ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಪಾಸ್ ಹೆಚ್ಚುವರಿ ಮೊತ್ತ ವಾಪಸ್ ಆದೇಶ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಪ್ರಜಾವಾಣಿ ಫಲಶ್ರುತಿ
ಬೆಂಗಳೂರು: ಕಳೆದ ವರ್ಷದ ಆಗಸ್ಟ್/ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯು ಹೆಚ್ಚಿಸಿದ್ದ ರೂ 200 ಹೆಚ್ಚುವರಿ ಮೊತ್ತವನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಆಯಾ ವಿಭಾಗಗಳಿಗೆ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರ ಜ.21ರಂದು ಆದೇಶ ಹೊರಡಿಸಿದ್ದು, (ಆದೇಶ ಸಂಖ್ಯೆ ಸಾರಿಇ 130 ಸಾಸಂಇ 2010, 21-01-2011, ಯೂನಿಕ್ ಸಂಖ್ಯೆ 02/2011) ನಾಲ್ಕೂ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಿ ಹೆಚ್ಚುವರಿ ಅನುದಾನವನ್ನು ನಗದಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: 928 ವೆಚ್ಚ-12/2010, ದಿನಾಂಕ 12-01-2011ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಮಚಂದ್ರ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ನಾಲ್ಕೂ ಸಾರಿಗೆ ಸಂಸ್ಥೆಯ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ವ್ಯಾಪ್ತಿಯಲ್ಲಿ ಪಾಸುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೊತ್ತ ವಾಪಸ್ ನೀಡಲು ರೂ 9 ಕೋಟಿಯನ್ನು ಬಿಡುಗಡೆ ಮಾಡಿದೆ.

ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದರೂ ಹೆಚ್ಚುವರಿ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬ ಅಂಶವುಳ್ಳ ವಿಶೇಷ ವರದಿಯು ‘ಪ್ರಜಾವಾಣಿ’ಯ ಜ.11ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದಕ್ಕೆ ಪೂರಕವಾಗಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಸಂಘಟನೆಗಳು ಹೋರಾಟಗಳನ್ನೂ ಸಂಘಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT