ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್, ರೈಲು ನಿಲ್ದಾಣದಲ್ಲಿ ಜನದಟ್ಟಣೆ

ಗೌರಿ-ಗಣೇಶ ಹಬ್ಬದ ಸಾಲು ರಜೆ, ಸಂಚಾರ ಅಸ್ತವ್ಯಸ್ತ
Last Updated 6 ಸೆಪ್ಟೆಂಬರ್ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಶುಕ್ರವಾರ ರಾತ್ರಿ ತಮ್ಮ ಊರುಗಳಿಗೆ ಹೋಗಲು ಮೆಜೆಸ್ಟಿಕ್ ಕಡೆಗೆ ಬಂದಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು.

ಸಾಲು ಸಾಲು ರಜೆಗಳಿರುವ ಕಾರಣದಿಂದ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಬೆಳಿಗ್ಗೆಯಿಂದಲೇ ಮೆಜೆಸ್ಟಿಕ್ ಬಸ್ ಮತ್ತು ರೈಲು ನಿಲ್ದಾಣಕ್ಕೆ ಬರುತ್ತಿದ್ದರು. ಸಂಜೆ ವೇಳೆಗೆ ಸಾಫ್ಟ್‌ವೇರ್ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ನಿಲ್ದಾಣದೆಡೆಗೆ ದೌಡಾಯಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆ.ಜಿ.ರಸ್ತೆ, ಗೂಡ್‌ಶೆಡ್ ರಸ್ತೆ, ಓಕಳಿಪುರ ರಸ್ತೆ, ಖೋಡೆ ವೃತ್ತ, ಆನಂದರಾವ್ ವೃತ್ತ, ನೃಪತುಂಗ ರಸ್ತೆ, ರಾಜೀವ್ ಗಾಂಧಿ ವೃತ್ತ, ರೇಸ್‌ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ, ಕೆ.ಎಚ್.ರಸ್ತೆ, ಎಂ.ಜಿ. ರಸ್ತೆ ಮುಂತಾದೆಡೆ  ಸಂಚಾರ ದಟ್ಟಣೆ ತೀವ್ರವಾಗಿತ್ತು.

ವಾಹನ ಸವಾರರು ಮುಂದೆಯೂ ಚಲಿಸಲಾಗದ, ಹಿಂದೆಯೂ ಹೋಗಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಟ್ರಾಫಿಕ್ ಜಾಮ್‌ನಿಂದ ಬೇಸತ್ತ ವಾಹನ ಸವಾರರು ಸಂಚಾರ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಪೊಲೀಸರನ್ನು ಶಪಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಸಂಚಾರ ಸಮಸ್ಯೆ ಆಗದಂತೆ ತಡೆಯಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇನ್ನೂ ಜೆ.ಸಿ.ರಸ್ತೆ, ಮೈಸೂರು ರಸ್ತೆ ಮತ್ತು ಸಿಟಿ ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ರೈಲು ಹಾಗೂ ಬಸ್‌ಗಳಿಗೆ ಮುಂಗಡವಾಗಿ ಟಿಕೆಟ್ ಖರೀದಿಸಿದ್ದ ಪ್ರಯಾಣಿಕರು ನಿಗದಿತ ವೇಳೆಗೆ ಬಸ್- ರೈಲು ನಿಲ್ದಾಣ ತಲುಪಲಾಗಲಿಲ್ಲ.

ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿದ್ದ ಪರಿಣಾಮ ಕೆಲವರು ಪ್ರಯಾಣ ಮೊಟಕುಗೊಳಿಸಿ ಮನೆಗೆ ಹಿಂತಿರುಗುವುದು ಅನಿವಾರ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT