ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನೆಂಬ ಸಮತಾವಾದಿಗೆ ಜಾತಿಯ ತಿಲಕ ಹಚ್ಚುವವರು...

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಒಬ್ಬ ಸಂಶೋಧಕ ಸತ್ಯದ ಹುಡುಕಾಟಕ್ಕಾಗಿ ತನ್ನ ಅಧ್ಯಯನದ ಸಾಮರ್ಥ್ಯ ಮತ್ತು ಮಿತಿಗೆ ಅನುಗುಣವಾದ ಪ್ರಾಕಲ್ಪನೆಗಳನ್ನು ಇಟ್ಟುಕೊಳ್ಳುತ್ತಾನೆ. ಅದರ ಸಮರ್ಥನೆಗಾಗಿ ಪೂರಕವಾದ ಆಕರಗಳನ್ನು ಬಳಸಿಕೊಂಡು ತನ್ನ ಅಭಿಪ್ರಾಯವನ್ನು ಅಥವಾ ಸಿದ್ಧಾಂತವನ್ನು ಮಂಡಿಸುವ ಎಲ್ಲ ಸ್ವಾತಂತ್ರ್ಯವನ್ನು ಆತ ಹೊಂದಿರುತ್ತಾನೆ. ಆದರೆ ಈ ಸಂಶೋಧನಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಒಂದು ಸ್ಥಾಪಿತವಾದ ಸಿದ್ಧಾಂತ ಅಥವಾ ನಂಬಿಕೆಯ ವಿರುದ್ಧವಾದ ವಿಚಾರವನ್ನು ಹರಿಬಿಡುವ ವಿಲಕ್ಷಣ ಮನೋಭಾವ ಕೆಲವರಲ್ಲಿರುತ್ತದೆ.

ಬಸವಣ್ಣನವರ ವೈಚಾರಿಕ ಮತ್ತು ವಿದ್ವತ್ತಿನ ವಿಚಾರದ ಕುರಿತು ಪರ ಮತ್ತು ವಿರೋಧ ನಿಲುವುಗಳ ಚರ್ಚೆ ಬಂದಾಗ, ಕುರುಡರು ಆನೆಯನ್ನು ವರ್ಣಿಸಿದ ರೀತಿಯಲ್ಲಿ ನಮ್ಮ ವಿದ್ವಾಂಸರು ವರ್ತಿಸುತ್ತಿದ್ದಾರೆ. ಬಸವಣ್ಣನವರ ತತ್ವಗಳ ಆಚರಣೆಗಿಂತ ಅವುಗಳನ್ನು ಸಂಶೋಧನೆಯ ವಸ್ತುವನ್ನಾಗಿ ಬಳಸುತ್ತಿರುವುದು ಇಲ್ಲಿ ಕಂಡುಬರುತ್ತಿದೆ. ಶೈವ ಮತಗಳ ತತ್ವಗಳನ್ನು ಅನುಕರಿಸಿಕೊಂಡು ಮೈದಳೆದ ವೀರಶೈವ ಮತದ ಆಚರಣೆಗಳಿಗಿಂತ ಬಿನ್ನವಾದ ಸರಳ ಮತ್ತು ಸರ್ವಸಮ್ಮತವಾದ ಮತವನ್ನು ಬಸವಣ್ಣ ಕಟ್ಟಲು ಯತ್ನಿಸಿದವರು. ಬಸವಣ್ಣ ತನ್ನ ವಚನಗಳಿಗೆ ಸಂಸ್ಕೃತ ಭೂಯಿಷ್ಟವನ್ನು ಆಧಾರವಾಗಿಟ್ಟುಕೊಳ್ಳದೆ ಹಾಗೂ ಜನಪದವನ್ನು ಸಹ ಅತಿಯಾಗಿ ಆಹ್ವಾನಿಸಿಕೊಳ್ಳದೆ ಒಂದು ಮಧ್ಯಮ ಮಾರ್ಗವನ್ನು ಅನುಸರಿಸಿದ್ದಾರೆ. 

ಸಮಾಜದ ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸ್ವಾರ್ಥ ಹಿತಸಾಧನೆಗಾಗಿ ಮತ ಧರ್ಮದ ಹೆಸರಿನಲ್ಲಿ ಇತರರನ್ನು ಶೋಷಿಸುತ್ತ ಬಂದಿರುವುದನ್ನು ಎಲ್ಲ ಧರ್ಮಗಳಲ್ಲೂ ಕಾಣುತ್ತೇವೆ.  ಪುರೋಹಿತ ಶಾಹಿಯ ದಬ್ಬಾಳಿಕೆ ಹೆಚ್ಚಾಗಿ, ಗುಡಿ ಗುಂಡಾರಗಳು ದೇವರ ಹೆಸರಿನ ವ್ಯಾಪಾರ ಕೇಂದ್ರಗಳಾಗಿ, ಮತ ಧರ್ಮಗಳು ಜನರ ನಡುವೆ ಮೇಲು- ಕೀಳು, ಉಚ್ಛ- ನೀಚ ಎಂಬ ಭೇದ ಭಾವವನ್ನು ಸೃಷ್ಟಿಸಿದವು. ಆ ಮೂಲಕ ಜನರನ್ನು ಶೋಷಣೆಗೆ ಗುರಿ ಮಾಡುವ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮದ ಅರ್ಥವನ್ನೇ ಅನರ್ಥಗೊಳಿಸಿದವು.  ಇಂತಹ ಎಲ್ಲ ಸಾಮಾಜಿಕ ಅಸಮಾನತೆಗಳನ್ನು ದಿಕ್ಕರಿಸಿ ಮನುಷ್ಯ ಮತ್ತು ದೇವರ ನಡುವೆ ಇರುವ ಭಯಾನಕ ಅಂತರವನ್ನು ಹಾಗೂ ಮಧ್ಯವರ್ತಿಗಳನ್ನು ನಿರ್ನಾಮ ಮಾಡುವ ಸಲುವಾಗಿಯೇ  ಬಸವಣ್ಣ 12ನೇ ಶತಮಾನದಲ್ಲಿ  ವಚನ ಚಳುವಳಿಯ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು.

ಆದರೆ, ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಸಮಾಜವು ಇಂದು ಮತ್ತೆ ವರ್ಣಾಶ್ರಮದ  ಕರ್ಮಠ ಆಚರಣೆಗಳಿಗೆ ಬಲಿಯಾಗುತ್ತಿದೆ.  ವೃತ್ತಿ ಸೂಚಕಗಳಾದ ಜಂಗಮ, ಬಣಜಿಗ, ಪಂಚಮಸಾಲಿ, ಗಾಣಿಗ, ಸಾದರ, ಹಡಪದ, ಸಿಂಪಿಗ, ಕುಂಬಾರ, ಕಂಬಾರ ಮುಂತಾದವುಗಳು ಇಂದು ಜಾತಿ ಸೂಚಕಗಳಾಗಿ ಪರಿವರ್ತನೆಗೊಂಡು ಸಾಮಾಜಿಕ ಸಮಾನತೆಯನ್ನು ತರದೆ, ಸಾಮಾಜಿಕ ವಿಘಟನೆ ಹಾಗೂ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿವೆ.

`ಕುಲಮದವಳಿಯದನ್ನಕ ಶರಣನಾಗಲೇಕೆ? ವಿಧಿವಶ ಬಿಡದನ್ನಕ ಭಕ್ತನಾಗಲೇಕೆ? ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು, ಕಿಂಕರರ ಕಿಂಕರನಾಗಿರಬೇಕು?. ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿದ ಬಸವಣ್ಣ ಮೇಲು ಜಾತಿ ಕೀಳು ಜಾತಿ ಎಂದು ಭಾವಿಸದೇ ಅಂಗದ ಮೇಲೆ ಲಿಂಗವಿರುವ ಎಲ್ಲರೂ ಸಂಗನ ಶರಣರೇ ಎಂದು ಹೇಳಿದರು.

ಜಾತಿ-ಧರ್ಮಗಳ ಸಂಕೋಲೆಯನ್ನು ಕಿತ್ತೆಸೆದು ಲಿಂಗಾಯತರೆಲ್ಲರೂ ಹಿಂದೂ ಧರ್ಮದ ಕಟ್ಟು ಪಾಡುಗಳ ಹೊರತಾದ ಒಂದು ಸ್ವಸ್ಥ ಮತ್ತು ಸಮಾನತೆಯ ಸಮಾಜವನ್ನು ಕಟ್ಟಬೇಕೆಂದು ಬಸವೇಶ್ವರರು ಬಯಸಿದ್ದರು. ಆದರೆ, ಲಿಂಗಾಯತ ತತ್ವಗಳಿಗೆ ತಿಲಾಂಜಲಿಯನ್ನಿಟ್ಟು ಮತ್ತೆ ಹಿಂದೂ ಧರ್ಮದ ಜಾತಿ ತಾರತಮ್ಯದ ಬದುಕನ್ನು ಆಚರಿಸುತ್ತಿದ್ದೆೀವೆ. ಅಧಿಕಾರ-ಗದ್ದುಗೆ, ಉನ್ನತ ಪೀಠ- ಸಿಂಹಾಸನ ಬಯಸುವವರು ಮತ್ತೆ ಅಸ್ಪೃಶ್ಯತೆಯ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. 

 ಅಂತ್ಯಜರ ಕೇರಿಗಳಿಗೆ ಹೋಗಿ ಸಹಭೋಜನ ಮಾಡುತ್ತಿದ್ದ ಬಸವಣ್ಣನಿಗೆ ಇಂದು ಊರ ತುಂಬ ಗುಡಿಗಳನ್ನು ಕಟ್ಟಿದ್ದೆೀವೆ.  ಅದರೆ ಅವುಗಳಿಗೆ ಅಂತ್ಯಜರ ಪ್ರವೇಶವನ್ನು ನಿರಾಕರಿಸಿದ್ದೆೀವೆ! ಅಂದ ಮೇಲೆ ಅಂತಹ ದೇವಾಲಯಗಳಲ್ಲಿ ಬಸವಣ್ಣ ಬಂದು ಹೇಗೆ ನೆಲೆಸಿಯಾನು? ಯಾರನ್ನು ತನ್ನವರು ಎಂದು ಬಸವಣ್ಣ ಎದೆಗೆ ಅಪ್ಪಿಕೊಂಡಿದ್ದನೋ ಅದೇ ದಲಿತರ ಮೇಲೆ ಧರ್ಮದ ಹೆಸರಿನಲ್ಲಿ ಲಿಂಗಾಯತರು ದಬ್ಬಾಳಿಕೆ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಬಸವ ತತ್ವವನ್ನು ಆಲಂಗಿಸಿಕೊಳ್ಳುವ ಮೂಲಕ ಈ ಸಮಾಜದ ಶೂದ್ರಾತಿ ಶೂದ್ರ ವ್ಯಕ್ತಿ ಜಾತಿ ಅವಮಾನದ ಸಂಕೋಲೆಯಿಂದ ಹೊರಬಂದು ಸ್ವಾಭಿಮಾನದ ಬದುಕಿನ ಕನಸನ್ನು ಕಂಡುಕೊಂಡ.  ಇಂದು ಲಿಂಗಾಯತವನ್ನು ಸ್ವಿಕರಿಸಿದ್ದರಿಂದ ತಮಗೆ ಲಭಿಸಬಹುದಾಗಿದ್ದ ಜಾತಿ ಮೀಸಲಾತಿಯಿಂದ ತಾವು ವಂಚಿತರಾಗಿ ಅತ್ತ ಸಹಬಾಳ್ವೆಯೂ ಇಲ್ಲದೆ ಇತ್ತ ಸೌಲಭ್ಯವೂ ಇಲ್ಲದೆ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ.

ತತ್ವಗಳ ಹೆಸರಿನಲ್ಲಿ ಇಂದು ಕೋಮು ಗಲಭೆಗಳು ಸಮಾಜವನ್ನು ಅಶಾಂತಿ ಹಾಗೂ ಅಸಹನೆಯ ದಾವಾಗ್ನಿಗೆ ನೂಕಿವೆ.  ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಬಸವ ತತ್ವದ ಪ್ರಚಾರ ಮತ್ತು ಆಚರಣೆಗಳು ತುಂಬ ಪ್ರಸ್ತುತ ಅನ್ನಿಸುತ್ತಿದೆ.

ಜಗತ್ತಿನ ಎಲ್ಲ ಧರ್ಮಗಳು ಒಂದಿಲ್ಲೊಂದು ಕಾಲದಲ್ಲಿ ಅಥವಾ ಪ್ರದೇಶದಲ್ಲಿ ರಾಜಾಶ್ರಯದ ನೆರವಿನಿಂದಲೇ ಬೆಳೆದಿವೆ. ಆಮಿಷದ ಅಥವಾ ಬಲವಂತದ ಮೂಲಕ ತಮ್ಮ ಹರಿವನ್ನು ಅವು ಹೆಚ್ಚಿಸಿಕೊಂಡಿವೆ. ಆದರೆ ಬಸವಧರ್ಮವು ಇವಾವುಗಳ ಹಂಗಿಲ್ಲದೆ ಜನಾದರಣೆಯಿಂದ ಬೆಳೆದಿದೆ.  ಹೀಗಾಗಿ, ಜಾಗತಿಕ ಧರ್ಮಗಳ ಸಾಲಿನಲ್ಲಿ ಅತ್ಯಂತ ವಿಶಿಷ್ಟವಾಗಿ ನಿಲ್ಲುವ ಲಿಂಗಾಯತ ಧರ್ಮವು ತಾನು ಸುಖಿಯಾಗಿ ಹಾಗೂ ಸಕಲರೂ ಸುಖಿಯಾಗಿ ಇರಲಿ ಎಂಬ ಮಾನವತಾ ವಾದದ ಮೇಲೆ ನಿಂತಿದೆ.  ಕರ್ಮಠ ಮತಾಚರಣೆಗಳು ಹಾಗೂ ಕಂದಾಚಾರಗಳಿಂದ ವ್ಯಕ್ತಿಯನ್ನು ವಿಮುಕ್ತಗೊಳಿಸುವ ಸರಳ ಬದುಕಿನ ಸಿದ್ಧಾಂತವನ್ನು ಅದು ಪ್ರತಿಪಾದಿಸುತ್ತದೆ. 

ಸಾಮಾಜಿಕ ಸಮಾನತೆ, ಕಾಯಕ ನಿಷ್ಠೆ, ವೃತ್ತಿ ಗೌರವ, ದಾಸೋಹ ಪರಂಪರೆ, ಸ್ತ್ರೀ ಸಮಾನತೆ, ಅಸ್ಪೃಶ್ಯತೆ ಮತ್ತು ಜಾತಿ ವಿನಾಶ, ದೇವರು ಮತ್ತು ಮನುಷ್ಯನ ನಡುವೆ ಸೃಷ್ಟಿಯಾದ ಪುರೋಹಿತ ಶಾಹಿಯ ಬಹಿಷ್ಕಾರ ಹೀಗೆ ವಿಶಿಷ್ಟವಾದ ಸಾಮಾಜಿಕ ಕ್ರಾಂತಿಯನ್ನು ಈ ಧರ್ಮ ಲೋಕಕ್ಕೆ ನೀಡಿದೆ. ಅಂತಹ ಧಾರ್ಮಿಕ ತತ್ವಗಳು ಇಂದು ಆಚರಣೆಯಾಗದೆ ಕೇವಲ ಆಡಂಬರವಾಗಿ ಪರಿಣಮಿಸಿವೆ. ಹೀಗಾಗಿ ಲಿಂಗಾಯತ ಸಮಾಜವೆಂಬುದು ಇಂದು ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ಬಸವಣ್ಣನೆಂಬ ಕಟು ವಾಸ್ತವವಾದಿ ಕೇವಲ ಒಬ್ಬ ಪವಾಡ ಪುರುಷನಾಗಿ ಉಳಿಯುವಂತಾಗಿದೆ. ಆತನ ತತ್ವಗಳ ಕುರಿತು ಗೊಡ್ಡು ಹರಟೆಯ ನಮಗೆ ಈಗ ಬೇಕಾಗಿಲ್ಲ. ಅವುಗಳ ಆಚರಣೆಯ ಕುರಿತು ಪ್ರಚಾರ ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT