ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿಷ್ಕಾರ: ತುಚ್ಛ ಪ್ರವೃತ್ತಿ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಗದ್ಯಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಅತ್ಯಂತ ಅಮಾನವೀಯ. ನಾಗರಿಕ ಸಮಾಜ ತಲೆತಗ್ಗಿಸುವಂತಹದು. 

ದಲಿತ ಸಂಘರ್ಷ ಸಮಿತಿಯ ನಾಮಫಲಕಕ್ಕೆ ರಾಡಿ ಹಚ್ಚಿದ ಘಟನೆ, ಗ್ರಾಮದ ಸೌಹಾರ್ದ ಕದಡಿರುವುದು ದುರದೃಷ್ಟಕರ. ದೇಶಕ್ಕೆ ಸ್ವಾತಂತ್ರ್ಯ ಬಂದು ಆರೂವರೆ ದಶಕ ಕಳೆದರೂ ನಮ್ಮ ಗ್ರಾಮೀಣ ಜನರ ಮನೋಧರ್ಮ ಬದಲಾಗಿಲ್ಲ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ದುರ್ಬಲರನ್ನು ಮೇಲ್ವರ್ಗದ ಜನರು ಒಟ್ಟುಗೂಡಿ ಮೂಲೆಗೆ ಒತ್ತರಿಸುವ ಪ್ರವೃತ್ತಿ ಅಕ್ಷಮ್ಯ. ಸಾಮಾಜಿಕವಾಗಿ ಬಹಿಷ್ಕರಿಸಿದ ಬಗ್ಗೆ ನೇರವಾಗಿ ಹೇಳದೆ, ನೋಟವನ್ನೇ ಚೇಳಿನ ಕೊಂಡಿಯಂತೆ ಬಳಸಿರುವುದು ಮತ್ತೂ ಆಘಾತಕಾರಿ. ಕೂಲಿ ಮಾಡಿದರೆ ಒಪ್ಪೊತ್ತಿನ ಗಂಜಿಗೆ ಉಂಟು, ಇಲ್ಲದಿದ್ದರೆ ಉಪವಾಸ ಎಂಬಂತಿರುವ ತಳ ಸಮುದಾಯದ ಜನರನ್ನು ಈ ರೀತಿ ಕಾಡುವುದು ಕ್ರೌರ್ಯದ ಪರಮಾವಧಿ.

ತ್ವೇಷಮಯ ವಾತಾವರಣ ತಿಳಿಗೊಳಿಸಲು ಜಿಲ್ಲಾ ಆಡಳಿತ, ನಾಲ್ಕು ಸಲ ಸಭೆ ನಡೆಸಿದರೂ ಫಲ ಕಂಡಿಲ್ಲ ಎಂಬುದು ಜಾತಿಯೊಂದಿಗೆ ಅಂಟಿಕೊಂಡಿರುವ ಅಹಂಕಾರವನ್ನು ಎತ್ತಿ ತೋರಿಸುತ್ತದೆ. ಇಂತಹ ಅಸಹನೆ ಸಲ್ಲದು. ಅಪನಂಬಿಕೆಯು ಎರಡೂ ಕಡೆಯವರ ನಡುವೆ ಎಬ್ಬಿಸಿರುವ ಗೋಡೆಯನ್ನು ಒಡೆಯುವ ಕೆಲಸ ತುರ್ತಾಗಿ ಆಗಬೇಕಾಗಿದೆ.

ಸಾಮಾಜಿಕ ಬಹಿಷ್ಕಾರದಿಂದ ನಲುಗಿದ ಜನರ ಅಹವಾಲುಗಳನ್ನು ಅಧಿಕಾರಿಗಳು ಆಲಿಸಿರುವುದು ಬಿಟ್ಟರೆ ಸಮಸ್ಯೆ ಜೀವಂತವಾಗಿ ಉಳಿದಿದೆ. ಸಮಸ್ಯೆ ಪರಿಹರಿಸಲು ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಆಸ್ಥೆ ವಹಿಸಿದಂತೆ ಕಾಣುವುದಿಲ್ಲ.  ಇದು, ಹೊಣೆಗಾರಿಕೆಯಿಂದ ನುಣುಚಿ­ಕೊಳ್ಳುವ ‘ಜಾಣ’ ನಡೆಯಲ್ಲದೇ ಮತ್ತೇನೂ ಅಲ್ಲ.

ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದರೆ ಆ ಘಟನೆಗೆ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರನ್ನೇ ಹೊಣೆ ಮಾಡುವುದಾಗಿ ಬಹಳ ಹಿಂದೆಯೇ ಸರ್ಕಾರ ಹೇಳಿದೆ. ಪರಿಶಿಷ್ಟರಿಗೆ ಜಿಲ್ಲಾ ಆಡಳಿತ ಆಸರೆಯಾಗಿ ನಿಲ್ಲಬೇಕು ಎಂಬುದು ಇದರ ಉದ್ದೇಶ. ಪರಿಶಿಷ್ಟರ ರಕ್ಷಣೆಗೆ ಕಾಯ್ದೆ, ಕಟ್ಟಲೆಗಳು ಇದ್ದರೂ ಅವುಗಳೆಲ್ಲ ಕಾಗದ ಮೇಲಷ್ಟೇ ಉಳಿದಿವೆ ಎಂಬುದಕ್ಕೆ ಇಂತಹ ಘಟನೆಗಳು ಪುಷ್ಟಿ ನೀಡುತ್ತವೆ.

ಸಾಮಾಜಿಕ ಪರಿವರ್ತನೆ ಮತ್ತು ಸಾಮರಸ್ಯ ಮೂಡಿಸುವಂತಹ ಕೆಲಸವನ್ನು ಬರೀ ಅಧಿಕಾರಿಗಳ ತಲೆಗೆ ಕಟ್ಟಿದರೆ ಅದರಿಂದ ನಿರೀಕ್ಷಿತ ಪ್ರಯೋಜನ ಸಿಗಲಾರದು. ಸಮಾಜದಲ್ಲಿ ಸಮಾನತೆ, ಶಾಂತಿ, ನೆಮ್ಮದಿಯ ವಾತಾವರಣ ಇರಬೇಕು ಎಂದು ಬಯಸುವ ಪ್ರಜ್ಞಾವಂತರು, ಸಂಘ–ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಬೇಕು.

ಕೆಲವು ರಾಜಕಾರಣಿಗಳಿಗೆ ಜಾತಿಯೇ ಅಧಿಕಾರದ ಮೆಟ್ಟಿಲು. ಜಾತಿ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸವನ್ನು ಅವರು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರಗಳಿಗೆ ತಡೆಯೊಡ್ಡುವ ಪ್ರಯತ್ನಗಳೂ ಆಗಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟಗಳಿಗೆ ಪರಿವರ್ತನೆಯೇ ಪರಿಣಾಮಕಾರಿಯಾದ ಮದ್ದು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT