ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಹೆಚ್ಚುತ್ತಿದೆ ಬಿಸಿಲ ಬೇಗೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಸಮೀಪಿಸುತ್ತಿದ್ದಂತೆಯೇ `ಶಿವ.. ಶಿವಾ...~ ಎನ್ನುವಂತೆ ಮಾಡುವ ಬಿಸಿಲಿನ ಪ್ರಖರತೆ  ಹೆಚ್ಚುತ್ತ ಸಾಗಿದೆ. ಮೂರು ದಿನಗಳ ಹಿಂದೆ 37 ಡಿಗ್ರಿ ಸೆ. ಇದ್ದ ಗರಿಷ್ಠ ಉಷ್ಣಾಂಶ ಸೋಮವಾರ 40ರ ಆಸುಪಾಸಿಗೆ ಬಂದಿದೆ.

 `ಕಳೆದ 100 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲೇ ಉಷ್ಣಾಂಶ ದಾಖಲಾಗಲಿದೆ~ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಗೆ ಇಂಬು ನೀಡುವಂತೆ ಬಳ್ಳಾರಿಯಲ್ಲಿ ಫೆಬ್ರುವರಿ ಮಧ್ಯಭಾಗದಲ್ಲೇ ಬಿಸಿಲು ಜನರಿಗೆ ಬಿಸಿ ಮುಟ್ಟಿಸಲಾರಂಭಿಸಿದೆ.

ನೀರಿಗೆ ತತ್ವಾರ ಸಾಧ್ಯತೆ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ಏಳು ತಾಲ್ಲೂಕುಗಳನ್ನೂ ಸರ್ಕಾರ `ಬರಪೀಡಿತ~ ಎಂದು ಘೋಷಿಸಿದೆ.
 
ತುಂಗಭದ್ರಾ ಜಲಾಶಯ ಮತ್ತು ಕಾಲುವೆಯಿಂದಾಗಿ ಬಳ್ಳಾರಿ, ಹೊಸಪೇಟೆ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬರುವುದಿಲ್ಲವಾದರೂ, ಕೂಡ್ಲಿಗಿ, ಸಂಡೂರು, ಹೂವಿನ ಹಡಗಲಿ ಮತ್ತು ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಈಗಾಗಲೇ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕೊರತೆ, ಪಂಪ್‌ಸೆಟ್ ದುರಸ್ತಿ ಮತ್ತಿತರ ಕಾರಣಗಳಿಂದ ನೀರಿಗೆ ತತ್ವಾರ ಶುರುವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯವೂ ಕೆಲವೇ ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸುವುದರಿಂದ, ಕೊಳವೆ ಬಾವಿಯಿಂದ ನೀರನ್ನು ಮೇಲೆತ್ತುವ ಮೋಟರ್‌ಗಳು ಕಾರ್ಯ ನಿರ್ವಹಿಸದೆ, ಹತ್ತಿಪ್ಪತ್ತು ಸಾವಿರ ಜನಸಂಖ್ಯೆಯ ಗ್ರಾಮಗಳಲ್ಲಿ ನೀರು ಪೂರೈಕೆಯೂ ಕಷ್ಟಕರವಾಗಿದೆ.

ಬಿಸಿಲು ಮತ್ತಷ್ಟು ಪ್ರಖರಗೊಳ್ಳುತ್ತಿದ್ದಂತೆಯೇ ವಿದ್ಯುತ್ ಕಡಿತದ ಪ್ರಮಾಣ ಇನ್ನೂ ಹೆಚ್ಚುವುದರಿಂದ ನೀರಿನ ಸಮಸ್ಯೆ ಉಲ್ಬಣಿಸುವುದಲ್ಲಿ ಶಂಕೆ ಇಲ್ಲ ಎಂದು ಬಳ್ಳಾರಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಒಂದರ ಅಭಿವೃದ್ಧಿ ಅಧಿಕಾರಿ ಹೇಳುತ್ತಾರೆ.

ವಿದ್ಯುತ್ ಕಡಿತದಿಂದಾಗಿ ಕಳೆದ ವರ್ಷವೂ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ವರ್ಷವೂ ಅನಿಯಮಿತ ವಿದ್ಯುತ್ ಕಡಿತ ಜಾರಿಯಾದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಕಾಳಜಿಗೆ ಮನವಿ:  ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿರುವ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಬವಣೆ ನೀಗಿಸಲು ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಸದಸ್ಯ ಭೀಮಾ ನಾಯ್ಕ ಕೋರುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದೊಂದಿಗೆ ಕೊಳವೆ ಬಾವಿ ಕೊರೆಯಿಸಲಾಗಿದ್ದು, ಕೆಲವೆಡೆ ಕೈಪಂಪ್‌ಗಳು ಕೆಟ್ಟು ಹೋಗಿವೆ. ಅವುಗಳ ದುರಸ್ತಿಗೆ ಕ್ರಮ ಕೈಗೊಂಡರೆ, ವಿದ್ಯುತ್ ಕಡಿತವಾದರೂ ಜನರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಹಿರೇಹಡಗಲಿ ಕ್ಷೇತ್ರದ ಜಿ.ಪಂ. ಸದಸ್ಯ ವಸಂತ್ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT