ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವದ ದನಿ ಅರಾಜಕ ಧೋರಣೆ

Last Updated 3 ಜೂನ್ 2012, 5:50 IST
ಅಕ್ಷರ ಗಾತ್ರ

 ನಿಮ್ಮ ಬಗ್ಗೆ ಹೇಳಿ. ನಿಮ್ಮ ಓದು, ವಿದ್ಯಾಭ್ಯಾಸ, ಮನೆ ಇತ್ಯಾದಿ?  
 ನಾನು ಟೀಚರುಗಳ ಕುಟುಂಬದಲ್ಲಿ ಹುಟ್ಟಿದವಳು. ನನ್ನ ತಾಯಿ ಸ್ಕೂಲಿನಲ್ಲಿ ಫ್ರೆಂಚ್ ಕಲಿಸುತ್ತಿದ್ದರು. ಮನೆಯಲ್ಲಿ ನನಗೆ ಸಿಕ್ಕ ವಾತಾವರಣದಿಂದ ಪುಸ್ತಕ, ಓದುಗಳೆಲ್ಲಾ ಬಹಳ ಸಣ್ಣ ವಯಸ್ಸಿನಲ್ಲಿಯೇ ಒದಗಿದವು. ಇದರಿಂದ ತುಂಬ ಸಣ್ಣ ಪ್ರಾಯದಲ್ಲಿಯೇ ನನಗೆ ಸಾಹಿತ್ಯದ ಕಡೆ ಆಸಕ್ತಿ ಹುಟ್ಟಲು ಕಾರಣವಾಯಿತು. ನನ್ನ ತಾಯಿ ನನಗೆ ಓದಲು ತುಂಬಾ  ಪ್ರೋತ್ಸಾಹಿಸಿದರು. ಕಾವ್ಯವೆಂದರೆ ನನಗೆ ಪ್ಯಾಶನ್ ಮತ್ತು ವೃತ್ತಿ ಎರಡೂ ಆಗಿದೆ.

 ನಿಮ್ಮ ಪದ್ಯಗಳನ್ನು ಕೇಳುತ್ತಿದ್ದರೆ ಅದರಲ್ಲಿ ವಿಷಣ್ಣ ದನಿ ಇದ್ದಂತೆ ಅನ್ನಿಸುತ್ತದೆ...
 ವಿಷಣ್ಣತೆ  ಹ್ಞಾಂ, ಹೌದು ಅದು ನನ್ನ ಕಾವ್ಯದಲ್ಲಿದೆ. ಒಂದು ರೀತಿಯಿಂದ ಹೇಳುವುದಾದರೆ ಅದು ಕಾವ್ಯದ ಆಂತರ್ಯವೂ ಆಗಿದೆ. ಇದಕ್ಕೆ ಹೊರಗಿನ ಕಾರಣಗಳನ್ನು ಕೊಡುವುದಾದರೆ, ಸ್ಪೇನ್‌ನಲ್ಲಿದ್ದ ರಾಜಕೀಯ ಅಸ್ಥಿರತೆ. ಉಂ.. ತುಂಬಾ ಕಷ್ಟದ ಸಮಯ ಅದು.. 1970ರ ನಂತರವೇ ಸ್ವಲ್ಪ ಸ್ವಾತಂತ್ರ್ಯದ ಗಾಳಿ ಬೀಸಲಾರಂಭಿಸಿತು. 1973ರಲ್ಲಿ ಸರ್ವಾಧಿಕಾರ ಕೊನೆಯಾಯಿತು.

ಆ ನಂತರದ ಕಾವ್ಯದ ಮೊದಲ ತಲೆಮಾರಿನವಳಾದ ನಾನು ಒಂದು ರೀತಿಯಲ್ಲಿ ಈ ಸಂಕಷ್ಟದ ಸ್ಥಿತಿ ದಾಟಿದ ಕಾಲವನ್ನು ಅನುಭವಿಸಿದ್ದು, ಅಂತಹ ಸ್ವಾತಂತ್ರ್ಯದ ಅನುಭವಗಳಿಗೆ ಒಡ್ಡಿಕೊಂಡಿದ್ದು ವಿಶಿಷ್ಟ ಎನ್ನಿಸುತ್ತಿದೆ.... ಇನ್ನು ಒಳಗಿನ ಮಾತಿಗೆ ಬಂದರೆ, ಕಾವ್ಯ ಎನ್ನುವುದು ಭಾವನೆಗಳ ಜೊತೆ ಇರುವಂತದ್ದು; ಅದರೊಂದಿಗೆ ಕೆಲಸ ಮಾಡುವಂತದ್ದು. ನಿಮ್ಮಳಗಿನ ಭಾವನೆಯಿಂದ ಬದುಕು ಎಷ್ಟು ಅಲ್ಪ ಎನ್ನುವುದನ್ನು ಅರಿಯಬಹುದು. ಕಾಲದ ವೇಗವನ್ನು ನೀವು ನಿಲ್ಲಿಸಲಾರಿರಿ, ನೀವು ಅಸಹಾಯಕರು....

ನಿಮ್ಮ ವಿಷಾದದ ದನಿ ನಿಮ್ಮ ನಾಡಿನ ರಾಜಕೀಯ ಒತ್ತಡದಿಂದ ಉಂಟಾದದ್ದೇ ಅಥವಾ ಒಳಗಿನ ಅಧ್ಯಾತ್ಮದ ತಹತಹವೇ? 
 ಎಪ್ಪತ್ತು ವರ್ಷದ ಸ್ಪೇನಿನ ಚರಿತ್ರೆ ನೋಡಿದರೆ ರಾಜಕೀಯ ಪಲ್ಲಟಗಳು, ಅಸ್ಥಿರತೆ ಸಾಮಾನ್ಯವಾಗಿದ್ದಿತು. ಈ ಕಾರಣಗಳು ಸ್ವಲ್ಪಮಟ್ಟಿಗೆ ಮೂಲಾಧಾರವಿರಬಹುದು. ಆಮೇಲೆ ಈಗ ಯೂರೋಪಿನಲ್ಲೆಲ್ಲಾ ಆರ್ಥಿಕ ಹಿಂಜರಿತ ಉಂಟಾಗಿದೆ. ಕವಿಯಾದವರು ಇಂದಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾತನಾಡಲೇ ಬೇಕು, ನೋಡಿ.

 ಸ್ಪೇನಿನಲ್ಲಿ ಸಾಮಾನ್ಯವಾಗಿ ಎರಡು ಮೂರು ಭಾಷೆ ಬಲ್ಲವರು ಹೆಚ್ಚು. ಸ್ಪೇನಿಗರು ಇದನ್ನು ಒತ್ತಾಯಪೂರ್ವಕವಾಗಿ ಅಂದರೆ ರಾಜಕೀಯ ಕಾರಣಗಳಿಂದ ಕಲಿಯುತ್ತಿದ್ದಾರೋ ಅಥವಾ ಜಾಗತೀಕರಣದ ಜಗತ್ತಿನ ಬೇಡಿಕೆಯಿಂದಾಗಿಯೋ? ನೀವೂ ಸಹ ಇಂಗ್ಲಿಷ್ ಕಲಿತಿದ್ದೀರಿ, ಅದರ ಹಿಂದೆ ರಾಜಕೀಯ ಒತ್ತಡಗಳೇನಾದರೂ ಇದೆಯಾ? ಅಂದರೆ ಇಂಗ್ಲಿಷ್‌ನಲ್ಲಿ ಬರೆಯದಿದ್ದರೆ ಗ್ಲೋಬಲ್ ಆಗುವುದಿಲ್ಲ ಎನ್ನುವ ಭಾವನೆ..

 ಭಾಷೆಯ ಸಂಗತಿ ಏನಿದೆ ಅದನ್ನು ಕವಿಯಾದವರಷ್ಟೇ ಅಲ್ಲ ಪ್ರಾಯಶಃ ಎಲ್ಲರೂ ಎದುರಿಸಲೇಬೇಕಾದ ಸಂಗತಿ. ಸ್ಪೇನಿನಲ್ಲಿ `ಲಿಂಗ್ವಾ ಫ್ರಾಂಕಾ` ಇದೆ. ಆದರೂ ಮೆಕ್ಸಿಕನ್ ಭಾಷೆ ಇಲ್ಲಿನ ಮೂಲ ಭಾಷೆ. ಸ್ಪೇನ್‌ನಲ್ಲಿ ಇಂಗ್ಲಿಷ್, ಫ್ರೆಂಚ್, ಇಟಾಲಿಯನ್ ಮುಂತಾದ ಯುರೋಪಿಯನ್ ಭಾಷೆಗಳನ್ನು ಕಲಿಯುವ, ಅವುಗಳ ಪರಿಚಯ ಮಾಡಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಹೇಳಬೇಕು.
 
ಉಂ..ಹೌದು ನಾನು ಇಂಗ್ಲಿಷ್ ಬಳಸುತ್ತೇನೆ. ಇಂದು ಇಂಗ್ಲಿಷ್ ಲಿಂಗ್ವಾ ಫ್ರಾಂಕಾ. ಏನೂ ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಒಳಮನಸ್ಸಿನ ಉತ್ತರ ಕೇಳುವುದಾದರೆ ನಾನು ಸ್ಪ್ಯಾನಿಷ್ ಭಾಷೆಯಲ್ಲೇ ಬರೆಯಲು ಇಚ್ಛಿಸುತ್ತೇನೆ.
 
 ಈ ಅಂತಾರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕೇಳಿದ ಯುರೋಪಿಯನ್ ಕವಿಗಳ ಕವಿತೆಗಳನ್ನು ನೋಡುತ್ತಿದ್ದರೆ ಸಾಮಾಜಿಕತೆಯಿಂದ ದೂರ ಸರಿದು ವೈಯುಕ್ತಿಕ ಅಭಿವ್ಯಕ್ತಿಯಲ್ಲೇ ಹೆಚ್ಚು ಆಸಕ್ತವಾದಂತೆ ತೋರುತ್ತಿದೆ. ಇದು ಯಾಕೆ? ಇಪ್ಪತ್ತನೇ ಶತಮಾನದ ಆಧುನಿಕತೆ ಎನ್ನುವುದು ಮತ್ತೆ ಪುನಃ ಎದ್ದು ಬಂದಂತೆ ಕಾಣುತ್ತಿದೆ ಅಲ್ಲವೆ?
 
 ನೀವು ಹೇಳಿದ್ದು ಸರಿ ಎನ್ನಿಸುತ್ತೆ. ಬಹುಶಃ ನೀವು ಭಾರತೀಯರಾದ್ದರಿಂದ ಕನ್ನಡಿಗರಾದ್ದರಿಂದ ಈ ರೀತಿ ಹೇಳುತ್ತಿದ್ದೀರಿ, ತುಂಬಾ ಧನ್ಯವಾದ.. ಯುರೋಪಿನ ಇಂದಿನ ಸ್ಥಿತಿಗತಿಗಳನ್ನು ನೋಡಿ, ಅಲ್ಲಿ ಪಲ್ಲಟಗಳಾಗುತ್ತಿವೆ. ಮುಖ್ಯವಾಗಿ ಆರ್ಥಿಕ ಹಿಂಜರಿತ ಜನಜೀವನವನ್ನು ಪ್ರಭಾವಿಸಿದೆ.

ಬದಲಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳಿಗನುಗುಣವಾಗಿ ಬದಲಾವಣೆ ಎನ್ನುವುದು ಅಲ್ಲಿ ಆಗುತ್ತಲೇ ಇದೆ. ಹಾಗೆಯೇ ರಾಜಕೀಯ ಅಸ್ಥಿರತೆ ಕೂಡ ನಮ್ಮನ್ನು ತಟ್ಟುತ್ತಿದೆ. ಇಂತಹ ಸನ್ನಿವೇಶದಲ್ಲಿ ನೀವು ನಿಮ್ಮಂತೆ ಯೋಚಿಸುತ್ತೀರಿ ಅಲ್ಲವೇ? ಆದರೆ ಬದಲಾವಣೆ ಇಲ್ಲ ಎನ್ನಬೇಡಿ. ಇದು `ಕಲ್ಯಾಣ`ದ ಕಾಲ ಎಂತಲೂ ಅನ್ನಿಸುತ್ತದೆ. ಏಕೆಂದರೆ ಇಂದು ಬಡವರೆನ್ನಿಸಿಕೊಂಡವರು ಸಮಕಾಲೀನ ಸಂಗತಿಗಳಿಗೆ ಸ್ಪಂದಿಸುತ್ತಿದ್ದಾರೆ, ಪ್ರತಿಕ್ರಿಯಿಸುತ್ತಿದ್ದಾರೆ.
 
ಗೋಳೀಕರಣದ ಲಕ್ಷಣ ಎಂದರೆ ಜಗತ್ತನ್ನು ಒಂದು ಎಂದು ಭಾವಿಸುವುದು ಎನ್ನಲಾಗುತ್ತದೆ. ಆದರೆ ಅದರ ಇನ್ನೊಂದು ಆಯಾಮ ಪ್ರಾದೇಶಿಕತೆ ಎನ್ನಿಸುವುದಿಲ್ಲವೆ? ಅಂದರೆ ಗೋಳೀಕರಣದ ದೇಶವ್ಯಾಪ್ತಿ ಹಿರಿದಾಗಿದ್ದರೂ ಮನುಷ್ಯ ಅದಕ್ಕೆ ಪ್ರತಿಕ್ರಿಯಿಸುತ್ತಿರುವುದು ತಂತಮ್ಮ ಪ್ರಾದೇಶಿಕ ನೆಲೆಗಳಿಂದ ಅಲ್ಲವೆ?

 ಹೌದು, ಅದು ನಿಜ. ನಾವೆಲ್ಲಾ ಜಗತ್ತಿನ ಪ್ರಜೆಗಳು. ಒಂದೆಡೆಯಿಂದ ಪ್ರಾದೇಶಿಕ ಭಾಷೆಗಳು ಹಾಗೂ ಪ್ರಾದೇಶಿಕತೆಗಳು ತಲೆಯೆತ್ತುತ್ತಿವೆ ಎನ್ನುವುದು ಈ ಕಾಲದ ವಿದ್ಯಮಾನ. ಪ್ರಾದೇಶಿಕ ಭಾಷೆಗಳು ಮತ್ತು ಪ್ರಾದೇಶಿಕತೆಗಳು ಗಟ್ಟಿಗೊಳ್ಳುತ್ತಿವೆ. ತಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕೆನ್ನುವ ಆಶೆ ಹೊರಹೊಮ್ಮುತ್ತಿದೆ.

ಮಧ್ಯಕಾಲದಲ್ಲಿನ ಯುರೋಪು ಅಂದು ಇದ್ದುದನ್ನು ನೆನೆದರೆ ನಮ್ಮ ಸ್ಪೇನ್ ಎನ್ನುವುದು ಪುಟ್ಟ ಮುಗ್ಧ ದೇಶವಾಗಿತ್ತು. ಈಗ ಜಾಗತೀಕರಣದಿಂದ ಎಲ್ಲ ಬದಲಾಗಿದ್ದು, ನಾನು ಹದಿನಾರು ಗಂಟೆ ಪ್ರಯಾಣ ಮಾಡಿದರೆ ಇಂಡಿಯಾದಲ್ಲಿರಬಹುದು. ಇದು ಅನುಕೂಲ, ನಿಜ ಆದರೆ ಒಂದು ರೀತಿ ಸ್ಕಿಝೋಫ್ರೇನಿಕ್ ಅಂತಲೂ ಅನ್ನಿಸುತ್ತದೆ.
 
ಹೌದು, ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಗುರುತಿಸಿಕೊಳ್ಳುವ ಸಂದರ್ಭದಲ್ಲಿ ನಮ್ಮ ಪ್ರಾದೇಶಿಕತೆ, ನಮ್ಮ ಭಾಷೆ ಬಳಕೆಯಾಗುತ್ತವೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಇವುಗಳ ಮಧ್ಯೆ ಒಂದು ಸಂಘರ್ಷ ಇದ್ದೇ ಇದೆ. 
  
ಇಂದಿನ ಸ್ಪ್ಯಾನಿಷ್ ಕಾವ್ಯದ ಬಗ್ಗೆ ಹೇಳಿ.
 ಯುದ್ಧಾ ನಂತರದ ಸ್ಪ್ಯಾನಿಷ್ ಕಾವ್ಯ ಶಕ್ತಿಶಾಲಿಯಾಗಿದೆ. ಈಗ ಸ್ಪೇನಿನಲ್ಲೆಗ ಕಾವ್ಯದ ಹಬ್ಬಗಳನ್ನು ಸಂಟಿಸುತ್ತಿದ್ದಾರೆ. ಕಾವ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಹೊಸ ತರದಲ್ಲಿ ಕಾವ್ಯವನ್ನು ಒಳಗೊಳ್ಳುವ ಯತ್ನಗಳು ನಡೆಯುತ್ತಿವೆ. ಸ್ಪೇನಿನಲ್ಲೆಗ ಹಲವಾರು ಸ್ಕೂಲ್‌ಗಳಿವೆ.

ಯುವಕವಿಗಳು ಒಂದು ಕಡೆಯಿಂದ ಸ್ಫೂರ್ತಿ ಪಡೆದರು ಎನ್ನಲಾಗದು. ಅವರು ಬೇರೆ ಬೇರೆ ಮಾರ್ಗಗಳಿಂದ ತಮಗೆ ಬೇಕಾದ್ದನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅನೇಕ ಮಾರ್ಗಗಳ ಅನೇಕ ಅಂಶಗಳು ಯುವಕವಿಗಳ ಕಾವ್ಯದಲ್ಲಿದೆ ಎನ್ನಬಹುದು.

 ಪೋಸ್ಟಮಾಡರ್ನ್ ತರವೇ?
 ಉಂ.ಹೌದು, ಇಲ್ಲ. ನಾವೀಗ ಬೇರೆ ಬೇರೆ ಸ್ಕೂಲ್‌ಗಳಿಂದ ಹೆಕ್ಕಿಕೊಂಡು ಕಾವ್ಯ ಕಟ್ಟುತ್ತಿದ್ದೇವೆ ಎಂದು ಹೇಳಿದೆನಲ್ಲಾ ಹಾಗಾಗಿ ಇದರಲ್ಲಿ ಒಂದು ಪ್ರಭಾವ ಇಲ್ಲ. ನೀವು ಹೇಳಿದಂತೆ ಒಂದು ರೀತಿ ಬಹುತ್ವ ಇನ್ನೊಂದೆಡೆ ಅರಾಜಕ ಎನ್ನಬಹುದಾದ ಧೋರಣೆಗಳು ಇಲ್ಲಿವೆ.

 ಸ್ಪೇನ್ ಸಾಹಿತ್ಯದಲ್ಲಿ ಜನಪ್ರಿಯವಾದ `ಮ್ಯೋಜಿಕ್ ರಿಯಲಿಸಂ~ ಬಗ್ಗೆ ಹೇಳಿ. ಕಾವ್ಯದಲ್ಲಿ ಅದು ಇದೆಯೇ? 
 ನಿಜ ಹೇಳಬೇಕೆಂದರೆ ಈ ತಂತ್ರ ಸ್ಪೇನಿನ ಬರಹಗಾರರ ಅಸ್ಮಿತೆಯಂತಿದೆ. ಮಾರ್ಕ್ವ್ೆ ಮುಂತಾದವರೆಲ್ಲ ಬರೆದದ್ದನ್ನು ನೆನೆದರೆ.. ಕಾವ್ಯದಲ್ಲಿ ಉಹುಂ ಅದರ ಪ್ರಭಾವ ಇದೆಯೋ ಇಲ್ಲವೋ ನನಗೆ ತಿಳಿಯದು.
 
ಲೋರ್ಕಾ ಬಗ್ಗೆ ಹೇಳಿ
ಲೋರ್ಕಾ ಒಬ್ಬ ಜೀನಿಯಸ್. ವಿದೇಶಗಳಲ್ಲಿ ಅವನ ಬರಹಗಳ ಬಗ್ಗೆ ಸಾಕಷ್ಟು ಒಲವಿದೆ. ಅವನೆಷ್ಟು ಬಲಶಾಲಿ ಎಂದರೆ ಒಂದೊಮ್ಮೆ ನೋಡುವಾಗ ಸ್ಪೇನಿನ ಯಾವುದೇ ಲೇಖಕ ಬರೆಯುತ್ತಿದ್ದಾನೆಂದರೆ ಲೋರ್ಕಾನನ್ನು ಕೃತಿಚೌರ್ಯ ಮಾಡುತ್ತಿದ್ದಾನೆ ಎನ್ನುವಷ್ಟು ಅವನು ಪ್ರಭಾವಶಾಲಿ..

ರಾಖೆಲ್‌ಲಾನ್ಸರಾಸ್ ಸ್ಪ್ಯಾನಿಷ್ ಕವಯಿತ್ರಿ. 1973ರಲ್ಲಿ ಹುಟ್ಟಿದ ಈಕೆ ಇಂದಿನ ಸ್ಪ್ಯಾನಿಷ್ ಕಾವ್ಯದಲ್ಲಿ ಹೊಸ ತಲೆಮಾರಿನ ಕವಿಯಾಗಿ ಜನಮನ್ನಣೆ ಗಳಿಸುತ್ತಾ ಉತ್ತಮ ಕಾವ್ಯದ ಸೃಜನಶೀಲ ಮಾದರಿಗಳನ್ನು ತೋರುತ್ತಾ ಬಂದಿದ್ದಾರೆ. ಈವರೆಗೂ `ಲೆಜೆಂಡ್ಸ್  ಪ್ರೊಮಾಂಟ್ರೀ`, `ಡೈರಿ ಆಫ್ ಅ ಫ್ಲಾಶ್‌`, `ರೆಡ್ ವಾಟಲ್‌`, `ಐಸ್ ಮಿಸ್ಟ್‌` ಹಾಗೂ `ಕ್ರಾನೀರ` ಎಂಬ ಕವನ ಸಂಗ್ರಹಗಳನ್ನು ಹೊರತಂದಿದ್ದಾರೆ.

ಸ್ಪೇನ್ ಸೇರಿದಂತೆ ಮೆಕ್ಸಿಕೊ, ಕೊಲಂಬಿಯಾ, ಎಲ್ ಸಾಲ್ವಡಾರ್, ಚಿಲಿ, ಪೆರು ಮತ್ತು ಅರ್ಜೆಂಟಿನಾಗಳಲ್ಲಿ ಈಕೆಯ ಕವಿತೆಗಳು ಪ್ರಕಟಗೊಂಡಿವೆ.
 ಸ್ಪ್ಯಾನಿಷ್ ಕಾವ್ಯದ ಬಗ್ಗೆ ಹೇಳುವುದಾದರೆ ಸ್ಪ್ಯಾನಿಷ್ ಅಂತರ್ಯುದ್ಧ 1939ರಲ್ಲಿ ಕೊನೆಗೊಳ್ಳುತ್ತಿದ್ದ ಸಮಯದಲ್ಲಿ ಸ್ಪ್ಯಾನಿಷ್ ಕಾವ್ಯ ಊನಗೊಂಡ ಸ್ಥಿತಿಯಲ್ಲಿತ್ತು.

ಒಂದೆಡೆಯಿಂದ ರಾಷ್ಟ್ರೀಯತೆಯ ಹಿನ್ನೆಲೆಯು ಕ್ರಾಂತಿಕಾರಿ ಕಾವ್ಯವನ್ನು ಸೃಷ್ಟಿಸಿದರೆ, ಇನ್ನೊಂದೆಡೆ, ಸ್ಪ್ಯಾನಿಷ್ ಕವಿಗಳು ಪೂರ್ಣವಾಗಿ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಂಡಂತೆ ತೋರುತ್ತಿರಲಿಲ್ಲ. ಸ್ಪ್ಯಾನಿಷ್ ಕವಿಗಳು ತಮ್ಮ ಸಾಮರ್ಥ್ಯವನ್ನು ಏಕೆ ತೋರುತ್ತಿಲ್ಲ ಎಂಬ ಪ್ರಶ್ನೆ ಆಗ ಹುಟ್ಟಿಕೊಂಡಿತ್ತು ಎನ್ನುವುದು ನಿಜ.
 

ಆದರೆ ಇದೇ ಸಂದರ್ಭದಲ್ಲಿ ಪರಂಪರೆಯನ್ನು ಅನುಸರಿಸಿ ಕಾವ್ಯವನ್ನು ಕಟ್ಟುವ ಹೊಸ ಕವಿಗಳ ಪಡೆಯೇ ಹುಟ್ಟುತ್ತಿತ್ತು. ರೆಮೊನ್ ಜಿಮೆನ್ೆ, ಲೋರ್ಕಾ, ರಾಫೆಲ್ ಆಲ್ಬರ್ಟಿ, ಲಿಯೊನ್, ಎಮಿಲಿಯೊ ಪ್ರಾದೊಸ್, ಹರ್ನಾನ್ ಡ್ೆ, ಪೇದ್ರೊ ಸಾಲಿನಾಸ್ ಇಂತಹ ಅನೇಕ ಕವಿಗಳೇ ಹುಟ್ಟಿಕೊಂಡರು ಎಂದು ಒಂದೇ ಉಸಿರಿನಲ್ಲಿ ಹೇಳಲಾಗುತ್ತದೆ.

ಈ ಎಲ್ಲಾ ಕವಿಗಳು ಇಪ್ಪತ್ತನೇ ಶತಮಾನದಲ್ಲಿ ಆಗಿಹೋದವರು. ಇವರು ಮೂರು ಹಂತದ ಸ್ಪ್ಯಾನಿಷ್ ಕಾವ್ಯವನ್ನು ಪ್ರತಿನಿಧಿಸುತ್ತಾರೆ. ಸಾಮಾನ್ಯವಾಗಿ ಸ್ಪ್ಯಾನಿಷ್ ಭಾಷಿಕರು ದೇಶಾಂತರಿಗಳೇ ಆಗಿರುವ ಕಾರಣ ಅವರು ಸಮಯಾನುಸಾರಿ ಎರಡು ಮೂರು ಭಾಷಿಕ ಸಂಸ್ಕೃತಿ, ಜೀವನಕ್ಕೆ ತೆರೆದುಕೊಂಡಿರುತ್ತಾರೆ. ಹೀಗಾಗಿಯೋ ಏನೋ ಸ್ಪ್ಯಾನಿಷ್ ಕಾವ್ಯ ಎಂದರೆ ದೇಶಾಂತರೀ ಕವಿಗಳ ಕಾವ್ಯವಾಗಿ ಕಾಣುತ್ತದೆ. ಅವರೊಡನೆ ನಡೆಸಿದ ಸಂದರ್ಶನ ಇಲ್ಲಿದೆ.  ಈ ವಿಶೇಷ ಸಂದರ್ಶನ ಮಾಡಿದವರು

 ಆರ್.ತಾರಿಣಿ ಶುಭದಾಯಿನಿ
 ಆರಿಫ್ ರಾಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT