ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣದಲ್ಲಿ ತಾಯಿಯನ್ನು ಬಿಟ್ಟ ಮಕ್ಕಳು!

Last Updated 14 ಏಪ್ರಿಲ್ 2013, 9:36 IST
ಅಕ್ಷರ ಗಾತ್ರ

ಇನ್ನಾ (ಪಡುಬಿದ್ರಿ): ಆಕೆ ಸುಮಾರು 80ವರ್ಷದ ವಯೋವೃದ್ಧೆ. ಐದು ಗಂಡುಮಕ್ಕಳು ಹಾಗೂ ಒಂದು ಹೆಣ್ಣು ಮಗಳ ತಾಯಿ. ಹೆತ್ತು, ಹೊತ್ತು, ಸಲಹಿದ ಈ ತಾಯಿಯನ್ನು ಮಕ್ಕಳು ಬೀದಿ ಪಾಲುಮಾಡಿದ್ದಾರೆ. ಇದೀಗ ಆಕೆ ಎರಡು ದಿನಗಳಿಂದ ಇನ್ನಾ ಗ್ರಾ.ಪಂ. ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿರುವ ಕರುಣಾಜನಕ ಕಥೆ ಇದು.

ಕಿನ್ನಿಗೋಳಿಯ ನಿವಾಸಿಯಾದ ಕುಸುಮಾ ಉಗ್ಗಪ್ಪ ಈಗ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ರಿಕ್ಷಾದಲ್ಲಿ ಅವರ ಒಬ್ಬ ಮಗ ರಿಕ್ಷಾದಲ್ಲಿ ಕರೆತಂದು ಇನ್ನಾ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ನಡೆದಾಡಲೂ ಕಷ್ಟಕರವಾದ ಕುಸುಮಾ ಬಸ್ ನಿಲ್ದಾಣದಲ್ಲಿಯೇ ವಾಸ್ತವ್ಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಪಾರ್ಶ್ವವಾಯು ಪೀಡಿತೆ ಮಗಳು ಮೀನಾಕ್ಷಿ ಮನೆಯಿಂದ ತಂದ ಅನ್ನಹಾರ ನೀಡುತ್ತಿದ್ದಾರೆ. ಇವರ ಈ ಸ್ಥಿತಿಯನ್ನು ಕಂಡ ಸ್ಥಳೀಯರು  ಪೊಲೀಸರ ಮೊರೆ ಹೋಗಿದ್ದಾರೆ.

ಗಂಡ ತೀರಿ ಹೋದ ಬಳಿಕ  ಕುಸುಮಾ ಇತ್ತೀಚಿಗೆ ಜಾರಿಬಿದ್ದು ಸೊಂಟದ ಮೂಳೆ ಮುರಿದು ಬಳಿಕ ನಡೆಯಲು ಕಷ್ಟವಾಗಿ ತೆವಳಿಕೊಂಡೇ ನಡೆದಾಡಬೇಕು. ಆ ಬಳಿಕ ಎಲ್ಲಾ ಮಕ್ಕಳು ಹೆತ್ತಬ್ಬೆಯನ್ನು ದೂರ ಮಾಡಲು ಪ್ರಾರಂಭಿಸಿ ತಮ್ಮ ತಮ್ಮಳಗೆ ಸಂಘರ್ಷ ಮಾಡಿಕೊಂಡಿದ್ದಾರೆ. ಸುಮಾರು 3ತಿಂಗಳ ಹಿಂದೆ ರಿಕ್ಷಾವೊಂದರಲ್ಲಿ ಕುಸುಮಾರನ್ನು ಇನ್ನಾಕ್ಕೆ ಕರೆದು ತಂದು ಮಗಳ ಮನೆ ಸಮೀಪ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಆದರೆ ಮನೆಯಲ್ಲಿ ಕಷ್ಟಕರ ಜೀವನ ಇದ್ದ ಕಾರಣ ಕುಸುಮಾರ ಮಗಳು ತಾಯಿಯನ್ನು ಸಾಕಲಾರದೆ ಮರಳಿ ಗಂಡುಮಕ್ಕಳ ಬಳಿಗೆ ಕಳುಹಿಸಿದ್ದರು.

ಮಕ್ಕಳ ಪೈಕಿ ಹಿರಿಯ ಮಗ ಜನಾರ್ದನ್ ಕಿನ್ನಿಗೋಳಿ ಸಮೀಪದ ಕೆರೆಕಾಡು ಬಳಿ ವಾಸವಾಗಿದ್ದಾರೆ. ಉಳಿದ ಮಕ್ಕಳ ಪೈಕಿ ನಾರಾಯಣ ಎಂಬವರು ಕಿನ್ನಿಗೋಳಿಯಲ್ಲಿ, ಸದಾಶಿವ ಎಂಬವರು ಸುರತ್ಕಲ್ ಇಡ್ಯಾ ಬಳಿ, ವಿಶ್ವನಾಥ್ ಎಂಬವರು ಕಾಟಿಪಳ್ಳ, ತಾರನಾಥ್ ಪೂನಾದಲ್ಲಿದ್ದಾರೆ. ಪಡುಬಿದ್ರಿ ಪೊಲೀಸರು ಗಂಡು ಮಕ್ಕಳ ಮೊಬೈಲ್‌ಗೆ ಸಂಪರ್ಕಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ.

ನನ್ನ ಹಣೆಬರಹ: ಕುಸುಮಾರೊಂದಿಗೆ ಪತ್ರಿಕೆ ಮಾತನಾಡಿಸಿದಾಗ `ನನಗೆ ಐದು ಗಂಡು ಮಕ್ಕಳು ಇದ್ದಾರೆ. ಆದರೆ ಯಾರೂ ನನ್ನನ್ನು ನೋಡತ್ತಿಲ್ಲ. ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ನನಗೆ ಔಷಧಿ ತೆಗೆದುಕೊಳ್ಳಬೇಕು. ಗಂಡು ಮಕ್ಕಳು ಇದ್ದರೂ ನನ್ನನ್ನು ಅನಾಥೆಯನ್ನಾಗಿ ಮಾಡಿದ್ದಾರೆ. ಏನು ಮಾಡಲಿ ನನ್ನ ಹಣೆ ಬರಹ ಹೀಗಿದೆ. ಕಣ್ಣು ಸರಿಯಾಗಿ ಕಾಣುವುದಿಲ್ಲ. ನಡೆದಾಡಲೂ ಆಗುವುದಿಲ್ಲ. ನನ್ನ ಸೊಂಟದ ಮೂಳೆ ಮುರಿತವಾಗಿದೆ' ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT