ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಧರ್ಮ ಪಾಲಿಸಿ: ಬಿದರಿ

'ಬಸವಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಮತ
Last Updated 29 ಜುಲೈ 2013, 11:15 IST
ಅಕ್ಷರ ಗಾತ್ರ

ಮೈಸೂರು: `ವೈಯಕ್ತಿಕ ಲಾಭಕ್ಕಾಗಿ, ರಾಜಕೀಯ, ಆರ್ಥಿಕ ಉದ್ದೇಶಕ್ಕಾಗಿ ಉಪ ಜಾತಿಗಳನ್ನು ಬಳಸಿ ಬಸವ ಧರ್ಮವನ್ನು ಇಬ್ಭಾಗ ಮಾಡಲಾಗುತ್ತಿದೆ. ಇದು ಬಸವ ಸಂಸ್ಕೃತಿ, ಧರ್ಮಕ್ಕೆ ಮಾರಕ' ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ಹೇಳಿದರು.

ಬಿಇಎಂಎಲ್ ಬಸವ ಸಮಿತಿಯು ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಮತ್ತು ಸಮಿತಿಯ 22ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ `ಬಸವಶ್ರೀ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

`ಬಣಜಿಗರು, ರೆಡ್ಡಿ, ಶೆಟ್ಟರು ಎಂದು ಉಪ ಜಾತಿಗಳನ್ನು ಮಾಡಿಕೊಂಡು ಬಸವ ಧರ್ಮವನ್ನು ಇಬ್ಭಾಗ ಮಾಡಲಾಗಿದೆ. ಎಲ್ಲ ಉಪ ಜಾತಿಗಳನ್ನು ಬಿಟ್ಟು ಬಸವ ಧರ್ಮ ಎಂದು ಹೇಳಬೇಕು. ಉಪಜಾತಿ ಹೆಸರು ಹೇಳಿಕೊಂಡು ಅನುಭವ ಮಂಟಪದ ಉದ್ದ, ಅಗಲ ಮಾಡಬಾರದು. ಧರ್ಮ ಇಬ್ಭಾಗ ಮಾಡುವುದನ್ನು ಬೆಂಕಿ ಹಚ್ಚಿ ಸುಡಬೇಕು' ಎಂದು ತಿಳಿಸಿದರು.

`ಬಸವಣ್ಣ ಅನುಭವ ಮಂಟಪವನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಬಾರದು. ಸಮಾಜದ ಉನ್ನತಿ, ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು ಎಂದರು.

`ವೀರಶೈವ ಸ್ವಾಮೀಜಿಗಳು ಸರ್ಕಾರದಿಂದ ಅನುದಾನ ಪಡೆದಿಲ್ಲ. ಪ್ರತಿಯೊಂದು ಮಠದಲ್ಲೂ ಅಕ್ಷಯ ಪಾತ್ರೆ ಇದೆ. ಎಲ್ಲಿಯವರೆಗೆ ಸ್ವಾಮೀಜಿ ಬಳಿ ಅಕ್ಷಯ ಪಾತ್ರೆಯೆಂಬ ಜೋಳಿಗೆ ಇರುತ್ತದೆಯೊ ಅಲ್ಲಿವರೆಗೆ ಮಠಗಳು ಸಂಪತ್ಭರಿತವಾಗಿರುತ್ತವೆ. ನಮ್ಮ ಮೈ ನಾವೇ ಪರಚಿಕೊಂಡು ಗಾಯ ಮಾಡಿಕೊಳ್ಳುವ ಪ್ರವೃತ್ತಿ ಬಿಡಬೇಕು' ಎಂದು ಕಿವಿಮಾತು ಹೇಳಿದರು.

ಬಿಇಎಂಎಲ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸಿ.ಪಿ. ಬಸವರಾಜು ಅವರಿಗೆ `ಕಾಯಕಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನಕಪುರ ತಾಲ್ಲೂಕು ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊಸ ಮಠದ ಚಿದಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಇಎಂಎಲ್ ಬಸವ ಸಮಿತಿ ಗೌರವ ಅಧ್ಯಕ್ಷ ಉಮಾಶಂಕರ್ ಎನ್. ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಮಳಲಿ ವಸಂತಕುಮಾರ್ `ವಚನ ಸಾಹಿತ್ಯದಲ್ಲಿ ಮಾನವೀಯ ಧರ್ಮ' ಕುರಿತು ಉಪನ್ಯಾಸ ನೀಡಿದರು. ಬಿಇಎಂಎಲ್ ಬಸವ ಸಮಿತಿ ಅಧ್ಯಕ್ಷ ಬಿ.ಎಸ್. ತಾಂಡವಮೂರ್ತಿ ಸ್ವಾಗತಿಸಿದರು.

`ಋಣ ತೀರಿಸಲು ರಾಜಕೀಯಕ್ಕೆ ಬಂದೆ'
`ನನ್ನ ಸೇವೆಯ ಕೊನೆಯ ಎರಡು ತಿಂಗಳ ಅವಧಿಯಲ್ಲಿ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಋಣ ತೀರಿಸಲು ರಾಜಕೀಯಕ್ಕೆ ಬಂದಿದ್ದೇನೆ' ಎಂದು ಬಿದರಿ ತಿಳಿಸಿದರು.

`ನನಗೆ ಬಂಗಾರದ ವ್ಯಾಮೋಹ ಇಲ್ಲ. ಒಂದಿಂಚು ಭೂಮಿಯ ಅಗತ್ಯ ಇಲ್ಲ. ವೈಯಕ್ತಿಕವಾಗಿ ಯಾವುದೇ ಚಿಂತೆ ಇಲ್ಲ. ಮಕ್ಕಳು ಚೆನ್ನಾಗಿ ಇದ್ದಾರೆ. ತುಂಬು ಕುಟುಂಬದಲ್ಲಿ ಇದ್ದೇನೆ. ಬೇರಾವ ಉದ್ದೇಶ ಇಟ್ಟುಕೊಂಡು ರಾಜಕೀಯಕ್ಕೆ ಬಂದಿಲ್ಲ' ಎಂದು ತಿಳಿಸಿದರು.

`ರಾಜಕೀಯಕ್ಕೆ ಏಕೆ ಬಂದಿದ್ದೀರಿ? ಎಂಬ ಪ್ರಶ್ನೆಯನ್ನು ಕೆಲವರು ಹಾಕುತ್ತಿದ್ದಾರೆ. ನಾನು ಎಲ್ಲೇ ಹೋದರೂ ಜನರು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದಾರೆ. ಪ್ರಶಸ್ತಿ, ಗೌರವಗಳನ್ನು ನೀಡುತ್ತಿದ್ದಾರೆ. ನಾನು ಮಾಡಿದ ಉತ್ತಮ ಕೆಲಸದ ಪ್ರತಿಫಲವೇ ಇದು. ನಾನು ಪರಿಪೂರ್ಣ ವ್ಯಕ್ತಿ ಅಲ್ಲ. ನನ್ನಲ್ಲೂ ಕೆಲ ದೋಷಗಳು ಇವೆ. ಆದರೆ ಬಸವ ತತ್ವಕ್ಕೆ ವಿರುದ್ಧವಾಗಿ ಎಂದೂ ಕೆಲಸ ಮಾಡಿಲ್ಲ. ನನ್ನ ನಂಬಿದವರು, ಗುರು-ಹಿರಿಯರಿಗೆ, ಬಸವ ಧರ್ಮಕ್ಕೆ ಚ್ಯುತಿ ಬರುವಂತಹ ಕೆಲಸ ಎಂದೂ ಮಾಡುವುದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT