ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸಿರು ಬಯಕೆ ಆಗುವುದೇಕೆ?

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
 
ಹೆಚ್ಚಿದ ನಿಂಬಿವೋಳು
ಕಲಸಿದ ಮೊಸರನ್ನ
ಹೋಮಗಿ ನೆಳ್ಳಾಗ ಕುತುಗಂಡು ಉಣ್ಣಾಂಗ ಆಗ್ಯಾವ್ ರೀ
ಬಾಲಾನ ಬವಕಿಗೆ ಬಗಸಂಗ ಆಗ್ಯಾವ ರೀ...!
 
ಹುಂ! ನಿಂಬೆ ಉಪ್ಪಿನಕಾಯಿ, ಮೊಸರನ್ನ ಅಂತೆಲ್ಲ ಓದುತ್ತಾ ಇದ್ದರೆ ನಿಮ್ಮೆಲ್ರ ಬಾಯಲ್ಲೂ ನೀರೂರ‌್ತಿರ ಬೇಕಲ್ಲ!
 
ಅದ್ರಲ್ಲೂ ನೀವು ಗರ್ಭವತಿ ಆಗಿದ್ರಂತೂ ಇದನ್ನ ಓದೋದ್ರೊಳಗೆ ಥಟ್ ಅಂತ ಎದ್ದು ಹೋಗಿ ಮೊಸರನ್ನ, ಉಪ್ಪಿನಕಾಯಿ ತಿಂದು ಬಂದಿರಲೂಬಹುದು.
ಹೆಣ್ಣಿನ ಬಯಕೆಗಳನ್ನ ಜನಪದ ಗೀತೆಗಳಲ್ಲಿ ಎಷ್ಟು ಸೊಗಸಾಗಿ ಅರ್ಥೈಸಿದ್ದಾರೆ, ಈ ಬಸಿರ ಬಯಕೆಗಳೇ ಹೀಗೆ. ಸುಖಾಸುಮ್ಮನೆ ಹೇಗೆಂದರೆ ಹಾಗೆ ಹುಟ್ಟುತ್ತವೆ. ಹಾಗೇ ಈ ಬಯಕೆಗಳನ್ನ ಒಬ್ಬ ಹೆಣ್ಣಲ್ಲದೆ ಇನ್ನಾರು ತಾನೇ ಸರಿಯಾಗಿ ಅರಿತುಕೊಳ್ಳಲು ಸಾಧ್ಯ? ಅದು ಅಮ್ಮನಾಗಿ, ಅಕ್ಕನಾಗಿ, ಅತ್ತೆಯಾಗಿ, ಇನ್ನಾವುದೋ ರೂಪದಲ್ಲಿ ಇರಬಹುದು. ಒಟ್ಟಿನಲ್ಲಿ ಬಸಿರ ಬಯಕೆಗಳು ಸಹಜ ಅಂದ್ಹಾಗಾಯ್ತು.
 
ಆಕೆ ಹಳ್ಳಿ ಹೆಣ್ಣು ಮಗಳಾಗಿದ್ರಂತೂ ಸಜ್ಜಿ ರೊಟ್ಟಿ, ಗೋಧಿ ರೊಟ್ಟಿ, ಹಪ್ಪಳ ಸಂಡಿಗೆ ಕರಿದು, ಮುರಿದು ಉಣ್ಣಾಂಗ ಆಗ್ಯಾವ್ ರೀ ಅಂತ ಹೇಳ್ತಾಳೆ. ಅದೇ ನಗರದ ಕಡೆಯವರಾದ್ರೆ ಅವರ ಬಯಕೆಗಳೇ ಬೇರೆ. ಗೋಭಿ ತಿನ್ನುವಾಸೆ, ಮೆಹಂದಿ ಹಾಕಿಸಿಕೊಳ್ಳುವಾಸೆ, ಹೊಸ ಹೊಸ ಸಿನಿಮಾ ನೋಡುವಾಸೆ... ಇನ್ನು ಅವರ ಆಸೆ ಈಡೇರಿಸಲಂತೂ ಭಾರಿ ಕಾರ್ಯಕ್ರಮಗಳನ್ನೇ ಹಮ್ಮಿಕೊಳ್ಳುತ್ತೇವೆ. ಬಯಕೆ ಬುತ್ತಿ, ಸೀಮಂತ ಇನ್ನೂ ಏನೆಲ್ಲಾ. ಹಾಗಾಗಿ ಬಯಕೆಗಳು ಹೆಣ್ಣಿನ ಗರ್ಭಾವಸ್ಥೆಯಲ್ಲಿ ಒಂದು ಮಹತ್ತರವಾದ ಘಟ್ಟ ಅಂದ್ಹಾಗಾಯ್ತು.

ಯಾಕೀ ಬಯಕೆ?
1. ಗರ್ಭಾವಸ್ಥೆಯಲ್ಲಿ ಅನೇಕ ರೀತಿಯ ದೈಹಿಕ ಹಾಗೂ ಮಾನಸಿಕ ಬದಲಾವಣೆಗೆ ಹೆಣ್ಣು ಒಳಪಡುತ್ತಾಳೆ. ಈ ಎಲ್ಲ ಬದಲಾವಣೆಗಳೂ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳ ನಿಯಂತ್ರಣದಲ್ಲಿ ಇರುತ್ತವೆ. ಅದರಲ್ಲೂ  HCG(human chorionic gonado tropin)   ಎನ್ನುವ ಹಾರ್ಮೋನಿನ ಪ್ರಭಾವ ಹೆಚ್ಚಾಗಿ ಇರುವುದರಿಂದ ಅದು ನೇರವಾಗಿ ಅಲ್ಲದಿದ್ದರೂ ಮೆದುಳಿಗೆ ತರಹೇವಾರಿ ಸಂದೇಶಗಳನ್ನು ರವಾನಿಸುತ್ತಾ, ಬಯಕೆಯ ಹುಟ್ಟಿಗೆ ಕಾರಣವಾಗುತ್ತದೆ.
 
2. ಲೋಕಪುರುಷ ಸಿದ್ಧಾಂತದ ಪ್ರಕಾರ ಹೇಳುವುದಾದರೆ, ದೇಹದಲ್ಲಿ ಯಾವ ಅಂಶದ ಕೊರತೆ ಉಂಟಾಗುವುದೋ ಅದನ್ನು ನೀಗಿಸಿಕೊಳ್ಳುವುದರ ಕಡೆ ಒಲವು ಹೆಚ್ಚಾಗುತ್ತದೆ. ಉದಾಹರಣೆಗೆ ದೇಹದಲ್ಲಿ ಕ್ಯಾಲ್ಷಿಯಂ, ಕಬ್ಬಿಣದ ಅಂಶ ಕಡಿಮೆ ಆದಾಗ ಮಣ್ಣು ತಿನ್ನಬೇಕು ಎನಿಸಬಹುದು, ಹಾಗೇ ವಿಟಮಿನ್ `ಸಿ'  ಕೊರತೆ ಆದಾಗ ಹುಳಿ ತಿನ್ನುವ ಕಡೆ ಮನಸ್ಸಾಗ ಬಹುದು.
 
3. ಗರ್ಭಾವಸ್ಥೆಯ ಎರಡನೇ ಹಂತದ ಅವಧಿಯಲ್ಲಿ (2nd trimiser)  ಲಾಲಾ ರಸದ ಉತ್ಪತ್ತಿ ಹೆಚ್ಚಿರುತ್ತದೆ. ಹಾಗಾಗಿ ನಾಲಿಗೆಯ ಚಪಲ ತುಸು ಹೆಚ್ಚೇ ಎನ್ನಬಹುದು!
 
4. ಸಿಹಿ ತಿನ್ನುವಾಸೆ ಆದರೆ ಹೆಣ್ಣು, ಖಾರ, ಹುಳಿ ತಿನ್ನುವಾಸೆ ಆದರೆ ಗಂಡು ಎಂದು ಏನೆಲ್ಲ ಲೆಕ್ಕ ಹಾಕುತ್ತಿರುತ್ತಾರೆ. ಆದರೆ ಇದ್ಯಾವುದೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ.
 
5. ಹಾಂ. ಈ ಎಲ್ಲ ಬದಲಾವಣೆಗಳು, ಬಯಕೆಗಳು ಎಲ್ಲ ಗರ್ಭಿಣಿಯರಲ್ಲೂ ಆಗಬೇಕೆಂದಿಲ್ಲ. ಅವರವರ ದೈಹಿಕ, ಮಾನಸಿಕ ಪ್ರಕೃತಿಗೆ ಅನುಗುಣವಾಗಿ ಬದಲಾವಣೆ ಆಗುತ್ತಿರುತ್ತದೆ.
 
ಇಂತಹ ಕಾರಣಗಳು ಏನೇ ಇರಲಿ ಬಯಕೆ ಎಂದು ಏನೇನನ್ನೋ ಹುಚ್ಚು ಹುಚ್ಚಾಗಿ ತಿಂದು ಆರೋಗ್ಯ ಕೆಡಿಸಿಕೊಳ್ಳಲು ಹೋಗಬೇಡಿ. ಏಕೆಂದರೆ ನೀವೀಗ ಒಂದು ಅದ್ಭುತ ಸೃಷ್ಟಿಗೆ ಕಾರಣರಾಗ ಹೊರಟಿರುವವರು. ಹಾಗಾಗಿ ಕೈಗೆಟುಕುವಂತಹ ಬಯಕೆಗಳನ್ನೇ ಬಯಸಿ. ಬಯಸಿದ್ದು ದೊರೆಯದಿದ್ದಾಗ ನಿರಾಸೆ ಅನುಭವಿಸುವುದಕ್ಕಿಂತಲೂ ದೊರೆತಾಗ ಅನುಭವಿಸುವ ಖುಷಿ ನಿಮ್ಮದಾಗಲಿ. 
 
ಕಡೆಯಲ್ಲಿ ಒಂದು ಮಾತು. ಆಗಾಗ ಹಿರಿಯರ ಮಾತುಗಳನ್ನು ಕೇಳಿ. ಯಾಕೆಂದರೆ ಹತ್ತು ಹಡೆದವರ ಮುಂದೆ ಒಂದೋ, ಎರಡೋ ಹಡೆಯ ಹೊರಟಿರುವವರಿಗೆ ಅವರ ಅನುಭವದ ಮಾತುಗಳು ಬೇಕಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT