ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಚರ್ಚೆ- ಕೇಂದ್ರಕ್ಕೆ ಸವಾಲು

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡರು ಮತ್ತು ರಾಬರ್ಟ್ ವಾದ್ರಾ ಅವರು ಭ್ರಷ್ಟಾಚಾರ ಆರೋಪದಿಂದ ಮುಕ್ತವಾಗಿ ಹೊರಬಂದ ಬಳಿಕ ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ) ಸಂಘಟನೆ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಉತ್ತರಿಸಲಾಗುವುದು ಎಂದು ಭಾನುವಾರ ಇಲ್ಲಿ ಹೇಳಿದ್ದಾರೆ.

ಕೇಜ್ರಿವಾಲ್ ಅವರ ಸ್ವಯಂ ಸೇವಾ ಸಂಸ್ಥೆಗೆ (ಎನ್‌ಜಿಒ) ಬರುತ್ತಿರುವ ದೇಣಿಗೆ ಸೇರಿದಂತೆ ಕೆಲ ಪ್ರಶ್ನೆಗಳಿಗೆ ಅವರು ಉತ್ತರಿಸಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಶನಿವಾರ ನೀಡಿದ್ದ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

`ಪ್ರಧಾನಿ ಸಿಂಗ್ ಮತ್ತು ವಾದ್ರಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಅವರು ಮೊದಲು ಅದಕ್ಕೆ ಉತ್ತರಿಸಲಿ. ಬಳಿಕ ದಿಗ್ವಿಜಯ್ ಸಿಂಗ್ ಅವರು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರು ಸಾರ್ವಜನಿಕ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡುವಂತೆ ದಿಗ್ವಿಜಯ್ ಸಿಂಗ್ ಅವರಲ್ಲಿ ಮನವಿ ಮಾಡುತ್ತೇನೆ~ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.

`ಒಬ್ಬರಿಗೊಬ್ಬರು ಪ್ರಶ್ನೆ ಕೇಳಿಕೊಳ್ಳಲು ಸಿದ್ಧ. ವೈಯಕ್ತಿಕ ಮತ್ತು ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದಂತೆ ನಾಗರಿಕರು ನಮ್ಮನ್ನು ಪ್ರಶ್ನಿಸಲಿ. ಇದಕ್ಕೆ ದಿಗ್ವಿಜಯ್ ಸಿಂಗ್ ಸಿದ್ಧರಿದ್ದಾರೆಯೇ? ಇದಕ್ಕಾಗಿ ಅವರು ಯುಪಿಎ ಅಧ್ಯಕ್ಷೆ, ಪ್ರಧಾನಿ ಅವರನ್ನು ಮನವರಿಕೆ ಮಾಡಿಲು ಸಾಧ್ಯವಿಲ್ಲ ಎಂದಾದರೆ, ಇದನ್ನೆಲ್ಲ ಅವರು ಜುಜುಬಿ ಪ್ರಚಾರಕ್ಕಾಗಿ ಮತ್ತು ಜನರ ಗಮನ ಬೇರೆಡೆ ಸೆಳೆಯಲು ಮಾಡುತ್ತಿದ್ದಾರೆ~ ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ.

`ನಮ್ಮ ವೈಯಕ್ತಿಕ ಜೀವನದ ಬಗ್ಗೆ ಅವರು ಎಷ್ಟಾದರೂ ಪ್ರಶ್ನೆ ಕೇಳಲಿ ಅದಕ್ಕೆ ಉತ್ತರಿಸಲು ನಾವು ಸಿದ್ಧ. ಬಳಿಕ ನಾವು ಕೇಳುವ ಪ್ರಶ್ನೆಗಳಿಗೆ ಅವರು ಸಾರ್ವಜನಿಕವಾಗಿ ಉತ್ತರ ನೀಡಬೇಕು~ ಎಂದಿದ್ದಾರೆ.
`ಬ್ಲಾಕ್‌ಮಟ್ಟದ ವಕ್ತಾರ ಸಾಕು~: `ಅರವಿಂದ ಕೇಜ್ರಿವಾಲ್ ಅವರು ಮಾಡುತ್ತಿರುವ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ನಮ್ಮ ಪಕ್ಷದ ಬ್ಲಾಕ್‌ಮಟ್ಟದ ವಕ್ತಾರರೊಬ್ಬರು ಸಾಕು~ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ಅವರು ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿ ಮಧ್ಯೆ ನಾಟಕೀಯ ಬೆಳವಣಿಗೆ (ಘಾಜಿಯಾಬಾದ್ ವರದಿ): ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಇಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ಮಹಿಳೆಯೊಬ್ಬರ ನೇತೃತ್ವದ ಒಂದು ಗುಂಪು ಅವರ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆಯಿತು.

ನವದೆಹಲಿಯಲ್ಲಿ ಈಚೆಗೆ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ತಮ್ಮ ಬೆಂಬಲಿಗರ ಮೇಲೆ ನಡೆಸಿದ ಪೊಲೀಸ್ ದೌರ್ಜನ್ಯದಲ್ಲಿ ಗಾಯಗೊಂಡವರನ್ನು ಕೇಜ್ರಿವಾಲ್ ಅವರು ಮಾಧ್ಯಮದವರಿಗೆ ಪರಿಚಯಿಸುತ್ತಿದ್ದರು. ಈ ವೇಳೆ ಆ್ಯನಿ ಕೊಹ್ಲಿ ಎನ್ನುವ ಹಿರಿಯ ಮಹಿಳೆ ಸೇರಿದಂತೆ ಕೆಲವರು ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು.
 
ಭ್ರಷ್ಟಾಚಾರ ವಿರುದ್ಧದ ಹೋರಾಟದ ಹೆಸರಿನಲ್ಲಿ ಜನರನ್ನು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಒಳಗೆ ನುಗ್ಗಲು ಯತ್ನಿಸಿದ ಅವರನ್ನು ಪೊಲೀಸರು ತಡೆದರು.

ಕೇಜ್ರಿವಾಲ್‌ಗೆ ಬೆಂಬಲ(ಫರೂಕಾಬಾದ್ ವರದಿ): ಕೇಜ್ರಿವಾಲ್‌ಗೆ ಬೆದರಿಕೆಯೊಡ್ಡಿದ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯನ್ನು ಖಂಡಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್ ಗುಂಪು) ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಶಂಕರ್ ಜೋಷಿ, ನವೆಂಬರ್ 1ರಂದು ಐಎಸಿ ಇಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಭದ್ರತೆ ಒದಗಿಸಲು ನಿರ್ಧರಿಸಿದೆ.

ಸಚಿವ ಖುರ್ಷಿದ್ ಹಜ್ ಯಾತ್ರೆ ರದ್ದು
ನವದೆಹಲಿ (ಪಿಟಿಐ):
ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ತಮ್ಮ ಜಾಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ಮೂಲಕ ನಿಧಿ ದುರಪಯೋಗಪಡಿಸಿಕೊಂಡ ಆರೋಪದಿಂದಾಗಿ ತಮ್ಮ ಹಜ್ ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಒಂದು ವಾರ ನಡೆಯುವ ಹಜ್‌ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದ ಅವರು ಮುಂದಿನ ವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುವ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಖುರ್ಷಿದ್ ಮತ್ತು ಅವರ ಪತ್ನಿ ನಡೆಸುತ್ತಿರುವ ಜಾಕೀರ್ ಹುಸೇನ್ ಸ್ಮಾರಕ ಟ್ರಸ್ಟ್‌ನ ಮೂಲಕ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.

ಎನ್‌ಜಿಒ ವಿರುದ್ಧ ಕೇಂದ್ರ ಕ್ರಮ ಕೈಗೊಳ್ಳಲಿ- ಎಸ್‌ಪಿ

ರಾಂಪುರ (ಪಿಟಿಐ):
ಅಂಗವಿಕಲರಿಗಾಗಿ ಮೀಸಲಾಗಿರುವ ಯೋಜನೆಯ ಪ್ರಯೋಜನ ಪಡೆಯಲು ನಕಲಿ ಹೆಸರುಗಳನ್ನು ಬಳಸಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ  ಸಲ್ಮಾನ್ ಖುರ್ಷಿದ್ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದನ್ನು ಉತ್ತರ ಪ್ರದೇಶ ಸಚಿವ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪ್ರಶ್ನಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ವಿರುದ್ಧವೂ ಹರಿಹಾಯ್ದ ಖಾನ್, ಅಗ್ಗದ ಪ್ರಚಾರ ಪಡೆಯುವುದಕ್ಕಾಗಿ ಮತ್ತೊಬ್ಬರ ಮೇಲೆ ಆರೋಪ ಹೊರಿಸುವ ಹವ್ಯಾಸವನ್ನು ಅವರು ರೂಢಿಸಿಕೊಂಡಿದ್ದಾರೆ~ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT