ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಡಿಕ್ಕಿ; ರಸ್ತೆ ದಾಟುತ್ತಿದ್ದ ಬಾಲಕ ಸಾವು

Last Updated 2 ಅಕ್ಟೋಬರ್ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ದಾಟುತ್ತಿದ್ದ ಬಾಲಕನಿಗೆ ಟ್ರಾವೆಲ್ಸ್ ಕಂಪೆನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಗರದ ತುಮಕೂರು ರಸ್ತೆಯ ಟಿ.ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

ಟಿ.ದಾಸರಹಳ್ಳಿ ಸಮೀಪದ ಕೆಂಪೇಗೌಡನಗರ ನಿವಾಸಿ ದಾನಪ್ಪ ಎಂಬುವರ ಮಗ ಸೋಮಶೇಖರ (5) ಮೃತಪಟ್ಟ ಬಾಲಕ.

ದಾನಪ್ಪ ಅವರು ಸೋಮಶೇಖರ ಮತ್ತು ಸಂಬಂಧಿಕರ ಮಗ ಪರಪ್ಪ ಎಂಬಾತನನ್ನು ಕರೆದುಕೊಂಡು ಟಿ.ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಇರುವ ವಿಜಯಾ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಹಣ ತೆಗೆದುಕೊಳ್ಳಲು ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಪರಪ್ಪ ಮತ್ತು ಸೋಮಶೇಖರನನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿದ ದಾನಪ್ಪ ಅವರು ಮತ್ತೊಂದು ಬದಿಯಲ್ಲಿದ್ದ ಎಟಿಎಂ ಘಟಕಕ್ಕೆ ಹೋದರು.

ಅವರು ಹಣ ತೆಗೆದುಕೊಂಡು ಹೊರ ಬಂದಿದ್ದನ್ನು ನೋಡಿದ ಸೋಮಶೇಖರ, ತಂದೆಯ ಬಳಿ ಹೋಗುವ ಸಲುವಾಗಿ ರಸ್ತೆ ದಾಟಲು ಮುಂದಾದ. ಅದೇ ವೇಳೆಗೆ ವೇಗವಾಗಿ ಬಂದ ಬಸ್ ಆತನಿಗೆ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಆತನ ಮೇಲೆ ಅದೇ ಬಸ್‌ನ ಹಿಂದಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಸ್‌ಆರ್‌ಎಸ್ ಟ್ರಾವೆಲ್ಸ್ ಕಂಪೆನಿಗೆ ಸೇರಿದ ಆ ಬಸ್ ಗುಲ್ಬರ್ಗದಿಂದ ಬೆಂಗಳೂರಿಗೆ ಬರುತ್ತಿತ್ತು.
 
ಘಟನೆ ನಂತರ ಬಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ಬಸ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲು ತೂರಾಟ:  ಬಾಲಕನ ಸಾವಿನಿಂದ ಉದ್ರಿಕ್ತರಾದ ಆತನ ಪೋಷಕರು ಹಾಗೂ ಸಂಬಂಧಿಕರು ಅಪಘಾತಕ್ಕೆ ಕಾರಣವಾದ ಬಸ್‌ನ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ತುಮಕೂರು ರಸ್ತೆಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.

ಹೆದ್ದಾರಿಯಲ್ಲಿ ನೆಲಮಂಗಲದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮಗನ ಸಾವಿನಿಂದ ದುಃಖತಪ್ತರಾದ ಪೋಷಕರು ಮತ್ತು ಸಂಬಂಧಿಕರು ಘಟನಾ ಸ್ಥಳದಲ್ಲಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT