ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿ ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ಈಜು: ನೆಟ್ಟಕಲ್ಲಪ್ಪ ಕೇಂದ್ರದ ಮಾಳವಿಕಾ ಚಾಂಪಿಯನ್
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರ ಒಟ್ಟು 1389 ಪಾಯಿಂಟ್‌ಗಳನ್ನು ಕಲೆ ಹಾಕುವ ಮೂಲಕ ಇಲ್ಲಿ ನಡೆದ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಬಾಲಕಿಯರ ವಿಭಾಗದಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರದ ಮಾಳವಿಕಾ ವಿ. ಗುಂಪು-1ರ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಪಿಯನ್‌ಷಿಪ್‌ನಲ್ಲಿ ಮೂರು ಕೂಟ ದಾಖಲೆಗಳನ್ನು ನಿರ್ಮಿಸಿದ ಮಾಳವಿಕಾ ಒಟ್ಟು 182 ಪಾಯಿಂಟ್‌ಗಳೊಂದಿಗೆ ಈ ಸಾಧನೆ ಮಾಡಿದರು. ಈ ಸ್ಪರ್ಧಿ ಕೊನೆಯ ದಿನವೂ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕೂಟ ದಾಖಲೆ ನಿರ್ಮಿಸಿದರು. ನಿಗದಿತ ಗುರಿಯನ್ನು ಮಾಳವಿಕಾ ಎರಡು ನಿಮಿಷ 11.29ಸೆಕೆಂಡ್‌ಗಳಲ್ಲಿ ಮುಟ್ಟಿ 1999ರಲ್ಲಿ ನಿಶಾ ಮಿಲೆಂಟ್ (ಕಾಲ: 2:12.13ಸೆ.) ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು.

`ಈ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಉದ್ದೇಶದಿಂದ ಎರಡು ತಿಂಗಳುಗಳಿಂದ ಕಠಿಣ ಅಭ್ಯಾಸ ನಡೆಸಿದ್ದೆ. ನನ್ನ ಪ್ರಯತ್ನಕ್ಕೆ ಫಲ ಲಭಿಸಿದೆ' ಎಂದು ಮಾಳವಿಕಾ ಸಂತಸ ಹಂಚಿಕೊಂಡರು. ಬಸವನಗುಡಿ ಈಜು ಕೇಂದ್ರದ ಅರವಿಂದ್ ಎಂ. ತಮ್ಮ ಸಾಧನೆಯನ್ನು ಸುಧಾರಿಸಿಕೊಂಡರು. ಗುಂಪು-1ರ 400ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಅರವಿಂದ್ ನಾಲ್ಕು ನಿಮಿಷ 50.49ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಇವರು ಈ ಮೊದಲು 4:51.37ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದ ಸಾಧನೆ ಇವರ ಹೆಸರಿನಲ್ಲಿತ್ತು. 235 ಪಾಯಿಂಟ್‌ಗಳನ್ನು ಕಲೆ ಹಾಕಿದ ಅರವಿಂದ್ ಗುಂಪು -1ರ ವೈಯಕ್ತಿಕ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಚಾಂಪಿಯನ್‌ಷಿಪ್‌ನ ಕೊನೆಯ ದಿನ ಬಿಎಸಿಯ ಎಸ್.ಪಿ. ಲಿಖಿತ್ ಬಾಲಕರ ಗುಂಪು-1 ವಿಭಾಗದ 200ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ದಾಖಲೆ ನಿರ್ಮಿಸಿದರು. ಲಿಖಿತ್ ಈ ಗುರಿಯನ್ನು ಎರಡು ನಿಮಿಷ 30.43ಸೆಕೆಂಡ್‌ಗಳಲ್ಲಿ ಮುಟ್ಟಿ 2011ರಲ್ಲಿ ಆಕಾಶ್ ರೋಹಿತ್ (ಕಾಲ: 2:32.14ಸೆ.) ದಾಖಲೆಯನ್ನು ಅಳಿಸಿ ಹಾಕಿದರು.

ಬಾಲಕರ ಗುಂಪು-1ರ 200ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಬಿಎಸಿಯ ಮಿಥೇಶ್ ಎಂ. ಕುಂಟೆ (ಕಾಲ: 2:00.1ಸೆ.) ಚಿನ್ನ ಜಯಿಸಿದರೆ, ಪಿಎಂಸಿ ಕೇಂದ್ರದ ಮಹಮ್ಮದ್ ಸಲೀಮ್ ಯಾಕೂಬ್ (ಕಾಲ: 2:01.82ಸೆ.) ಬೆಳ್ಳಿ ಮತ್ತು ಬಿಎಸಿಯ ಪ್ರಣಮ್ ಬಿ. (ಕಾಲ: 2:04.12ಸೆ.) ಕಂಚು ತಮ್ಮದಾಗಿಸಿಕೊಂಡರು.
ಬಾಲಕಿಯರ ಗುಂಪು-2ರ 50ಮೀ. ಬಟರ್ ಫ್ಲೈ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಬಿಎಸಿಯ ದಾಮಿನಿ ಕೆ. ಗೌಡ 31.43ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದುಕೊಂಡರು. ಈ ವಿಭಾಗದ ಬೆಳ್ಳಿ ವಿಎಸ್ ಕೇಂದ್ರದ ಚಂದನಾ ಕೆ. (ಕಾಲ: 33.11ಸೆ.) ಜಯಿಸಿದರೆ, ಬಿಎಸಿಯ ಅಮೂಲ್ಯ ಆರ್. (34.07ಸೆ.) ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT