ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಕ್ರಾಂತಿಕಾರಿ ಮಹಾಚೇತನ

Last Updated 7 ಫೆಬ್ರುವರಿ 2012, 10:15 IST
ಅಕ್ಷರ ಗಾತ್ರ

ಕಡೂರು: ಶತಮಾನಗಳ ಹಿಂದೆಯೇ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಸಿದ ಬಸವಣ್ಣನವರು ಕ್ರಾಂತಿಕಾರಿ ಮಹಾಚೇತನ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಕೊಂಡಾಡಿದರು.

ಕಡೂರಿನ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನವಾದ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ಮೇಲ್ಪಂಕ್ತಿಯನ್ನು ಅನುಸರಿಸಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸಮಾಜವನ್ನು ಸುಧಾರಣೆ ಮಾಡುವ ಪ್ರಯತ್ನ ಮಾಡಿದರು. ಸಾಕಷ್ಟು ಬದಲಾವಣೆಗಳು ಆಗಿವೆ. ಅಂತೆಯೇ ಆಗಬೇಕಿರುವುದೂ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ತರಳಬಾಳು ಹುಣ್ಣಿಮೆ ಸಮಾಜಕ್ಕೆ ವಿಶೇಷ ಸಂದೇಶ ನೀಡುವ ದಿಕ್ಸೂಚಿಯಾಗಿದ್ದು, ಸಮಾಜವನ್ನು ಸರಿದಾರಿಯತ್ತ ಒಯ್ಯುವ ಪ್ರಯತ್ನದ ಧಾರ್ಮಿಕ ಅಧಿವೇಶನವಾಗಿದೆ.

ಸಮಾಜದ ಒಳಗೂ ಮತ್ತು ಹೊರಗೂ ಭ್ರಷ್ಟಾಚಾರ ತುಂಬಿದ್ದು, ಅದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಈ ಹೋರಾಟದ ನೇತೃತ್ವವನ್ನು ಪ್ರಶ್ನಾತೀತ ವ್ಯಕ್ತಿತ್ವಗಳು ವಹಿಸಬೇಕು ಎಂದು ಅವರು ತಿಳಿಸಿದರು.

ಸಮಾಜಕ್ಕೆ ಪೂರಕವಲ್ಲದ ಮತ್ತು ನಮ್ಮದಲ್ಲದ ಅನೇಕ ಸಂಸ್ಕೃತಿ ಮತ್ತು ಆಚರಣೆಗಳು ಕೂಡ ಭ್ರಷ್ಟ ಎನಿಸುತ್ತದೆ. ಸಮಾಜ ಮತ್ತು ವೃತ್ತಿಯಲ್ಲಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕು. ನಮ್ಮ ಮನದ ಬಾಗಿಲನ್ನು ನಾವು ತೆರೆದು ನೋಡಿಕೊಳ್ಳಬೇಕಿದೆ. ವೃತ್ತಿಯಲ್ಲದ ಪ್ರವೃತ್ತಿಯೂ, ಭ್ರಷ್ಟಾಚಾರವೂ ತೊಲಗಿ ಸದಾಚಾರ ಎಲ್ಲೆಡೆ ಹರಡಲಿ ಎಂದು ಅವರು ಆಶಿಸಿದರು.

ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪರಿಸರ ತಜ್ಞ ಚಂದ್ರಶೇಖರ್ ಹರಿಹರನ್, `ಸುಧಾ~ ವಾರಪತ್ರಿಕೆ ಸಹಾಯಕ ಸಂಪಾದಕ ಬಿ.ಎಂ. ಹನೀಫ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಸಚಿವ ಎಸ್.ಎಸ್. ಪಾಟೀಲ್, ಶಾಮನೂರು ಮಲ್ಲಿಕಾರ್ಜುನ್, ಶಾಸಕರಾದ ಸುರೇಶ್, ಸಂಗಮೇಶ್, ಹರೀಶ್ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT