಣೆಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ನಗರ ವೇಗವಾಗಿ ಬೆಳೆಯುತ್ತಿದ್ದು, ಎಲ್ಲ ಬಡಾವಣೆಗಳಿಗೂ ನೀರನ್ನು ಸರಬರಾಜು ಮಾಡಲು ಅನುಕೂಲ ಆಗುವಂತೆ ಇನ್ನೂ 10 ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಈಗಾಗಲೇ 5 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಇನ್ನೂ 5 ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲ ಬಡಾವಣೆಗಳಿಗೂ ಏಕಕಾಲ ನೀರು ಪೂರೈಸಲು ಇದರಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಉಪಮೇಯರ್ ಶಶಿಕಲಾ, ಪಾಲಿಕೆ ಸದಸ್ಯರಾದ ಕೆ. ಬಸವರಾಜ್, ತೂರ್ಪು ಯಲ್ಲಪ್ಪ, ಇಬ್ರಾಹಿಂ, ದಿವಾಕರ, ಚಂದ್ರ, ಪೌರಾಯುಕ್ತ ಡಿ.ಎಲ್. ನಾರಾಯಣ, ಕರ್ನಾಟಕ ನೀರು ಸರಬರಾಜು ಮಂಡಳಿಯ ಅಧಿಕಾರಿ ಯೂನುಸ್ ಬಾಷಾ, ಗಂಗಾಧರ ಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT