ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಮಾಜಿಗಳ ಅದೃಷ್ಟ ಪರೀಕ್ಷೆಯ ಕ್ಷೇತ್ರ

Last Updated 4 ಏಪ್ರಿಲ್ 2013, 6:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಗಡಿಭಾಗದಲ್ಲಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಈ ಬಾರಿ ಒಬ್ಬರು ಮಾಜಿ ಸಚಿವರು ಮತ್ತು ಇಬ್ಬರು ಮಾಜಿ ಶಾಸಕರ ಮುಖಾಮುಖಿಗೆ ಸಾಕ್ಷಿ ಆಗುವ ಜತೆಗೆ ಹೊಸ ಪಕ್ಷಗಳು ಕೂಡಾ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕ್ಷೇತ್ರ.

ಕ್ಷೇತ್ರ ಪುನರ್ವಿಂಗಡಣೆ ಬಳಿಕ ಈ ಹಿಂದಿನ ಹುಲಸೂರು ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದ ಬಹುತೇಕ ಭಾಗಗಳು ಇದರ ವ್ಯಾಪ್ತಿಗೆ ಬಂದಿದೆ. ಪ್ರಸ್ತುತ ಕ್ಷೇತ್ರದ ವ್ಯಾಪ್ತಿಯಲ್ಲಿ ಬಸವಕಲ್ಯಾಣ ನಗರಸಭೆ, ಬಸವಕಲ್ಯಾಣ, ಹುಲಸೂರು, ಮಂಠಾಳ, ಕೋಹಿನೂರ ಮತ್ತು ಮುಡಬಿ ವೃತ್ತಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಸೇರುತ್ತವೆ.

ಜನವರಿ 16, 2013ರಲ್ಲಿ ಇದ್ದಂತೆ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,95,295. ಈ ಪೈಕಿ 92,494 ಮಹಿಳೆಯರು. ಜಿಲ್ಲೆಯ ಇತಿಹಾಸದಲ್ಲಿ ಎರಡು ಬಾರಿ ಮಹಿಳೆಯನ್ನು ಆಯ್ಕೆ ಮಾಡಿ ಶಾಸನಸಭೆಗೆ ಕಳುಹಿಸಿದ ಹಿರಿಮೆಯೂ ಈ ಕ್ಷೇತ್ರದ್ದಾಗಿದೆ. ಗಡಿ ಭಾಗದಲ್ಲಿ ಇರುವ ಈ ಕ್ಷೇತ್ರದ ಮೂಲಕವೇ ರಾಷ್ಟ್ರೀಯ ಹೆದ್ದಾರಿ 9 ಹಾದು ಹೋಗುತ್ತದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕಾರಣ ಸಹಜವಾಗಿ ವಾಣಿಜ್ಯ ಚಟುವಟಿಕೆಗಳೂ ಹೆಚ್ಚು.

ಕಳೆದ ಅವಧಿಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ, ಮಾಜಿ ಸಚಿವರು ಆದ ಬಸವರಾಜ ಪಾಟೀಲ್ ಅಟ್ಟೂರು ಬಿಜೆಪಿಯಿಂದ ಆಯ್ಕೆಯಾದರೂ, ರಾಜಕೀಯ ಏರಿಳಿತದಲ್ಲಿ ಅವಧಿಯ ಅಂತ್ಯದಲ್ಲಿ ಕೆಜೆಪಿಗೆ ಪಕ್ಷಾಂತರಗೊಂಡರು. ಅನಾರೋಗ್ಯದ ನೆಪದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರೂ ಅವರ ಪತ್ನಿಯೇ ಈಗ ಕೆಜೆಪಿ ಅಭ್ಯರ್ಥಿ ಆಗಲಿದ್ದಾರೆ.

ಕಿರಿಯ ವಯಸ್ಸಿಗೇ ಶಾಸಕರಾಗಿ, ನೇರ ನುಡಿಯಿಂದ ಗಮನಸೆಳೆದ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ; ಮಾಜಿ ಶಾಸಕ ಮಾರುತಿರಾವ್ ಮುಳೆ ಅವರು ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ, ಈ ಕ್ಷೇತ್ರ ಮೂವರು ಮಾಜಿಗಳಿಗೆ ಪ್ರತಿಷ್ಠೆಯಾಗುವುದು ಖಚಿತ.

ಇನ್ನೂ ಕಾಂಗ್ರೆಸ್, ಬಿಜೆಪಿ  ತನ್ನ ಅಭ್ಯರ್ಥಿಗಳ ಯಾದಿ ಪ್ರಕಟಿಸಲು ತಿಣುಕಾಡುತ್ತಿವೆ. ಆಕಾಂಕ್ಷಿಗಳು ಹೆಚ್ಚಿರುವುದು ಮತ್ತು ಬಂಡಾಯ ಭೀತಿ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಅವಧಿ ಹತ್ತಿರವಾದಂತೆ ಈ ಪಕ್ಷಗಳ ಅಭ್ಯರ್ಥಿ ಹೆಸರು ಪ್ರಕಟಗೊಂಡರೂ ಆಶ್ಚರ್ಯವಿಲ್ಲ. 

ಹಿನ್ನೆಲೆ: 1952ರಲ್ಲಿ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ. 1957ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಒಟ್ಟು 10 ಚುನಾವಣೆಗಳನ್ನು ನೋಡಿದೆ. ಈಗ ನಡೆಯಲಿರುವುದು 11ನೇ ಚುನಾವಣೆ. 1957ರಲ್ಲಿ ಮೊದಲಿಗೆ ಅಸ್ತಿತ್ವಕ್ಕೆ ಬಂದ ನಂತರ ಸತತ ಎರಡು ಅವಧಿಗೆ (1957, 1962) ಕಾಂಗ್ರೆಸ್ ಪಕ್ಷದ ಅನ್ನಪೂರ್ಣತಾಯಿ ಆಯ್ಕೆಯಾಗಿದ್ದರು. 

1967ರಲ್ಲಿ ಪಕ್ಷೇತರ ಅಭ್ಯರ್ಥಿ ಎಸ್. ಸಂಗನಬಸಪ್ಪ ಚುನಾಯಿತರಾದರೆ; 1972 ಮತ್ತು 1978ರಲ್ಲಿ ಮತ್ತೆ ಕಾಂಗ್ರೆಸ್ ಜಯಗಳಿಸಿದ್ದು, ಕ್ರಮವಾಗಿ ಬಾಪುರಾವ್ ಆನಂದರಾವ್ ಮತ್ತು ಬಾಪುರಾವ್ ಹುಲಸೂರಕರ್ ಚುನಾಯಿತರಾಗಿದ್ದರು. ಆ ನಂತರ ಬಸವರಾಜ ಪಾಟೀಲ ಅಟ್ಟೂರು ನಾಲ್ಕು ಬಾರಿ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1983, 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ, 1989 ಮತ್ತು  1994ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಪೈಕಿ ಕಡೆ ಮೂರು ಅವಧಿಯಲ್ಲಿ ಮಾರುತಿರಾವ್ ಮುಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ನೀಡಿದ್ದರು.

1999ರಲ್ಲಿ ಮಾರುತಿರಾವ್ ಮುಳೆ ಯಶಸ್ಸುಕಂಡರು. ಆಗ ಜನತಾ ಪರಿವಾರ ವಿಭಜಿತವಾಗಿದ್ದು, ಮುಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ; ಅಟ್ಟೂರು ಜೆಡಿಯು ಅಭ್ಯರ್ಥಿ ಆಗಿದ್ದರು. ಬಳಿಕ 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಖೂಬಾ ಜಯಗಳಿಸಿದ್ದರು.
2008ರಲ್ಲಿ ಕ್ಷೇತ್ರ ಮತ್ತೆ ಬಸವರಾಜ ಪಾಟೀಲ್ ಅಟ್ಟೂರು ಪಾಲಾಗಿತ್ತು. ಆಗವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

ಹೀಗೆ 10 ಚುನಾವಣೆಗಳನ್ನು ಕಂಡರೂ ಕ್ಷೇತ್ರದಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಈಗಲೂ ಮರೀಚಿಕೆ ಎಂಬ ದೂರಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯು ಅಸ್ತಿತ್ವಕ್ಕೆ ಬಂದ ಪರಿಣಾಮ ತಾಲ್ಲೂಕು ಕೇಂದ್ರದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕುರುಹು ಕಂಡರೂ ಅದೇ ಅಭಿಪ್ರಾಯ ಗ್ರಾಮೀಣ ಪ್ರದೇಶವನ್ನು ನೋಡಿದರೆ ಮೂಡುವುದಿಲ್ಲ.

ಕುಡಿಯುವ ನೀರು ಸಮಸ್ಯೆ, ರಸ್ತೆ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂಬುದು ಕೇಳಿ ಬರುವ ಸಾಮಾನ್ಯ ದೂರು. ಇಂಥ ದೂರು, ಬೇಸರದ ನಡುವೆಯೇ ಕ್ಷೇತ್ರ ಮತ್ತೆ ಚುನಾವಣೆಗೆ ಸಜ್ಜಾಗುತ್ತಿದೆ. ದಾಖಲೆ ಐದು ಬಾರಿ ಗೆದ್ದಿರುವ ಬಸವರಾಜ ಪಾಟೀಲ್ ಅಟ್ಟೂರು ಪರವಾಗಿ ಅವರ ಪತ್ನಿ ಮಲ್ಲಮ್ಮ ಮತ್ತು ಇಬ್ಬರು ಮಾಜಿ ಶಾಸಕರು ಮತ್ತೆ ಮತದಾರನಿಗೆ ಮುಖಾಮುಖಿ ಆಗುತ್ತಿದ್ದಾರೆ. ಮೇಲುಗೈ ಸಾಧಿಸುವುದು ಪಕ್ಷದ ವರ್ಚಸ್ಸೋ ಅಥವಾ ವ್ಯಕ್ತಿಯದೋ ಎಂಬುದು ಈಗಿನ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT