ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣ ಅವ್ಯವಸ್ಥೆ: ಸಂಸದರ ಭೇಟಿ

Last Updated 13 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಕಂಡು ಸಂಸದ ಜನಾರ್ದನಸ್ವಾಮಿ ದಂಗಾದರು.ಸೋಮವಾರ ಅಧಿಕಾರಿಗಳೊಂದಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರಿಂದ ಕುಂದು-ಕೊರತೆಗಳನ್ನು ಆಲಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಮರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಟಕಶಿವಾರೆಡ್ಡಿ, ಪೌರಾಯುಕ್ತ ಎಸ್. ವಿಜಯಕುಮಾರ್, ಸಂಚಾರಿ ಪೊಲೀಸ್ ಉಮೇಶ್ ನಾಯ್ಕ ಸಂಸದರ ಜತೆಗಿದ್ದರು.
ನಿಲ್ದಾಣದಲ್ಲಿನ ಸಿಸಿಟಿವಿ, ಟಿವಿ, ಗಡಿಯಾರಗಳು ನಿಂತು ಹೋಗಿವೆ.

ಸುತ್ತ-ಮುತ್ತ ಕಸ ಬಿದ್ದು ಸ್ವಚ್ಛತೆಯೇ ಇಲ್ಲ. ಕೊಳಚೆ ಪ್ರದೇಶವಾಗಿದೆ. ನಿಮ್ಮ ಮನೆಯನ್ನು ಹೀಗೆಯೇ ಇಟ್ಟುಕೊಳ್ಳುತ್ತಿರಾ?. ಇಲ್ಲಿನ ಅವ್ಯವಸ್ಥೆ ಗಮನಿಸಿದರೆ ಸಾರ್ವಜನಿಕರ ಸಮಸ್ಯೆಗೆ ನೀವು ಸ್ಪಂದಿಸುತ್ತಿಲ್ಲ ಎನ್ನುವುದು ಸಾರುತ್ತದೆ~ ಎಂದು ಡಿಪೋ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.

ರಾತ್ರಿ ಹೋಟೆಲ್, ಕ್ಯಾಂಟಿನ್ ಯಾರು ಮುಚ್ಚಲು ನಿಮಗೆ ಹೇಳಿದ್ದು ಎಂದು ಸಂಸದರು ಪ್ರಶ್ನಿಸಿದರು. ರಾತ್ರಿ 11ಗಂಟೆಗೆ ನಿಲ್ದಾಣಕ್ಕೆ ಪೊಲೀಸರು ಆಗಮಿಸಿ ಮುಚ್ಚಿಸುತ್ತಿದ್ದಾರೆ ಎಂದು ವ್ಯವಸ್ಥಾಪಕರು ಉತ್ತರಿಸಿದರು.
ರಾತ್ರಿ ಹೋಟೆಲ್ ಮುಚ್ಚುವಂತೆ ಯಾರು ಆದೇಶ ಮಾಡಿದ್ದಾರೆ ಹೇಳಿ ಎಂದು ಸ್ಥಳದಲ್ಲೇ ಇದ್ದ ಕೋಟೆ ಠಾಣೆಯ ಎಸ್‌ಐ ಅವರನ್ನು ಕೇಳಿದರು. ಇದಕ್ಕೆ ಅವರು ಉತ್ತರ ನೀಡಲಿಲ್ಲ. ಹಿರಿಯ ಅಧಿಕಾರಿಗಳ ಸಲಹೆ, ಆದೇಶ ಇಲ್ಲದೆ ಏಕೆ ಅಂಗಡಿಗಳನ್ನು ಮುಚ್ಚಿಸಿದಿರಿ ಎಂದರು.

ರಾತ್ರಿ ಹೋಟೆಲ್ ಮುಚ್ಚುವುದರಿಂದ ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಕುಡಿಯುವ ನೀರು, ಆಹಾರ, ತಿಂಡಿಗೆ ಸಮಸ್ಯೆಯಾಗುತ್ತದೆ. ರಾತ್ರಿ ಅಂಗಡಿಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಿಲ್ದಾಣದಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೂ ಹಣ ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಂಸದರು, ಶೌಚಾಲಯಕ್ಕೆ ಹಣ ಕೇಳುವುದು ತಪ್ಪು. ಈ ಬಗ್ಗೆ ಹಣ ಪಡೆದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ನಿಲ್ದಾಣದಲ್ಲಿನ ಅಂಗಡಿಗಳ ಬಾಡಿಗೆ ಹಣದಿಂದ ಶೌಚಾಲಯ ನಿರ್ವಹಣೆ ಮಾಡಬೇಕು. ಶೌಚಾಲಯಕ್ಕೆ ದುಡ್ಡು ಕೊಟ್ಟು ಹೋಗುವುದೇ ಅಮಾನವೀಯ. ಉಚಿತ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಬಯಲಲ್ಲಿ ಶೌಚ ಮಾಡುವುದು ಸರಿಯಲ್ಲ. ಗಾರ್ಡ್ ಒಬ್ಬರನ್ನು ನೇಮಿಸಿ ಹೀಗೇನಾದರೂ ಕಂಡು ಬಂದರೆ ದಂಡ ವಿಧಿಸುವಂತೆ ಸೂಚಿಸಿದರು.

ಬಸ್‌ನಿಲ್ದಾಣದಿಂದ 500 ಮೀಟರ್ ಒಳಗೆ ಖಾಸಗಿ ಬಸ್‌ಗಳು ನ್ಲ್ಲಿಲಿಸಬಾರದು ಎನ್ನುವ ನಿಯಮವಿದೆ. ಆದರೂ ಕೆಲವು ಬಸ್‌ಗಳು ನಿಲ್ದಾಣ ಎದುರು ನಿಂತಿರುತ್ತವೆ. ಅಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಜನಾರ್ದನಸ್ವಾಮಿ, ಬಸ್‌ನಿಲ್ದಾಣದ ಅಭಿವೃದ್ಧಿಗೆ ಸಂಸದರ ನಿಧಿಯಿಂದ ರೂ5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.ಗ್ರಾಮೀಣ ಪ್ರದೇಶಗಳ ಬಸ್‌ಗಳನ್ನು ನಿಲ್ಲಿಸಲು ಬಸ್‌ನಿಲ್ದಾಣದ ಉಳಿದಿರುವ ಒಂದು ಎಕರೆ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕೆಎಸ್‌ಆರ್‌ಟಿಸಿ ಡಿಪೋ ಬಳಿ ಸಂಸ್ಥೆಯ 9 ಎಕರೆ ಜಾಗವಿದೆ.

ಈಗಿರುವ ಬಸ್‌ನಿಲ್ದಾಣವನ್ನು ಆ ಸ್ಥಳಕ್ಕೆ ಸ್ಥಳಾಂತರಿಸುವ ಚಿಂತನೆ ಇದೆ. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜತೆ ಚರ್ಚಿಸಲಾಗುವುದು ಎಂದರು.ನಿಲ್ದಾಣದಲ್ಲಿರುವ ಹಾಲ್ ಬಳಸಿಲ್ಲ. ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಕುರ್ಚಿಗಳನ್ನು ಹಾಕುವಂತೆ ಸೂಚಿಸಲಾಗಿದೆ. ನಗರದಲ್ಲಿ ಮತ್ತೆ `ಸಿಟಿ ಬಸ್~ಗಳ ಸಂಚಾರ ಆರಂಭಿಸುವ ಕುರಿತು ಸಂಬಂಧಿಸಿದವರೆ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT