ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಟಾಪ್ ಪ್ರಯಾಣಕ್ಕೆ ಇಲ್ಲವೇ ನಿಯಂತ್ರಣ?

Last Updated 22 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ಖಾಸಗಿ ಬಸ್‌ಗಳ ಮೇಲೆ ಕುಳಿತು ಪ್ರಯಾಣಿಸುವ ಪರಿಪಾಠಕ್ಕೆ ತಡೆಯಿಲ್ಲದಂತಾಗಿರುವುದರಿಂದ ಅಪಾಯದ ಭೀತಿ ಎದುರಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಬಹುತೇಕ ಖಾಲಿಯಾಗಿ ಸಂಚರಿಸುತ್ತಿದ್ದರೆ, ಖಾಸಗಿ ಬಸ್‌ಗಳಲ್ಲಿ ಜನರು ತುಂಬಿ ತುಳುಕುತಿರುತ್ತಾರೆ. ಖಾಸಗಿ ಬಸ್‌ಗಳ ಕಡಿಮೆ ಪ್ರಯಾಣ ದರದ ಕಾರಣ ಸ್ಥಳಾವಕಾಶ ಸಿಗದಿದ್ದರೂ ಪ್ರಾಣಾಪಾಯ ಲೆಕ್ಕಿಸದೆ ಬಸ್‌ಗಳ ಟಾಪ್ ಮೇಲೇರಿ ಪ್ರಯಾಣಿಸುವುದು ಮಾತ್ರ ಎಂದಿನಂತೆ ಸಾಗಿದೆ.

ಕೆಜಿಎಫ್-ಕೋಲಾರ ಮಾರ್ಗವಾಗಿ ತಿಂಗಳಿಗೊಮ್ಮೆಯಾದರೂ ಅಪಘಾತ ಸಂಭವಿಸುತ್ತಿದ್ದರೂ ಜನತೆ ಬಸ್ ಟಾಪ್ ಪ್ರಯಾಣ ಬಿಟ್ಟಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆ ಜಾಣಕುರುಡತನ ಪ್ರದರ್ಶಿಸುತ್ತಿದೆ.ಕೋಲಾರ-ಕೆಜಿಎಫ್ ಮಾರ್ಗವಾಗಿ ದಿನನಿತ್ಯ 36 ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಕೆಜಿಎಫ್‌ನಿಂದ ಕೋಲಾರಿಗೆ 14 ಕ್ಕೂ ಹೆಚ್ಚು ಬಾರಿ ಕೆಲವು ಬಸ್‌ಗಳು ಸಂಚರಿಸುತ್ತವೆ. ಉಳಿದವು ಬೆಂಗಳೂರಿಗೆ 6ರಿಂದ 8 ಬಾರಿ ಸಂಚರಿಸುತ್ತವೆ. ಕೆಜಿಎಫ್‌ನಿಂದ ವಲಗಮಾದಿ, ಮಾದಮಂಗಲ ಮಾರ್ಗವಾಗಿ ಗ್ರಾಮಾಂತರ ಸಾರಿಗೆ ಕಲ್ಪಿಸುವುದಾಗಿ ಪರವಾನಿಗೆ ಪಡೆದ ಬಸ್‌ಗಳು ಮುಖ್ಯ ರಸ್ತೆಯಲ್ಲಿಯೇ ಸಂಚರಿಸುತ್ತಿವೆ. 

ಖಾಸಗಿ ಬಸ್‌ಗಳು ಟಿವಿ ಅಳವಡಿಸಿ ಸಿನಿಮಾ ತೋರಿಸಿಯೂ ಕಡಿಮೆ ಪ್ರಯಾಣ ದರವನ್ನು ವಿಧಿಸುತ್ತಿರುವುದರಿಂದ ದಿನನಿತ್ಯ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳೆಂದರೆ ಅಚ್ಚುಮೆಚ್ಚು.ಬಹಳಷ್ಟು ಬಸ್‌ಗಳಿಗೆ ಪರವಾನಗಿಯೂ ಇಲ್ಲ ಎಂಬ ಆರೋಪವೂ ಇದೆ. ಮದುವೆ-ಇತರ ಸಮಾರಂಭಗಳಿಗೆ ಒಪ್ಪಂದ ಮೇರೆಗೆ ಎಂಬ ಅನುಮತಿ ಪಡೆದು ಸೇವೆ ನೀಡಲಾಗುತ್ತದೆ. ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸೇವೆಗೆ ಸಹ ಖಾಸಗಿ ಬಸ್ ಉಪಯೋಗಿಸಲಾಗುತ್ತದೆ. ಪರವಾನಗಿ ಇಲ್ಲದೆ ಸಹ ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡಿಗೂ ಇದೇ ಮಾರ್ಗವಾಗಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ.

ಇದೇ ಮಾರ್ಗದಲ್ಲಿ  ಅಪಘಾತಗಳು ಸಹಾ ಸಂಭವಿಸಿವೆ. ಹೀಗಾಗಿ ಇದೊಂದೇ ಮಾರ್ಗದಲ್ಲಿ ವರ್ಷಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಹಣ ಸೋರಿಕೆಯಾಗುತ್ತಿದೆ ಎಂಬ ಗಂಭೀರ ಆರೋಪವಿದೆ.ಖಾಸಗಿ ಬಸ್ ಅಕ್ರಮ ಸಂಚಾರದ ಬಗ್ಗೆ ಮುಳಬಾಗಲು ಶಾಸಕ ಅಮರೇಶ್ ಕಳೆದ ವರ್ಷ ಸದನದ ಗಮನ ಸೆಳೆದಿದ್ದರು. ಅದರಿಂದ ಎಚ್ಚೆತ್ತ ಸಾರಿಗೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಒಂದೆರೆಡು ದಿನ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದ ಪರಿಣಾಮ ಈ ಮಾರ್ಗವಾಗಿ ಸಂಚರಿಸುವ ಬಹುತೇಕ ಎಲ್ಲಾ ಬಸ್‌ಗಳ ಸಂಚಾರ ನಿಲುಗಡೆಯಾಗಿತ್ತು! ಆದರೆ ಕೆಲವೇ ದಿನಗಳಲ್ಲಿ ಮತ್ತೆ ಖಾಸಗಿ ಬಸ್‌ಗಳು ಎಂದಿನಂತೆಯೇ ಮುಖ್ಯರಸ್ತೆಗಳಲ್ಲಿ, ತಡೆರಹಿತವಾಗಿ ಸಂಚರಿಸತೊಡಗಿದವು.

ಗ್ರಾಮೀಣ ಪ್ರದೇಶಗಳ ಸಾರಿಗೆ ಸಂಸ್ಥೆಯ ಬಸ್‌ಗಳು ಒಂದೆರೆಡು ಗಂಟೆ ತಡವಾಗುವುದಕ್ಕೆ ರಸ್ತೆ ತಡೆ ಮಾಡುವ, ಬಸ್ ಸಿಬ್ಬಂದಿಯನ್ನು ಒಳಪಡಿಸಿ ನಿಲ್ದಾಣ ಮೇಲ್ವಿಚಾರಕರನ್ನೂ ಸೇರಿಸಿ ಹಲ್ಲೆ ಮಾಡುವ, ಸಂಸ್ಥೆಯ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವ ಜನತೆ ಖಾಸಗಿ ಬಸ್ ವಿರುದ್ಧ ಸೌಮ್ಯ ಭಾವನೆ ತಾಳಿರುವುದು ಗಮನಾರ್ಹ.

ಖಾಸಗಿ ಬಸ್‌ಗಳು ಈ ರೀತಿ ನೀಡಿರುವ ಪೈಪೋಟಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯಕ್ಕೂ ಹೊಡೆತ ನೀಡುತ್ತಿದೆ. ರೂ. 13 ತೆತ್ತು ಕೋಲಾರದಿಂದ ಬಂಗಾರಪೇಟೆಗೆ ಪ್ರಯಾಣಿಸುವವರು ಅಲ್ಲಿ ಎದುರಾಗುವ ಚಿಲ್ಲರೆ ತೊಂದರೆ, ಇತರೆ ಸಮಸ್ಯೆಗಳಿಗೆ ಬೇಸತ್ತು ರೂ. 10 ಪ್ರಯಾಣ ದರದ ಖಾಸಗಿ ಬಸ್‌ನ್ನು ಪ್ರಯಾಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.ಸಾರಿಗೆ ಇಲಾಖೆ ಈ ಕಡೆಗೆ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT