ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆ ಬದುಕಿಗೆ ಅಕ್ಷರ ದೀವಿಗೆಯ ಬೆಳಕು!

ವಿಶ್ವ ಸಾಕ್ಷರತಾ ದಿನಾಚರಣೆ–ಮನಸೆಳೆದ ನವಸಾಕ್ಷರರ ಯಶೋಗಾಥೆ
Last Updated 14 ಸೆಪ್ಟೆಂಬರ್ 2013, 9:02 IST
ಅಕ್ಷರ ಗಾತ್ರ

ಮಂಗಳೂರು:
‘ಕೆಳಗಿನ ತುಟಿಯ ಹಿಡಿದೆಳೆದು
ಅದರೊಳಗಿಡುವರು ತಂಬಾಕು...
ಮಧುವಿನ ರಸವನು ಹೀರುವರು
ಪರಿಣಾಮ ಕ್ಯಾನ್ಸರ್‌ ಪಡೆಯುವರು...’

ಕೌಕ್ರಾಡಿಯ ನವಸಾಕ್ಷರೆ ಖತೀಜಮ್ಮ ಅವರು ಸುಶ್ರಾವ್ಯ ಕಂಠದಲ್ಲಿ ಹಾಡುವಾಗ ಸಭೆಯಲ್ಲಿ ನೀರವ ಮೌನ. ಅಕ್ಷರ ಜ್ಷಾನವಿಲ್ಲದಿದ್ದಾಗ ಮಾತನಾಡಲೂ ಹಿಂಜರಿಯುತ್ತಿದ್ದ ಖತೀಜಮ್ಮ ಈಗ ತುಂಬಿದ ಸಭೆಯಲ್ಲಿ ಯಾವ ಅಳುಕೂ ಇಲ್ಲದೇ ಹಾಡಬಲ್ಲರು. ನಿರರ್ಗಳವಾಗಿ ಮಾತನಾಡಬಲ್ಲರು. ಅವರ ಹೊಸ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿದ್ದು ಜಿಲ್ಲಾ ಸಾಕ್ಷರತಾ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಜನ ಶಿಕ್ಷಣ ಟ್ರಸ್ಟ್‌, ನವಸಾಕ್ಷರರ, ಗ್ರಾಮವಿಕಾಸ ಪ್ರೇರಕರ ಸುಗ್ರಾಮ ಸಂಘಗಳ ಸಹಭಾಗಿತ್ವದಲ್ಲಿ  ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂ­ಗಣದಲ್ಲಿ ಶುಕ್ರವಾರ ನಡೆದ ವಿಶ್ವ ಸಾಕ್ಷರತಾ ದಿನಾಚರಣೆ.

‘ನನಗೆ ಓದು–ಬರಹ ತಿಳಿದಿರಲಿಲ್ಲ. ಸಾಂಕ್ಷರತಾ ಆಂದೋಲನದಲ್ಲಿ ಅಕ್ಷರ ಕಲಿತೆ. ನನ್ನಂತೆಯೇ ಅನೇಕ ಮಂದಿ ನವಸಾಕ್ಷರರು ಸೇರಿ ಸ್ವಸಹಾಯ ಸಂಘ ಕಟ್ಟಿಕೊಂಡು ಸ್ವ–ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದೇವೆ’ ಎಂದು ಖತೀಜಮ್ಮ ಹೇಳುವಾಗ ಕರತಾಡನಗಳ ಸುರಿಮಳೆ.

ಖತೀಜಮ್ಮ ಅವರಂತೆಯೇ ನವಸಾಕ್ಷರರಾಗಿ ಹೊಸಬದುಕು ಕಟ್ಟಿಕೊಂಡ ಅನೇಕರು ಅಕ್ಷರಜ್ಞಾನವು ಬದುಕಿನ ಬವಣೆಯನ್ನು ಕಳೆದ ಕಥೆಯನ್ನು ಹಂಚಿಕೊಂಡರು.

156 ಮಂದಿ ಮದ್ಯಮುಕ್ತ
‘ಸಾಕ್ಷರತಾ ಆಂದೋಲನದಲ್ಲಿ ಕಲಿಯುವುದಕ್ಕೆ ಮೊದಲು, ಗಂಡನ ಕುಡಿತದ ಚಟದಿಂದಾಗಿ ಮನೆಯಲ್ಲಿ ತುಂಬಾ ಸಮಸ್ಯೆ ಇತ್ತು. ಮೊದಲು ಪತಿಗೆ ಚಿಕಿತ್ಸೆ ಕೊಡಿಸಿ ಮದ್ಯಪಾನ ಬಿಡಿಸಿದೆ. ನವಸಾಕ್ಷರೆ ಆದ ಬಳಿಕ ಒಟ್ಟು 156 ಮಂದಿ ಮದ್ಯಪಾನ ತ್ಯಜಿಸುವಂತೆ ಮಾಡಿದ್ದೇನೆ. 132 ಬಾಲಕಾರ್ಮಿಕರನ್ನು ಶಾಲೆಗೆ ಸೇರಿಸಿದ ತೃಪ್ತಿ ಇದೆ. ನನಗೆ ಆರೋಗ್ಯ ಮಿತ್ರ ಪ್ರಶಸ್ತಿಯನ್ನೂ ನೀಡಿ ಗೌರವಿಸಿದ್ದಾರೆ. ಪ್ರಾಯ ಆಗುವುದು ಶರೀರಕ್ಕೆ ಮಾತ್ರ. ಕೈಕಾಲು ಗಟ್ಟಿ ಇರುವವರೆಗೂ ಸಮಾಜಕ್ಕೆ ಉಪಯೋಗ­ವಾಗುವ ಕೆಲಸ ಮಾಡುತ್ತೇನೆ’ ಎಂದು ನವಸಾಕ್ಷರೆಯಾದ ಲಾಯಿಲದ ಯಶೋದಾ ಅವರು ಹೇಳುವಾಗ ಸಭಿಕರೆಲ್ಲಾ ತದೇಕಚಿತ್ತದಿಂದ ಆಲಿಸಿ ಚಪ್ಪಾಳೆ ತಟ್ಟಿದರು.

ಆದಿವಾಸಿ ಮಹಿಳೆ ಸುಂದರಿ ಅವರು ‘ಬನ್ನಿರಿ ಎಲ್ಲರೂ ಕಲಿಯೋಣ... ಬಲ್ಲವರಾಗುತ ನಲಿಯೋಣ...’ ಗೀತೆಯನ್ನು ಸೊಗಸಾಗಿ ಹಾಡಿದರು. 

ಬನ್ನೂರಿನ ಮಾದರಿ ಗ್ರಾಮವಿಕಾಸ ಕೇಂದ್ರದ ನವಸಾಕ್ಷರ ಮಹಿಳೆಯರು ಆಟಿ–ಕಳೆಂಜ ನೃತ್ಯ ಪ್ರದರ್ಶಿಸಿದರು.
ಬನ್ನೂರಿನಲ್ಲಿ ಮಹಿಳೆಯರೆ ಸೇರಿ ಉದ್ಯೋಗ ಖಾತರಿ ಯೋಜನೆ ಅಡಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಅರುಣಾ ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಖಾದರ್‌, ‘ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಕಲ್ಪಿಸುವುದೇ ಪ್ರಜಾಪ್ರಭುತ್ವ ಆಶಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕ್ಷರತೆಯ ಮೂಲಕ ಈ ಆಶಯ ಈಡೇರಿದೆ’ ಎಂದರು.

‘ಸಾಕ್ಷರತೆಯ ಮೂಲಕ ಸಾಧಿಸಿದ ಸ್ವಾವಲಂಬನೆಯಿಂದಾಗಿ ಕರಾವಳಿ ಇತರ ಜಿಲ್ಲೆಗಳಿಗಿಂತ ಹೆಚ್ಚು ಅಭಿವೃದ್ಧಿ ಸಾಧಿಸಿದೆ. ಸಾಕ್ಷರತಾ ಆಂದೋಲನ ಅನೇಕ ಮಂದಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಆಗಿದೆ. ಮುಂದುವರಿದ ಜಿಲ್ಲೆ ಎಂಬ ಹಣೆಪಟ್ಟಿಯೇ ನಮಗೆ ಮುಳುವಾಗುತ್ತಿದೆ. ₨ 500 ಕೋಟಿ ವೆಚ್ಚದಲ್ಲಿ ಅಣೆಕಟ್ಟು ಕಟ್ಟಿಕೊಡಿ, ಕಾಲುವೆ ನಿರ್ಮಿಸಿ ಎಂಬ ಬೇಡಿಕೆಯನ್ನು ಕರಾವಳಿಯ ಜನರು ಎಂದೂ ಇಟ್ಟಿಲ್ಲ. ಈಗಲೂ ಅನೇಕ ಗ್ರಾಮಗಳು ಹಿಂದುಳಿದಿವೆ. ಅವುಗಳ ಅಭಿವೃದ್ಧಿ ಆಗಬೇಕಿದೆ’ ಎಂದರು.

ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್‌ ಶೆಟ್ಟಿ, ಸದಸ್ಯರಾದ ಚಂದ್ರಕಲಾ, ಸತೀಶ ಕುಂಪಲ, ಬಾಲಕೃಷ್ಣ ಸುವರ್ಣ, ಎಸ್‌.ಎಸ್‌.ಕರೀಂ, ಎಂ.ಎಸ್‌.ಮೊಹಮ್ಮದ್‌, ಸಂತೋಷ್‌ ಕುಮಾರ್‌, ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್‌ಮನ್‌ ಶೀನ ಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ವಿ.ಮಲ್ಲೇಶಪ್ಪ, ಜನಶಿಕ್ಷಣ ಟ್ರಸ್ಟ್‌ನ ಶೀನ ಮೂಲ್ಯ ಉಪಸ್ಥಿತರಿದ್ದರು.

ಕುಡಿತ ಬಿಟ್ಟ ಬಳಿಕ ಕೈ ಹಿಡಿದ ಕೃಷಿ
ಕುಡಿತ ತೊರೆದ ಬಳಿಕ ಬದುಕಿನಲ್ಲಾದ ಬದಲಾವಣೆಯ ಬಗ್ಗೆ ಮುರುಘಾಶ್ರೀ ಪ್ರಶಸ್ತಿ ಪಡೆದ ಕಾರ್ಕಳ ತಾಲ್ಲೂಕಿನ ಮುಂಗಿಲ ಕೊರಗ ವಿವರಿಸಿದರು.

‘ಹಿಂದೆ, ದುಡಿದ ಹಣ ಕಳ್ಳು ಸಾರಾಯಿಗೆ ಸಾಕಾಗುತ್ತಿರಲಿಲ್ಲ. ಈಗ ಮನೆಯಲ್ಲಿರುವ 60 ಸೆಂಟ್ಸ್‌ ಜಾಗದಲ್ಲಿ ಮಾಡಿದ ಕೃಷಿಯಿಂದ ನನ್ನ ಇಡೀ ಕುಟುಂಬವನ್ನು ಪೊರೆಯುತ್ತೇನೆ. ಮಲ್ಲಿಗೆ ಮಾರಾಟದಿಂದಲೇ ನಾನು ವರ್ಷಕ್ಕೆ ₨ 80 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದೇನೆ’ ಎಂದು ಮುಂಗಿಲ ಕೊರಗ ತಿಳಿಸಿದರು. ಅವರ ಪತ್ನಿ ಬೇಬಿ ಮಿಯಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದಾರೆ. ದಂಪತಿ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT