ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಾಗಿ ವಿದ್ಯಾರ್ಥಿಗಳ ರಸ್ತೆ ತಡೆ

Last Updated 7 ಜನವರಿ 2014, 7:12 IST
ಅಕ್ಷರ ಗಾತ್ರ

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಅಂತ­ರ್‌ ­ರಾಜ್ಯ ಬಸ್‌ಗಳಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಬಸ್‌ಪಾಸ್‌ಗಳಿಗೆ ಮಾನ್ಯತೆ ನೀಡಲಾಗುತ್ತಿಲ್ಲ ಮತ್ತು ವರ್ಷಗಳಿಂದ ಬಾಕಿಯಿರುವ ಸಾರಿಗೆ ಸಮಸ್ಯೆ ಬಗೆಹರಿಸಲಾಗುತ್ತಿಲ್ಲ ಎಂದು ಆರೋಪಿಸಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಬಾಗೇಪಲ್ಲಿ ಸಮೀಪದ ಚೆಂಡೂರು ಕ್ರಾಸ್‌ ಬಳಿ ಸೋಮವಾರ ದಿಢೀರ್‌ ರಸ್ತೆ ತಡೆ ನಡೆಸಿದರು. ಕೆಲ ನಿಮಿಷಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ­ಗೊಂಡಿತ್ತು.

ಬಸ್‌ಗಳು ಸೇರಿದಂತೆ ಇತರ ವಾಹನಗಳ ಸಂಚಾರವನ್ನು ತಡೆದ ಪ್ರತಿಭಟನಾಕಾರರು, ‘ಅಂತರರಾಜ್ಯ ಬಸ್‌ಗಳಲ್ಲಿ ರಿಯಾಯಿತಿ ಬಸ್‌­ಪಾಸ್‌ಗಳಿಗೆ ಮಾನ್ಯತೆಯಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಬಸ್‌ಗಳಲ್ಲಿ ಹತ್ತಿಸಿಕೊಳ್ಳಲಾಗುತ್ತಿಲ್ಲ. ಒಂದು ವೇಳೆ ಬಸ್‌ ಹತ್ತಿದರೂ ಟಿಕೆಟ್‌ ಖರೀದಿ­ಸುವಂತೆ ಸೂಚಿಸಲಾಗುತ್ತದೆ. ಬಸ್‌­ಪಾಸ್‌ ಇದ್ದರೂ ಅದು ನಿಷ್ಪ್ರ­ಯೋಜಕ­ವಾಗಿದೆ. ಬಸ್‌ಪಾಸ್‌ ಇರುವಾಗ ಹಣ ನೀಡಿ ಟಿಕೆಟ್‌ ಯಾಕೆ ಪಡೆಯಬೇಕು’ ಎಂದು ಪ್ರಶ್ನಿಸಿದರು.

‘ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರಕ್ಕೆ ಶಾಲಾ–ಕಾಲೇಜಿಗೆ ಹೋಗುತ್ತಾರೆ. ಬಸ್‌ಗಳು ಕಡಿಮೆ­ಯಿರುವ ಕಾರಣ ಸಿಗುವ ಸ್ಥಳಾವ­ಕಾಶದಲ್ಲೇ ನುಸುಳಿಕೊಂಡು ಬಸ್‌­ಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಕೆಲ ಕಂಡಕ್ಟರ್‌ಗಳು ಅಂತರ್‌ರಾಜ್ಯ ಬಸ್‌ ಎಂಬ ನೆಪವೊಡ್ಡಿ ನಮ್ಮನ್ನು ಬಸ್‌ನಿಂದ ಕೆಳಗಿಳಿಸುತ್ತಾರೆ ಇಲ್ಲವೇ ಹಣ ನೀಡಿ ಟಿಕೆಟ್‌ ಪಡೆಯುವಂತೆ ಹೇಳುತ್ತಾರೆ. ಇದರಿಂದ ನಮಗೆ ತೊಂದರೆಯಾಗಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಬಸ್‌ಗಳು ಗ್ರಾಮೀಣ ಪ್ರದೇಶದ ಜನರನ್ನು ಹತ್ತಿಸಿಕೊಳ್ಳುವುದೇ ಇಲ್ಲ. ವೇಗವಾಗಿ ಸಂಚರಿಸುವ ಬಸ್‌ಗಳು ಗ್ರಾಮೀಣ ಪ್ರದೇಶದಲ್ಲಿ ನಿಲುಗಡೆ ಮಾಡುವುದೇ ಇಲ್ಲ. ತುರ್ತು ಕೆಲಸಗಳಿದ್ದರೂ ಅಥವಾ ಆಸ್ಪತ್ರೆಗೆ ಹೋಗಬೇಕಿದ್ದರೂ ನಮಗೆ ಸಕಾಲಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಘಟನಾ ಸ್ಥಳಕ್ಕೆ ಬಂದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿಯವರು ಪ್ರತಿಭಟನಾಕಾರರನ್ನು ಸಮಾಧಾನ­ಪಡಿಸಿದರು. ಇನ್ನೊಂದು ವಾರದೊಳಗೆ ಸಾರಿಗೆ ಸೌಕರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ­ಯನ್ನು ಪರಿಹರಿಸಲು ಕ್ರಮ ಕೈಗೊ­ಳ್ಳುತ್ತೇನೆ ಎಂದು ಭರವಸೆ ನೀಡಿದರು. 

ಎಸ್‌ಎಫ್ಐ ಮುಖಂಡ ರಾಜಶೇಖರ್‌, ವಿದ್ಯಾರ್ಥಿ­ಗಳು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು‌
ಬಾಗೇಪಲ್ಲಿ (ಚಿಕ್ಕಬಳ್ಳಾಪುರ):
ಚೆಂಡೂರು ಕ್ರಾಸ್ ಬಳಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿ ಚೆಂಡೂರು, ಬೋಗೇನಹಳ್ಳಿ, ತೆಟ್ಟಹಳ್ಳಿ, ಮಿಂಚನಹಳ್ಳಿ, ಕೋರೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT