ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹರೇನ್‌ನಲ್ಲಿ ಚಳವಳಿ ತೀವ್ರ: 5 ಬಲಿ

Last Updated 18 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಮನಾಮ (ಎಪಿ):  ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಪ್ರತಿಭಟನಾಕಾರರ ಮೇಲೆ ಸೇನಾಪಡೆ ಗುರುವಾರ ನಡೆಸಿದ ಮಾರಣಾಂತಿಕ ದಾಳಿಗೆ ಬಲಿಯಾದವರ ಅಂತ್ಯಕ್ರಿಯೆ ಶುಕ್ರವಾರ ನಡೆಯುವ ಸಂದರ್ಭದಲ್ಲಿ ಆಡಳಿತಾರೂಢ ರಾಜಪ್ರಭುತ್ವದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ, ರಾಜಧಾನಿಗೆ ಸೇನಾ ಟ್ಯಾಂಕುಗಳನ್ನು ಕರೆಸಲಾಗಿದೆ.

ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಸುನ್ನಿ ಆಡಳಿತವು ಶಿಯಾ ಪಂಗಡದ ವಿರುದ್ಧ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ದೊರೆ ಮತ್ತು ಅವರ ಆಪ್ತ ವಲಯದ ಮೇಲೆ ಕಿಡಿ ಕಾರಿದ್ದಾರೆ.

ರಾಜಧಾನಿಯಲ್ಲಿದ್ದ ಪ್ರತಿಭಟನಾಕಾರರ ಬಿಡಾರದ ಮೇಲೆ ಗುರುವಾರ ರಾತ್ರಿ ನಡೆದ ಭೀಕರ ದಾಳಿಗಳಲ್ಲಿ ಕನಿಷ್ಠ ಐದು ಜನರು ಮೃತರಾಗಿದ್ದು 230ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಈವರೆಗೆ ದೊರೆಯ ವಿರುದ್ಧ ಮಾತ್ರ ನಡೆಯುತ್ತಿದ್ದ ಪ್ರತಿಭಟನೆ ಈಗ ಇಡೀ ಆಡಳಿತಾರೂಢ ವ್ಯವಸ್ಥೆಯತ್ತಲೇ ತಿರುಗಿದೆ.

‘ಸರ್ಕಾರದ ಮೇಲೆ ನಾನಿಟ್ಟಿದ್ದ ವಿಶ್ವಾಸ ಈ ಭೀಕರ ದಾಳಿಯಿಂದ ನುಚ್ಚುನೂರಾಗಿದೆ. ಈವರೆಗೆ ಪ್ರಧಾನಿ ಕೆಳಗಿಳಿಯಬೇಕೆಂದು ನಾವು ಆಗ್ರಹಿಸುತ್ತಿದ್ದೆವು. ಆದರೆ ಈಗ ಇಡೀ ಆಡಳಿತಾರೂಢ ಕುಟುಂಬವೇ ಕೆಳಗಿಳಿಯಬೇಕು ಎಂಬುದು ನಮ್ಮ ಬಲವಾದ ಬೇಡಿಕೆ’ ಎಂದು ದಾಳಿಯಲ್ಲಿ 23 ವರ್ಷದ ಸಹೋದರ ಮಹಮೂದ್‌ನನ್ನು ಕಳೆದುಕೊಂಡು ದುಃಖಿಸುತ್ತಿದ್ದ ಅಹ್ಮದ್ ಮಕ್ಕಿ ಅಬು ಟಕಿ ಹೇಳಿದ್ದಾರೆ.

ಗ್ರಾಮವೊಂದರ ಮಸೀದಿ ಬಳಿ ನಡೆದ ಮೂವರು ಮೃತ ಪ್ರತಿಭಟನಾಕಾರರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ದೊರೆ ಹಮೀದ್ ಬಿನ್ ಇಸಾ ಅಲ್ ಖಲೀಫ ಮತ್ತು ಇಡೀ ಸುನ್ನಿ ಆಡಳಿತವನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂಬ ಬೇಡಿಕೆಗಳು ಈ ಸಂದರ್ಭದಲ್ಲಿ ಬಲವಾಗಿ ಕೇಳಿಬಂದವು.
‘ಈವರೆಗೆ ಶಾಂತಿಯುತವಾಗಿದ್ದ ನಮ್ಮ ಪ್ರತಿಭಟನೆ ಇನ್ನು ಮುಂದೆ ತೀವ್ರ ಸ್ವರೂಪ ಪಡೆದುಕೊಳ್ಳಲಿವೆ’ ಎಂದು ಸರ್ಕಾರಿ ನೌಕರ 40 ವರ್ಷದ ಮೊಹಮದ್ ಅಲಿ ಎಚ್ಚರಿಸಿದರು.

ಕರ್ಜ್‌ಕಾನ್ ಎಂಬ ಗ್ರಾಮದಲ್ಲಿ ನಡೆದ ಮತ್ತೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷಗಳ ಪ್ರಮುಖರು, ಹೋರಾಟ ತೀವ್ರಗೊಳಿಸುವಂತೆ ಆದರೆ ಪ್ರತೀಕಾರ ಕ್ರಮಕ್ಕೆ ಮುಂದಾಗದಂತೆ ಕರೆ ನೀಡಿದ್ದಾರೆ.

‘ಅವರ ಬಳಿ ಶಸ್ತ್ರಾಸ್ತ್ರಗಳಿವೆ. ಅವರು ನಮ್ಮನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಾರೆ ಎಂಬುದು ನಮಗೆ ತಿಳಿದಿದೆ’ ಎಂದು ಶಿಯಾಗಳಿಗೆ ಸೇರಿದ ಬೃಹತ್ ವಿರೋಧ ಪಕ್ಷವಾದ ‘ಅಲ್ ವೆಫಕ್’ನ ಷೇಕ್ ಅಲಿ ಸಲ್ಮಾನ್ ಸರ್ಕಾರವನ್ನು ಉದ್ದೇಶಿಸಿ ಹೇಳಿದ್ದಾರೆ. 40 ಸದಸ್ಯ ಬಲದ ಸಂಸತ್ತಿನಲ್ಲಿ ಪಕ್ಷದ 18 ಸದಸ್ಯರು ರಾಜಕೀಯ ಬಿಕ್ಕಟ್ಟು ತೀವ್ರಗೊಳಿಸುವ ಸಲುವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ದಾಳಿಯ ಸಮರ್ಥನೆ: ‘ಪ್ರತಿಭಟನಾಕಾರರು ಪಂಥಾಭಿಮಾನದಿಂದ ದೇಶವನ್ನು ವಿಭಜಿಸಲು ಯತ್ನಿಸಿದ್ದರಿಂದ ಇಂತಹ ಕ್ರಮ ಅನಿವಾರ್ಯವಾಗಿತ್ತು’ ಎಂದು ವಿದೇಶಾಂಗ ಸಚಿವ ಖಾಲಿದ್ ಅಲ್ ಖಲೀಫ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಶ್ವೇತಭವನ ಅತೃಪ್ತಿ: ಬಹರೇನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಸ್ಥಿತಿಯ ಬಗ್ಗೆ ಶ್ವೇತಭವನ ಗಂಭೀರ ಅತೃಪ್ತಿ ವ್ಯಕ್ತಪಡಿಸಿದೆ.ಪುಟ್ಟ ದ್ವೀಪ ರಾಷ್ಟ್ರವಾದ ಬಹರೇನ್, ಅಮೆರಿಕದ ನೌಕಾಪಡೆಯ ಐದನೇ ದಳದ ವಾಸಸ್ಥಳವಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಇರಾನ್‌ನ ಸೇನಾ ಆಕಾಂಕ್ಷೆಗಳನ್ನು ಮಟ್ಟ ಹಾಕುವ ಪೆಂಟಗನ್‌ನ ಪ್ರಯತ್ನಗಳಿಗೆ ಪೂರಕವಾದ ಕೇಂದ್ರ ಸ್ಥಾನವಾಗಿದೆ.

ದೇಶದ ಜನಸಂಖ್ಯೆಯ ಶೇ 70ರಷ್ಟಿರುವ ಷಿಯಾ ಪಂಗಡವನ್ನು ಸರಿದೂಗಿಸಲು ಅನುವಾಗುವಂತೆ ಪ್ರಾಂತ್ಯದ ಇತರ ರಾಷ್ಟ್ರಗಳ ಸುನ್ನಿ ನಾಗರಿಕರಿಗೆ ಉದ್ಯೋಗ ಮತ್ತು ಪೌರತ್ವ ನೀಡಲು ಆಡಳಿತ ಮುಂದಾಗಿರುವುದರಿಂದ ರಾಜಧಾನಿ ಹಾಗೂ ಇತರ ಸ್ಥಳಗಳಲ್ಲಿ ವಿವಿಧ ರಾಷ್ಟ್ರೀಯರು ಬೀಡು ಬಿಟ್ಟಿದ್ದಾರೆ. ಹೀಗಾಗಿ ಈ ಪ್ರದೇಶಗಳಲ್ಲಿ ಸೇನೆ ಮತ್ತು ಪೊಲೀಸ್ ಕಣ್ಗಾವಲು ಹಾಕಲಾಗಿದೆ.

 ಲಿಬಿಯಾ: ಹಿಂಸೆಗೆ ತಿರುಗಿದ ಪ್ರತಿಭಟನೆ
 ಕೈರೊ/ ಟ್ರಿಪೋಲಿ (ಡಿಪಿಎ):
ಲಿಬಿಯಾದಾದ್ಯಂತ ಪ್ರತಿಭಟನಾಕಾರರು- ಭದ್ರತಾ ಪಡೆಗಳ ನಡುವೆ ಗುರುವಾರ ನಡೆದ ವ್ಯಾಪಕ ಹಿಂಸಾಚಾರದಲ್ಲಿ ಸುಮಾರು 45 ಜನ ಸಾವಿಗೀಡಾಗಿದ್ದಾರೆ. ಇದೊಂದು ಜನರ ‘ಕ್ರೋಧದ ದಿನ’ ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, ತೀವ್ರ ಪ್ರತಿಭಟನೆಗೆ ಕರೆ ನೀಡಿವೆ.

ಇದರಿಂದ ಮುಅಮ್ಮರ್ ಗಡಾಫಿ ಅವರ 41 ವರ್ಷಗಳ ಆಡಳಿತದ ವಿರುದ್ಧ ನಡೆಯುತ್ತಿರುವ ಘರ್ಷಣೆಗಳು ಹಿಂಸಾರೂಪ ಪಡೆಯಬಹುದು ಎಂಬ ಆತಂಕ ತಲೆದೋರಿದೆ. ಗಡಾಫಿ ಅವರ ‘ಗ್ರೀನ್ ಬುಕ್’ನ ಗೌರವಾರ್ಥವಾಗಿ ಪೂರ್ವದ ಕರಾವಳಿ ಪಟ್ಟಣ ತೊಬ್ರುಕ್‌ನಲ್ಲಿ ನಿರ್ಮಿಸಿದ್ದ ಸ್ಮಾರಕವನ್ನು ನೂರಾರು ಪ್ರತಿಭಟನಾಕಾರರು ನಾಶಪಡಿಸಿದ್ದಾರೆ. 1975ರಲ್ಲಿ ಮೊದಲ ಬಾರಿ ಪ್ರಕಟವಾದ ‘ಗ್ರೀನ್ ಬುಕ್’ನಲ್ಲಿ ಜನಪ್ರಿಯ ಸಮಿತಿಗಳ ಮೂಲಕ ನೇರ ಪ್ರಜಾಪ್ರಭುತ್ವಕ್ಕೆ ಅವಕಾಶ ಕಲ್ಪಿಸುವ ಇರಾದೆಯನ್ನು ಗಡಾಫಿ ವ್ಯಕ್ತಪಡಿಸಿದ್ದರು. ಆದರೆ ಅವರು ಈ ಸಮಿತಿಗಳನ್ನು ತಮ್ಮ ರಾಜಕೀಯ ದಮನಕ್ಕೆ ಬಳಸಿಕೊಂಡರು ಎಂಬುದು ವಿಶ್ಲೇಷಕರ ಟೀಕೆಯಾಗಿದೆ.
ಈ ನಡುವೆ ಸರ್ಕಾರದ ಪರವಾಗಿಯೂ ಕೆಲವರು ಬೀದಿಗಿಳಿದಿದ್ದು, ಆಡಳಿತಾರೂಢ ನಾಯಕರಿಗೆ ಬೆಂಬಲ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT