ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ನಗರಸಭೆಗೆ ಮುತ್ತಿಗೆ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ಓಣಿಗಳ ಕುರಿತು ನಿರ್ಲಕ್ಷ ತೋರಲಾಗಿದ್ದು ಸಾಕಷ್ಟು ಸಲ ವಿನಂತಿಸಿದರೂ ಸಮಸ್ಯೆ ಬಗೆಹರಿಸದಿರುವುದನ್ನು ಪ್ರತಿಭಟಿಸಿ ಮಂಗಳವಾರ ನಾಗರಿಕರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.

ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ನೂರಾರು ಮಹಿಳೆಯರು ಮತ್ತು ಯುವಕರು ಮೊದಲು ಪೌರಾಯುಕ್ತರ ಕಚೇರಿಗೆ ನುಗ್ಗಿದರು. ನಂತರ ಕೆಲಕಾಲ ಕಚೇರಿಯ ಬಾಗಿಲಲ್ಲಿ ಧರಣಿ ಸಹ ಕುಳಿತರು. ಬಸವೇಶ್ವರ ಮಂದಿರದಿಂದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿನ ಮೆಹಬೂಬ್‌ನಗರ, ಈಶ್ವರನಗರ ಓಣಿಗಳಲ್ಲಿ ರಸ್ತೆಯಲ್ಲಿಯೇ ಚರಂಡಿ ನೀರು ನಿಂತಿದ್ದು ನಡೆಯಲು ಬಾರದಂತಾಗಿದೆ.

ಮನೆಗಳ ಹೊರಗೆ ಬರಬೇಕಾದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಜತೆಗೆ ಸೊಳ್ಳೆಗಳು ಮುತ್ತಿಕೊಳ್ಳುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.ಈ ಓಣಿಯಲ್ಲಿನ ನಳಗಳಿಗೆ ನಿಯಮಿತವಾಗಿ ನೀರು ಬರುತ್ತಿಲ್ಲ. ಕೆಲ ನಳಗಳಿಗೆ ಬಹಳಷ್ಟು ದಿನಗಳಿಂದ ನೀರು ಬರುವುದು ಬಂದ್ ಆಗಿದೆ ಆದ್ದರಿಂದ ದುರಸ್ತಿ ನಡೆಸಬೇಕು ಎಂದು ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ.

ಓಣಿಯಲ್ಲಿನ ಕಸವನ್ನು ಪ್ರತಿದಿನ ವಿಲೇವಾರಿ ಮಾಡುತ್ತಿಲ್ಲ. ಕೆಲ ರಸ್ತೆಗಳಲ್ಲಿನ ಕಸವನ್ನು ಅನೇಕ ದಿನಗಳಿಂದ ತೆಗೆಯಲಾಗಿಲ್ಲ ಎಂದು ಮಹಿಳೆಯರು ದೂರಿದರು.ಓಣಿಯ ಪ್ರಮುಖರಾದ ಖಾಜಾಭಾಯಿ ಕುರೇಶಿ, ಕಲ್ಲಪ್ಪ ಮುತ್ತಂಗಿ, ಜಾಕೀರಮಿಯ್ಯಾ, ಗುಲಾಮ ರಸೂಲ್, ಮೆಹಬೂಬಸಾಬ್, ಅಲ್ತಾಫ್ ಮುಂತಾದವರು ಪಾಲ್ಗೊಂಡಿದ್ದರು.

ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಎಂ.ಬಿ. ನಡುವಿನಮನಿ ಭರವಸೆ ಕೊಟ್ಟ ನಂತರ ನಾಗರಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT