ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣ ಅವ್ಯವಸ್ಥೆ ಸರಿಪಡಿಸಲು ಆಗ್ರಹ

Last Updated 1 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಮುಂಡರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬಿಎಸ್‌ಪಿ ಕಾರ್ಯಕರ್ತರು ಶುಕ್ರವಾರ ಇಲ್ಲಿಯ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಸ್ಥಳೀಯ ರಾಜ್ಯ ರಸ್ತೆ ಸಾರಿಗೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 44 ಬಸ್ಸುಗಳು ಸಂಪೂರ್ಣವಾಗಿ ಹಾಳಾಗಿವೆ. ಅವುಗಳನ್ನು ಬದಲಿಸಿ ಘಟಕಕ್ಕೆ ಹೊಸ ಬಸ್ಸುಗಳನ್ನು ನೀಡಬೇಕು. ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ಕೇಂದ್ರ ಬಸ್ ನಿಲ್ದಾಣದ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್‌ನಿಂದ ಗಲೀಜು ನೀರು ಹೊರಹೋಗಲು ಸೂಕ್ತ ಚರಂಡಿ ಇಲ್ಲದೆ  ನಿಲ್ದಾಣದ ಆವರಣದಲ್ಲಿ ನಿಲ್ಲುತ್ತದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ತಕ್ಷಣ ಗಲೀಜು ನೀರು ಹರಿದು ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಗಮನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇಲ್ಲಿಯ ಸಾರಿಗೆ ಘಟಕದಲ್ಲಿರುವ ವರ್ಕಶಾಪ್‌ನಲ್ಲಿ ಹಲವು ಸಮಸ್ಯೆಗಳಿವೆ. ಬಸ್ ದುರಸ್ತಿಗೊಳಿಸಲು ಸಿಬ್ಬಂದಿ ಪರದಾಡುವಂತಾಗಿದೆ. ಆದ್ದರಿಂದ ವರ್ಕಶಾಪ್‌ಗೆ ತಕ್ಷಣ ಕಾಯಕಲ್ಪ ನೀಡಿ ಅದನ್ನು ನವೀಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಕ್ಕರೆ ಕಾರ್ಖಾನೆ, ಶಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆ, ಕಪ್ಪತಗುಡ್ಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂಡ್‌ಮಿಲ್ ಮೊದಲಾದವುಗಳಿಂದ ಮುಂಡರಗಿ ಪಟ್ಟಣವು ಸಂಪೂರ್ಣವಾಗಿ ವಿಸ್ತಾರಗೊಳ್ಳುತ್ತಿದ್ದು ಅದಕ್ಕೆ ಅನುಗುಣವಾಗಿ ಘಟಕದಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಪಟ್ಟಣದಿಂದ ಧರ್ಮಸ್ಥಳ, ಮಂತ್ರಾಲಯ, ಪುಣೆ, ವಿಜಾಪುರ, ಗೋವಾ, ಮಂಗಳೂರು ಮೊದಲಾದ ಪಟ್ಟಣಗಳಿಗೆ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರತಿಭಟನಾಕಾರರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನವಲಗುಂದ, ಖಜಾಂಚಿ ಟಿ.ಎಚ್.ಬಂಡಿ, ಕಾರ್ಯದರ್ಶಿ ಸುರೇಶ ಡಂಬಳ, ದೇವೆಂದ್ರಪ್ಪ ಕಟ್ಟಿಮನಿ, ಡಿ.ಎಸ್.ಪೂಜಾರ, ಪ್ರಕಾಶ ಪೂಜಾರ, ಕೋಟೇಶ ಬೇವಿನಕಟ್ಟಿ, ಅಬ್ದುಲ್ ಖಾದರ್, ಇಮಾಮಸಾಬ್ ನಾಗರಳ್ಳಿ, ಕೆ.ಎಚ್.ಮಕಾಂದಾರ, ಬಸ್ಸಪ್ಪ ವಡ್ಡರ, ಶ್ರಿಶೈಲಪ್ಪ ಬೆಳ್ಳಿಕೊಪ್ಪ, ಸುರೇಶ ಹೂಗಾರ, ಮಲ್ಲೇಶ ಕಕ್ಕೂರ, ಪ್ರಕಾಶ ಭಜಂತ್ರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT