ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರನ್ನು ಅರ್ಥಮಾಡಿಕೊಳ್ಳುವ ಮುನ್ನ

Last Updated 11 ಅಕ್ಟೋಬರ್ 2011, 5:25 IST
ಅಕ್ಷರ ಗಾತ್ರ

`ಬಸವಣ್ಣನವರನ್ನು ಹೇಗೆ ಅರ್ಥಮಾಡಿಕೊಳ್ಳುವುದು?~ ಎಂದು ಪ್ರತಿಸ್ಪಂದನ ಅಂಕಣದಲ್ಲಿ (ಪ್ರ.ವಾ. 16.9.11) ಎಚ್.ಎಸ್. ಶಿವಪ್ರಕಾಶ್ ಅವರು ಕೆಲವು ತೀರ್ಮಾನಗಳನ್ನು ಮಾಡುತ್ತಾರೆ. `ಬಸವಣ್ಣನವರ ಕುಲಜಾತಿಗಳ ತನಿಖೆ ತನಿಖೆದಾರರಿಗೆ ಎಷ್ಟು ಮುಖ್ಯವಾದರೂ ನಮಗೆ ಮುಖ್ಯವಲ್ಲ.

ಅಥವಾ ಐತಿಹಾಸಿಕ ತೀರ್ಪುಗಳಿಗೆ ಇಳಿಸುವ ಮಾರ್ಗವೂ ಸಂಕುಚಿತವಾದುದು~ ಎಂದು ಲೇಖಕರ ತೀರ್ಪು ಕೊಡುವ ಮೊದಲು ಬಸವಣ್ಣನೆಂಬ ಆದರ್ಶದ ಹಿಂದೆ ಹಿಂದುಳಿದ ಶೋಷಿತ ಜಾತಿಗಳೇ ವಚನ ಚಳವಳಿಗೆ ಮೂಲ ಪ್ರೇರಣೆ ಎಂಬ ನೆಲೆಗಟ್ಟಿನ ತಳಹದಿಯಲ್ಲಿ ಅನಾವರಣಗೊಂಡಿದೆ ಎಂದು ಅರ್ಥವಾಗಬೇಕಿತ್ತು.

ಬಾಪು ವೀರಮ್ಮ ಎರೆಸೀಮೆ ಎಂಬ ದಲಿತ ಹುಡುಗಿಯನ್ನು ತಮ್ಮ ಆಶ್ರಯದಲ್ಲಿ ಇರಿಸಿಕೊಂಡು ಅವಳನ್ನು `ನನ್ನ ಮಗಳು~ ಎಂದು ಕರೆದಿದ್ದು `ಮಹಾಚೈತ್ರ~ ಬರೆದವರಿಗೆ ಸೋಜಿಗವೆನ್ನಿಸಬಹುದು.

ಬಾಪೂಜಿ ವೀರಮ್ಮನಂಥವರನ್ನು ಸಾಕುತ್ತಿದ್ದುದು ತಮ್ಮನ್ನು ದಲಿತರೊಂದಿಗೆ ಕಂಡುಕೊಳ್ಳುತ್ತಿದ್ದುದು ಜಾತಿ, ವರ್ಗಗಳ ಸೀಮೆ ದಾಟಲು ಅವರು ನಡೆಸುತ್ತಿದ್ದ ಪ್ರಯತ್ನ. ಮಾದಾರ ಚನ್ನಯ್ಯನ ಮಗನೆಂದು ಬಸವಣ್ಣ ತಮ್ಮನ್ನು ತಾವು ಕರೆದುಕೊಂಡ ಬಗ್ಗೆ ಸದರಿ ನಾಟಕಕಾರರು ಬೆಚ್ಚುತ್ತಾರೆ (ಶಿವಪ್ರಕಾಶ್) ಸಲ್ಲದ ಪೋಸ್ ಕೊಡುತ್ತಾ “ಬಸವಣ್ಣನವರಿಗೆ ತಾವು ಕಟ್ಟಿದ ಪಂಥಕ್ಕೂ ತಾನು `ಹೊರಗಳವನು~ ಎಂದು ಯಾಕೆ ಅನ್ನಿಸಿತು” ಎಂದು ಕೇಳುತ್ತಾರವರು! (ಪಿ. ಲಂಕೇಶ್: ಮಹಾಚೈತ್ರ: ವಿದ್ಯಾರ್ಥಿಗಳ ಉರುಳು)

ಮೂರು ದಶಕಗಳ ಹಿಂದೆ ರಚಿಸಿದ ಮಹಾಚೈತ್ರದ ಮನಸ್ಥಿತಿಯೇ ಪ್ರಸ್ತುತ ಲೇಖನದಲ್ಲಿ ಮುಂದುವರೆದಿದೆ ಎನ್ನುವುದಕ್ಕೆ ಲಂಕೇಶ್ ವಿಮರ್ಶೆ ಅತ್ಯುತ್ತಮ ಉದಾಹರಣೆ.

ತತ್‌ಕ್ಷಣದಲ್ಲಿ ಮೀಸಲಾತಿಯೂ ಅಪ್ರಸ್ತುತ ಎಂದು ಲೇಖಕರು ಸಾರಸಗಟವಾಗಿ ವಿರೋಧಿಸುವ ದಿನಗಳು ದೂರಿಲ್ಲ! ತನಿಖೆದಾರರಿಗೆ ಎಷ್ಟು ಮುಖ್ಯವಾದರೂ ನನಗೆ ಮುಖ್ಯವಲ್ಲ ಎಂದು ತಿಳಿಸುವ ಬದಲು ಆರುಕೋಟಿ ಕನ್ನಡಿಗರ ಪರವಾಗಿ ನಿಂತು ನಮಗೆ ಮುಖ್ಯವಲ್ಲವೆಂದು ತೀರ್ಪು ಕೊಡುವ ಲೇಖಕರ ನಿರ್ಣಯಗಳು ಪ್ರಶ್ನಾರ್ಹ.

ತಲೆಮಾರುಗಳಿಂದ ಬಂದ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಗಂಭೀರವಾಗಿ ವಿಮರ್ಶಿಸುವ ಬದಲು ಚಿ.ಮೂ. ಮತ್ತು ಕಲ್ಬುರ್ಗಿಯವರಂತಹ ಸಂಶೋಧಕರನ್ನು ಎರಡು ಬಣಗಳಾಗಿ ಗುರುತಿಸಿ ವೈಚಾರಿಕತೆಯನ್ನು ಕೆಳಮಟ್ಟಕ್ಕಿಳಿಸಲೂ ಲೇಖಕರು ಮುಜುಗರ ಪಟ್ಟುಕೊಳ್ಳುವುದಿಲ್ಲ!

`ಈಚೆಗೆ ಚಿಂತಕರ ಬಣವೊಂದು ಕರ್ನಾಟಕದಲ್ಲಿ ಸಕ್ರಿಯರಾಗಿ ವಚನಗಳಲ್ಲಿ ಜಾತಿ ಅನ್ನುವ ಪದ ಪ್ರಯೋಗವೇ ಇಲ್ಲವೆಂದೂ ಅಲ್ಲಿ ಬಳಕೆಯಾಗುವ ಕುಲ ಎಂಬ ಪದ ಜಾತಿಗೆ ಸಂವಾದಿಯಲ್ಲವೆಂದೂ ಹಾಗಾಗಿ ವಚನಕಾರರು ಜಾತಿ ವಿರೋಧ ಮಾಡಲೇ ಇಲ್ಲವೆಂದು ವಾದಿಸತೊಡಗಿದೆ~ ಎಂದು ಶಿವಪ್ರಕಾಶರು ಗಮನ ಸೆಳೆಯುವುದನ್ನು ನೋಡಿದರೆ ವೈಚಾರಿಕತೆಯ ಸಾಮಾನ್ಯ ಜ್ಞಾನ ಯಾವ ಮಟ್ಟಕ್ಕಿಳಿದಿದೆ ಎಂದು ಗಮನಿಸಬಹುದು!

ಬಸವಣ್ಣನವರನ್ನು ಬೇರೆ ಬೇರೆ ಕಥನಕಾರರು, ಇತಿಹಾಸಕಾರರು ಕೊಟ್ಟ ಚಿತ್ರಣಗಳ ವಿವರಣೆಯನ್ನು ಬೆಳೆಸಿಕೊಂಡು ಇಷ್ಟೊಂದು ಬಸವಣ್ಣರಲ್ಲಿ ನಮ್ಮ ಬಸವಣ್ಣ ಯಾರು? ಎಂದು ತಮಗಿರುವ ಸಂಶಯವನ್ನೇ ಓದುಗರ ಮೇಲೆ ಹೇರಿ ಬಸವಣ್ಣನೆಂಬ ಆದರ್ಶವನ್ನು ಆ ಐತಿಹಾಸಿಕ ತೀರ್ಪುಗಳಿಗೆ ಇಳಿಸುವ ಮಾರ್ಗವೂ ಸಂಕುಚಿತವಾದುದು ಎನ್ನುತ್ತಾರೆ.

ಅಂದರೆ ಲೇಖಕರು ಬಸವಣ್ಣನವರನ್ನು ಅರ್ಥಮಾಡಿಕೊಳ್ಳಲು ವಚನಗಳು ಅಷ್ಟೊಂದು ಕಾಡಿಸಿಲ್ಲ! ಇಲ್ಲಿ ಲೇಖಕರ ಬೌದ್ಧಿಕ ಕಸರತ್ತು ಕಾಣಬಹುದೇ ಹೊರತು ಸಾಮಾನ್ಯ ಓದುಗರಿಗೆ ಅರ್ಥವಾಗಬಲ್ಲ ಸರಳ ವಿಷಯಗಳು ಇಲ್ಲ. ಈ ಸರಳ ವಿಷಯಗಳನ್ನು ವಚನಗಳಲ್ಲೇ ನಾವು ಕಾಣಬಹುದು.

ಪ್ರಸ್ತುತ ಲೇಖನದಲ್ಲಿ ಶಿವಪ್ರಕಾಶ್ ಅವರು ಬಸವಣ್ಣನೆಂಬ ಜಂಗಮ ಸಂಕೇತವನ್ನೂ, ಇತಿಹಾಸವೂ ಒಂದು ಜಂಗಮ ಪ್ರಕ್ರಿಯೆ ಎಂದು ಹೊಸ ಪದ ಪ್ರಯೋಗ ಮಾಡಿದ್ದಾರೆ.

`ಚಲನಶೀಲತೆ~ ಸೂಕ್ತವಾದ ಪದವನ್ನು ಬಳಸುವ ಬದಲು ಓದುಗರಿಗೆ ಗೊಂದಲ ನಿವಾರಿಸಲು ಆವರಣದಲ್ಲಿ ಈ ಜಂಗಮ ಪದವನ್ನು ಜಾತಿ, ಉಪಜಾತಿಯ ಅರ್ಥದಲ್ಲಿ ನಾನು ಬಳಸುತ್ತಿಲ್ಲ ಎಂದು ವಿವರಣೆ ಕೊಡುವುದು ಅವರ `ಜಂಗಮಪ್ರಿಯತೆ~ಗೆ ಸಾಕ್ಷಿ!
ಪ್ರಸ್ತುತ ಲೇಖನದ ಆರಂಭದಲ್ಲಿ ಎಲ್ಲಿಯವರೆಗೆ ಜಾತಿ ಉಪಜಾತಿಗಳ ಪಾಂಥಿಕ ಹಿತಾಸಕ್ತಿಗಳಿರುತ್ತವೋ ಅಲ್ಲಿಯವರೆಗೆ ಈ ಚರ್ಚೆ ನಿಲ್ಲುವಂಥದ್ದಲ್ಲ ಎಂದ ಅಂಬೇಡ್ಕರ್ ವಾದಿಯ ಆತಂಕ ಶಿವಪ್ರಕಾಶರಿಗೆ ಅರ್ಥಪೂರ್ಣವಾಗಿ ಕಂಡಿರುವುದು ಅಷ್ಟೊಂದು ಪ್ರಾಮಾಣಿಕತೆಯಿಂದ ಕೂಡಿಲ್ಲ.

ಈ ಹಿಂದೆ ಬಸವಣ್ಣನವರ ಕುರಿತ `ಮಹಾಕ್ಷೇತ್ರ~ ನಾಟಕ ರಚಿಸಿ ಸಾಕಷ್ಟು ಟೀಕೆಗೊಳಗಾಗಿ ವಿದ್ಯಾರ್ಥಿಗಳಿಗೆ ತಲೆನೋವಾಗಿದ್ದ ಲೇಖಕರು ಬಸವಣ್ಣನವರನ್ನು ಅರ್ಥಮಾಡಿಸುವ ಭರದಲ್ಲಿ ತಮ್ಮನ್ನು ತಾವೇ ಅರ್ಥಮಾಡಿಸಿಕೊಳ್ಳುವ ಸ್ಥಿತಿ ತಂದುಕೊಂಡಿರುವುದು ಗಮನಾರ್ಹ ಸಂಗತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT