ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವ ಪ್ರಚಾರಕ್ಕಾಗಿ 8ನೇ ಬಾರಿ ಅಖಾಡಕ್ಕೆ!

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಮೊದಲು ಪವಾಡ ಬಯಲು, ಜನ ಸೇರಿದ ನಂತರ ಬಸವ ತತ್ವ ಪ್ರಚಾರ. `ಅಣ್ಣನ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನನಗೊಂದು ಮತ ಕೊಡಿ' ಎಂಬ ಕೋರಿಕೆ! 

ವಿಜಾಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಲ್ಲಪ್ಪ ರೇವಣಸಿದ್ಧಪ್ಪ ಕಡೇಚೂರ (46) ಅವರ ವರಸೆ ಇದು. ಇವರು ಬಿ.ಎಸ್ಸಿ ಪದವೀಧರ. ತಮ್ಮ ಬಳಿ ಯಾವುದೇ ಆಸ್ತಿ, ಆದಾಯ ಇಲ್ಲ ಎಂದು ಚುನಾವಣಾಧಿಕಾರಿಗೆ ಪ್ರಮಾಣಪತ್ರ ನೀಡಿದ್ದಾರೆ.

ನಗರ ಸಭೆಗೆ ಒಮ್ಮೆ, ಸಿದ್ಧೇಶ್ವರ ಸಹಕಾರ ಬ್ಯಾಂಕ್‌ಗೆ ಎರಡು ಬಾರಿ, ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಒಂದು ಬಾರಿ, ವಿಜಾಪುರ ನಗರ ಕ್ಷೇತ್ರದಿಂದ ವಿಧಾನಸಭೆಗೆ ನಾಲ್ಕು ಬಾರಿ ಸೇರಿದಂತೆ ಕಲ್ಲಪ್ಪ ಈಗ ಎಂಟನೆಯ ಚುನಾವಣೆ ಎದುರಿಸುತ್ತಿದ್ದಾರೆ. ತಮ್ಮ ಪತ್ನಿಯನ್ನು ನಗರಸಭೆ ಚುನಾವಣೆಯಲ್ಲಿ ಎರಡು ಬಾರಿ ಕಣಕ್ಕಿಳಿಸಿದ್ದಾರೆ. ಯಾವುದೇ ಚುನಾವಣೆಯಲ್ಲಿ ಠೇವಣಿ ವಾಪಸ್ಸು ಬಂದಿಲ್ಲ.

`ಬಸವಣ್ಣ ಪ್ರತಿಪಾದಿಸಿದ ಕಾಯಕ- ದಾಸೋಹ ಪರಿಕಲ್ಪನೆಯ ಸಾಮಾಜಿಕ ಬದಲಾವಣೆ, ವರ್ಗ ಮತ್ತು ವರ್ಣ ರಹಿತ ಸಮಾಜ ನಿರ್ಮಾಣದ ಮಹದಾಸೆಯಿಂದ ಪ್ರತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಸೋತರೂ ಹಳಹಳಿಸುವುದಿಲ್ಲ. ಅಣ್ಣನ ತತ್ವಗಳನ್ನು ಜನತೆಗೆ ತಲುಪಿಸಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳುತ್ತೇನೆ' ಎನ್ನುತ್ತಾರೆ ಅವರು.

ಕಲ್ಲಪ್ಪ ಆಯುರ್ವೇದ ಔಷಧಿಗಳ ಮಾರಾಟ ಪ್ರತಿನಿಧಿ. ತಿಂಗಳಿಗೆ ಐದಾರು ಸಾವಿರ ಸಂಪಾದನೆ ಇದೆ. ಪತ್ನಿ, ಇಬ್ಬರು ಮಕ್ಕಳಿದ್ದಾರೆ. `ರಾಷ್ಟ್ರೀಯ ಬಸವಾದಿ ಲಿಂಗಾಯತ ಪಕ್ಷ' ಕಟ್ಟಿದ್ದಾರೆ. ಅದರ ನೋಂದಣಿ ಮಾಡಿಸಿಲ್ಲ. ಪ್ರತಿ ಚುನಾವಣೆಯಲ್ಲಿಯೂ ತಮ್ಮ `ಸ್ವಂತ ಪಕ್ಷ'ದಿಂದ ಕಣಕ್ಕಿಳಿಯುತ್ತಿದ್ದರು. ಈ ಬಾರಿ ಹಿಂದೂಸ್ತಾನ ಜನತಾ ಪಾರ್ಟಿ ಮೂಲಕ ಸ್ಪರ್ಧಿಸಿದ್ದಾರೆ.

`1999ರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪ್ರತಿ ಬಾರಿಯೂ ಕ್ರಿಕೆಟ್ ಬ್ಯಾಟ್ಸ್‌ಮನ್ ಚಿಹ್ನೆ ಪಡೆದು ಆ ಉಡುಪಿನಲ್ಲಿಯೇ ಪ್ರಚಾರ ನಡೆಸುತ್ತಿದ್ದೆ. ಈಗ ಸಾಸರ್ ಚಿಹ್ನೆ ಇದೆ. ನಾನೇ ಸಿದ್ಧಪಡಿಸಿರುವ ಏರ್‌ಕಂಪ್ರೆಸ್ಡ್ ಸೈಕಲ್‌ನಲ್ಲಿ ಸುತ್ತಿ ಪ್ರಚಾರ ನಡೆಸುತ್ತಿದ್ದೇನೆ. ಜನರನ್ನು ಸೇರಿಸಲು ಮೂಗಿನಲ್ಲಿ ಮೊಳೆ ಬಡಿದುಕೊಳ್ಳುವ, ಬೂದಿಯಲ್ಲಿ ನೀರು ಹಾಕಿ ಬೆಂಕಿ ಹೊತ್ತಿಸುವಂತಹ ಪವಾಡ ಬಯಲು ಕಾರ್ಯಕ್ರಮ ಮಾಡುತ್ತೇನೆ. ಜನ ಸೇರಿದ ನಂತರ ಬಸವ ತತ್ವ ಪ್ರಚಾರ ನಡೆಸಿ ಮತ ಯಾಚಿಸುತ್ತೇನೆ. ಕರಪತ್ರ ಮುದ್ರಿಸಿಲ್ಲ. ನಿತ್ಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಪ್ರಚಾರ ನಡೆಸಿ, ಆ ನಂತರ ನನ್ನ ನಿತ್ಯದ ಉದ್ಯೋಗ ಮಾಡುತ್ತೇನೆ' ಎನ್ನುತ್ತಾರೆ ಕಲ್ಲಪ್ಪ.

`ಆಮಿಷ ಒಡ್ಡುವ ಅಭ್ಯರ್ಥಿಗಳನ್ನು ತಿರಸ್ಕರಿಸಿ. ನಾನೂ ಬೇಡ ಎಂದಾದರೆ, ಯಾವ ಅಭ್ಯರ್ಥಿಗೂ ಮತ ನೀಡುವುದಿಲ್ಲ ಎಂಬ ಹಕ್ಕು ಚಲಾಯಿಸಿ. ಮತಗಟ್ಟೆಗೆ ಬರುವುದನ್ನು ಮರೆಯಬೇಡಿ ಎಂದು ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ' ಎನ್ನುತ್ತಾರೆ.

ರೂ 10 ಸಾವಿರ ಠೇವಣಿ ಹಾಗೂ ಪ್ರಚಾರಕ್ಕೆ ರೂ 10 ಸಾವಿರ ಹೀಗೆ ಒಟ್ಟಾರೆ ರೂ 20 ಸಾವಿರ ಖರ್ಚಾಗುತ್ತದೆ. ನನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಚುನಾವಣೆಗಾಗಿಯೇ ತೆಗೆದಿಟ್ಟಿರುತ್ತೇನೆ. ಈತ ಗೆಲ್ಲದಿದ್ದರೂ ಸರಿ, ಬಸವ ತತ್ವ ಪ್ರಚಾರ ಮಾಡುತ್ತಾನಲ್ಲ ಎಂಬ ಕಾರಣಕ್ಕೆ ಮಿತ್ರರು ಎಂದು  ತಲಾ ರೂ 500, ರೂ 1000  ಸಂಗ್ರಹಿಸಿ ಕೊಡುತ್ತಾರೆ. ಆದರೆ, ಅವರು ನನ್ನೊಂದಿಗೆ ಪ್ರಚಾರಕ್ಕೆ ಬರುವುದಿಲ್ಲ'.

`ಬಸವಣ್ಣ ಜನಿಸಿದ ಜಿಲ್ಲೆಯಲ್ಲಿಯೇ ಆತನ ತತ್ವಕ್ಕೆ ಹಿನ್ನಡೆಯಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಬಸವಣ್ಣನ ಹೆಸರು ಬಳಸಿಕೊಳ್ಳುತ್ತಿದ್ದರೂ ಆತನ ಸಿದ್ಧಾಂತದಂತೆ ನಡೆದುಕೊಳ್ಳುತ್ತಿಲ್ಲ. ಬಡವರು-ಶ್ರಮಿಕರು ಸಮಾನತೆ ಬಯಸುತ್ತಿದ್ದಾರೆ. ನಮ್ಮ ಸಮಾಜವೇ ಬಂಡವಾಳ ಶಾಹಿಗಳ ಕಪಿಮುಷ್ಟಿಗೆ ಸಿಲುಕಿರುವುದರಿಂದ ಸದ್ಯಕ್ಕೆ ಅದು ಸಾಧ್ಯವಿಲ್ಲ. ಮುಂದೊಂದು ದಿನ ಆ ಕಾಲ ಬಂದೇ ಬರುತ್ತದೆ' ಎಂಬುದು ಅವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT