ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಿ ಬೆಳೆಯಲ್ಲಿ ಬದುಕು ಕಂಡ ರೈತ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ರೈತರು ಟೊಮೆಟೊ, ಕೋಸು, ಆಲೂಗಡ್ಡೆಯಂಥ ಅಧಿಕ ಬಂಡವಾಳ ಬಯಸುವ ಬೆಳೆಗಳನ್ನು ಬೆಳೆದು, ಬೆಲೆ ಕುಸಿತದಿಂದ ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಆದರೆ ಶ್ರೀನಿವಾಸಪುರ ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದ ರೈತರೊಬ್ಬರು ಕಡಿಮೆ ಬಂಡವಾಳದಲ್ಲಿ ಸೋರೆಕಾಯಿ, ಹಾಗಲ ಕಾಯಿ, ಬೀನ್ಸ್‌ನಂಥ ಬಳ್ಳಿ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ.

ಕೃಷಿಕ ಎಸ್.ವಿ.ಲಕ್ಷ್ಮೀನಾರಾಯಣರೆಡ್ಡಿ, ಎಲ್ಲ ರೈತರಂತೆ ಟೊಮೆಟೊ ಬೆಳೆಗೆ ಅಗ್ರಸ್ಥಾನ ನೀಡಿದ್ದರು. ಆಲೂಗಡ್ಡೆ, ಕೋಸು ಮುಂತಾದ ತರಕಾರಿ ಬೆಳೆಗಳನ್ನೂ ಬೆಳೆಯುತ್ತಿದ್ದರು. ಒಳ್ಳೆ ಬೆಲೆ ಸಿಕ್ಕಿದರೆ ನಾಲ್ಕು ಕಾಸು ಕೈಗೆ ಬರುತ್ತಿತ್ತು. ಬೆಲೆ ಕುಸಿತ ಉಂಟಾದಾಗ ಹಾಕಿದ ಬಂಡವಾಳಕ್ಕೂ ಸಂಚಕಾರ ಬಂದು ಕೈ ಸುಡುತ್ತಿತ್ತು. ಈ ಬೆಳೆಗಳಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.

  ಕಡಿಮೆ ಬಂಡವಾಳದ ಬೆಳೆಗಳ ಬಗ್ಗೆ ಆಲೋಚಿಸಿದಾಗ ಹೊಳೆದದ್ದು ಹಾಗಲ, ಸೋರೆ ಮತ್ತು ಬೀನ್ಸ್. ಈಗ ಸುಮಾರು ಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿ ಹಾಗಲಕಾಯಿ, ಒಂದು ಎಕರೆಯಲ್ಲಿ ಸೋರೆಕಾಯಿ ಬೆಳೆದಿದ್ದಾರೆ. ಸೋರೆಗೆ ಕಂಬಿ ಚಪ್ಪರ ಹಾಕಿದ್ದರೆ, ಹಾಗಲ ಬಳ್ಳಿ ಹಬ್ಬಿಸಲು ಪ್ಲಾಸ್ಟಿಕ್ ವೈರ್‌ನಿಂದ ಚಪ್ಪರ ಹೆಣೆದಿದ್ದಾರೆ.

  ವಿ.ಲಕ್ಷ್ಮೀನಾರಾಯಣರೆಡ್ಡಿ ಅವರು ಹೇಳುವಂತೆ, ಬಳ್ಳಿ ಬೆಳೆ ಇಡುವುದು ಸುಲಭ. ಇದಕ್ಕೆ ಹೆಚ್ಚಿನ ಸಂಖ್ಯೆಯ ಕೃಷಿ ಕಾರ್ಮಿಕರ ಅಗತ್ಯ ಇರುವುದಿಲ್ಲ. ಜಮೀನನ್ನು ಹದಗೊಳಿಸಿ, ಸಾಲು ಹೊಡೆದ ಮೇಲೆ, ಪ್ರತಿ ಸಾಲಿಗೂ ಕೊಟ್ಟಿಗೆ ಗೊಬ್ಬರ, ಹೊಂಗೆ ಹಾಗೂ ಬೇವಿನ ಹಿಂಡಿಯನ್ನು ತುಂಬುತ್ತಾರೆ. ನಂತರ ಬೀಜ ನಾಟಿ ಮಾಡಿ ಹನಿ ನೀರಾವರಿ ಅಳವಡಿಸುತ್ತಾರೆ.

ಬಳ್ಳಿ ಸಾಗಲು ಪ್ರಾರಂಭಿಸಿದಾಗ ಕಡಿಮೆ ಪ್ರಮಾಣದಲ್ಲಿ  ರಾಸಾಯನಿಕ ಗೊಬ್ಬರ ನೀಡಿ, ಗಿಡದ ಬುಡದಲ್ಲಿ ಚಪ್ಪರಕ್ಕೆ ಎಟಕುವಂತೆ ಲಂಟಾನಾ ಕಂಪೆಗಳನ್ನು ಹೂಳುತ್ತಾರೆ. ಬಳ್ಳಿ ಲಂಟಾನ ಕಂಪೆಗಳ ಮೇಲೇರಿ, ಚಪ್ಪರವನ್ನು ಹಿಡಿದು ಹರಡುತ್ತದೆ, ಫಸಲಿಗೆ ಬರುತ್ತದೆ.
  ಇವರು ಬೀನ್ಸ್ ಅನ್ನು ಪ್ರತ್ಯೇಕವಾಗಿ ಬೆಳೆಯುವುದಿಲ್ಲ.

ಟೊಮೆಟೊ ಗಿಡದಲ್ಲಿ ಫಸಲು ಮುಗಿಯುವ ಸಮಯದಲ್ಲಿ ಬಳ್ಳಿ ಬೀನ್ಸ್ ಬೀಜ ನಾಟಿ ಮಾಡುತ್ತಾರೆ. ಟೊಮೆಟೊ ಬೆಳೆ ಮುಗಿಯುವ ಹೊತ್ತಿಗೆ ಬೀನ್ಸ್ ಬಳ್ಳಿ, ಒಣಗಿದ ಟೊಮೆಟೊ ಗಿಡವನ್ನು ಆಧಾರವಾಗಿ ಹಿಡಿದು ಮೇಲೇರುತ್ತದೆ.

ಟೊಮೆಟೊಗೆ ನೆಟ್ಟ ಆಧಾರ ಕೋಲುಗಳ ಮೇಲೆ ಹಬ್ಬಿ ಫಸಲು ಕೊಡುತ್ತದೆ. ಹೀಗೆ ಮಾಡುವುದರಿಂದ ಉಳುಮೆ, ಆಧಾರ ಕೋಲು ನೆಡುವಿಕೆ ಮುಂತಾದ ಕೆಲಸಗಳಿಗೆ ತಗಲುವ ವೆಚ್ಚ ಹಾಗೂ ಕಾಲದ ಉಳಿತಾಯವಾಗುತ್ತದೆ. ಟೊಮೆಟೊ ಬೆಳೆಗೆ ನೀಡಲಾಗಿದ್ದ ಗೊಬ್ಬರದ ಸತ್ವದಿಂದಲೇ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ. ಇದೇ ಪದ್ಧತಿಯಲ್ಲಿ ಹೀರೆಕಾಯಿಯನ್ನೂ ಸಹ ಬೆಳೆಯಲಾಗುತ್ತಿದೆ.

  ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಹಾಗಲ ಅಥವಾ ಸೋರೆಕಾಯಿಯಿಂದ ಸಾಮಾನ್ಯ ಬೆಲೆ ಇದ್ದರೂ 3 ರಿಂದ ನಾಲ್ಕು ಲಕ್ಷ ರೂ. ಹೊರಡುತ್ತದೆ. ಒಳ್ಳೆ ಬೆಲೆ ಸಿಕ್ಕಿದರೆ ಒಳ್ಳೆ ಲಾಭ ಸಿಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೀನ್ಸ್‌ಗೆ ಬೆಲೆ ಕುಸಿತ ಉಂಟಾಗುವುದು ಅಪರೂಪ. ಬಳ್ಳಿ ತರಕಾರಿಗಳಿಗೆ ಸ್ಥಳೀಯ ಮಾರುಕಟ್ಟೆಗಳು ಸೇರಿದಂತೆ ಯಾವುದೇ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಟೊಮೆಟೊ ಬೆಳೆದು ಬೇಡಿಕೆ ಇಲ್ಲದೆ ರಸ್ತೆಯಲ್ಲಿ ಸುರಿಯುವಂಥ ಪರಿಸ್ಥಿತಿ ಬರುವುದಿಲ್ಲ.

ಬಳ್ಳಿ ಬೆಳೆಗಳಿಗೆ ಮಾರಕವಾಗಿರುವ ಊಜಿ ನೊಣದ ಹಾವಳಿ ತಡೆಗೆ ಸರಳ ವಿಧಾನವನ್ನು ಅನುಸರಿಸುತ್ತಿದ್ದಾರೆ. ತೋಟದಲ್ಲಿ ಅಲ್ಲಲ್ಲಿ ಮೋಹಕ ಬಲೆಯನ್ನು ಅಳವಡಿಸಲಾಗಿದೆ. ಊಜಿ ನೊಣಗಳು ಮೋಹಕ ಬಲೆಯಲ್ಲಿ ಬಿದ್ದು ಸಾಯುವುದರಿಂದ ಹುಳುಬಾಧೆ ತಟ್ಟುವುದಿಲ್ಲ. ರೋಗ ಕಂಡುಬಂದಲ್ಲಿ ತೋಟಗಾರಿಕಾ ತಜ್ಞರ ಸಲಹೆ ಪಡೆದು ರೋಗ ನಾಶಕ ಸಿಂಪರಣೆ ಮಾಡಿದರೆ ಸಾಕು.

  ಸೋರೆ. ಹಾಗಲದಂಥ ಬಳ್ಳಿ ಬೆಳೆಗಳು ಸುಮಾರು ಆರು ತಿಂಗಳ ಕಾಲ ಫಸಲು ಕೊಡುವುದರಿಂದ, ಉತ್ಪನ್ನಕ್ಕೆ ಬೆಲೆ ಏರಿಳಿತ ಸಾಮಾನ್ಯ. ಒಂದು ತಿಂಗಳಲ್ಲಿ ಬೆಲೆ ಕೈಕೊಟ್ಟರೂ, ಇನ್ನೊಂದು ತಿಂಗಳಲ್ಲಿ ಬೆಲೆ ಬರುವ ಸಂಭವ ಇರುತ್ತದೆ. ಹಾಗಾಗಿ ಬಳ್ಳಿ ಬೆಳೆ ರೈತ ಸ್ನೇಹಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT